Advertisement

ಹೈಕ ಹಿಂದುಳಿಯಲು ರಾಜಕಾರಣಿಗಳೇ ಕಾರಣ

12:24 PM Sep 23, 2018 | |

ಸಿಂಧನೂರು: ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿಯಲು ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಘಟಕದ ಸಹ ಕಾರ್ಯದರ್ಶಿ ಡಾ| ಕೆ.ಎಸ್‌.ಜನಾರ್ಧನ ಆಪಾದಿಸಿದರು.

Advertisement

ಹೈದ್ರಾಬಾದ್‌ ಕರ್ನಾಟಕ ಭಾಗದ ಸಮಗ್ರ ಅಭಿವೃದ್ದಿಗಾಗಿ ಭಾರತ ಕಮ್ಯುನಿಸ್ಟ್‌ ಪಕ್ಷದ ನೇತೃತ್ವದಲ್ಲಿ ನಡೆಸುತ್ತಿರುವ ಬೀದರ್‌ನಿಂದ ಬಳ್ಳಾರಿವರೆಗೆ ಜನಜಾಗೃತಿ ಜಾಥಾ ಶನಿವಾರ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ತಾಲೂಕು ಘಟಕದ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿದ ನಂತರ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ
ಅವರು ಮಾತನಾಡಿದರು. ದೇಶ-ವಿದೇಶಗಳಿಗೆ ಚಿನ್ನ ಕೊಡುವ ನಾಡು, ಅನ್ನದ ಬಟ್ಟಲು ಎಂದು ಹೆಸರಾದ ಹೈಕ ಪ್ರದೇಶದಲ್ಲಿ ಅನ್ನಕ್ಕೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಲೋಕಕ್ಕೆ ಉಕ್ಕನ್ನು ಕೊಟ್ಟ ಈ ಭಾಗದಲ್ಲಿ ವಸತಿ ಹಕ್ಕು ಇಲ್ಲದಂತಾಗಿದೆ. ವಿಶ್ವಕ್ಕೆ ಸಿಮೆಂಟ್‌ ನೀಡಿದ ನಾಡಿನ ಜನ ಮಣ್ಣಿನ ಮನೆಗಳಲ್ಲಿ ಬದುಕು ಸಾಗಿಸುವಂತಾಗಿದೆ. ಯುರೇನಿಯಂ ಗಣಿಗಾರಿಕೆ ಮಾಡುವ ನಮಗೆ ಮಾಹಿತಿ ತಂತ್ರಜ್ಞಾನ ಅಲಭ್ಯವಾಗಿದೆ. ಕೃಷ್ಣ, ಭೀಮಾ, ತುಂಗಭದ್ರೆಯರು ಹರಿದ ಈ ನೆಲದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಖೀಲ ಭಾರತ ಕಿಸಾನ್‌ ಸಭಾ ರಾಜ್ಯ ಘಟಕ ಅಧ್ಯಕ್ಷ ಪ್ರಸನ್ನಕುಮಾರ ಮಾತನಾಡಿ, ಪ್ರಾದೇಶಿಕ ಅಸಮಾನತೆ ನಿವಾರಿಸಲು ಸಮಿತಿ ವರದಿ ಸೇರಿದಂತೆ ಹಲವು ವರದಿಗಳ ಆಧಾರದ ಮೇಲೆ ಸರ್ಕಾರಗಳು ಕಳೆದ ಐದಾರು ದಶಕಗಳಿಂದ ರೂಪಿಸಿದ ಯೋಜನೆಗಳು ಜನರ ಸಂಕಷ್ಟಗಳಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿವೆ. 

ಈ ಭಾಗದ ಹಲವಾರು ಜನಸ್ನೇಹಿ ಮುಖಂಡರ, ಸಂಘ-ಸಂಸ್ಥೆಗಳ ಜನಾಂದೋಲನದ ಪರಿಣಾಮವಾಗಿ ಜಾರಿಗೆ ಬಂದ ಸಂವಿಧಾನದ 371 (ಜೆ) ಕಲಂ ತಿದ್ದುಪಡಿಯ ನಂತರವೂ ಪ್ರಾದೇಶಿಕ ಅಸಮಾನತೆ ಮುಂದುವರಿದಿರುವುದು ದುರದೃಷ್ಟಕರ. ಈ ಭಾಗದ ಜನಪ್ರತಿನಿ ಧಿಗಳ ಮತ್ತು ಅನುಷ್ಠಾನಾಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಅಭಿವೃದ್ಧಿಗೆ ಅಡ್ಡಿಯಾಗಿದೆ. ಹಲವು ದಶಕಗಳಿಂದ ಸಂಕಟ ಅನುಭವಿಸುತ್ತಿರುವ ಜನರೇ ಜಾಗೃತರಾಗಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು. 

ಉಪಾಧ್ಯಕ್ಷ ಮೌಲಾ ಮುಲ್ಲಾ, ಇಫಾr ಸಾಂಸ್ಕೃತಿಕ ಸಂಘಟನೆ ರಾಜ್ಯ ಅಧ್ಯಕ್ಷ ಷಣ್ಮುಖಸ್ವಾಮಿ, ಎಐಎಸ್‌ ಎಫ್‌ ರಾಜ್ಯ ಅಧ್ಯಕ್ಷ ಶಾಂತರಾಜ ಜೈನ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ, ಅಂಗನವಾಡಿ ನೌಕರರ ಫೆಡರೇಷನ್‌ ಜಿಲ್ಲಾ ಅಧ್ಯಕ್ಷ ಡಿ.ಎಚ್‌.ಕಂಬಳಿ, ಮುಖಂಡರಾದ ರಾಜಶೇಖರ, ಸಂಗಯ್ಯಸ್ವಾಮಿ, ವೆಂಕನಗೌಡ ಗದ್ರಟಗಿ, ಚಂದ್ರಶೇಖರ ಕ್ಯಾತನಟ್ಟಿ, ತಿಪ್ಪಯ್ಯಶೆಟ್ಟಿ, ಪ್ರಭಾವತಿ, ಗಿರಿಜಮ್ಮ, ಅಮರಮ್ಮ, ಆದಿಮನಿ ಲಕ್ಷ್ಮೀ, ಶಾಂತಾ ಗೊರೇಬಾಳ, ಗೌರಮ್ಮ ಅಲಬನೂರು, ಮಲ್ಲೇಶ ಬಡಿಗೇರ ಇದ್ದರು.

Advertisement

ಜಾಥಾ: ಬಹಿರಂಗ ಸಭೆಗೂ ಮುನ್ನ ತಾಲೂಕಿನ ಜವಳಗೇರಾ ಗ್ರಾಮಕ್ಕೆ ಆಗಮಿಸಿದ ಜಾಥಾವನ್ನು ಅಲ್ಲಿಯ ಕಾರ್ಯಕರ್ತರು ಸ್ವಾಗತಿಸಿಕೊಂಡರು. ತಾಪಂ ಮಾಜಿ ಸದಸ್ಯ ಚಂದ್ರುಭೂಪಾಲ ನಾಡಗೌಡ ಸೇರಿದಂತೆ ಜಾಥಾದ ಮುಖಂಡರ ನೇತೃತ್ವದಲ್ಲಿ ಬಹಿರಂಗ ಸಭೆ ನಡೆಯಿತು. ನಂತರ ಸಿಂಧನೂರು ಮೂಲಕ ಗುಂಜಳ್ಳಿ, ತುರ್ವಿಹಾಳ ಗ್ರಾಮಕ್ಕೆ ತೆರಳಿ ಜನಜಾಗೃತಿ ಮೂಡಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next