Advertisement
ಮಂಗಳವಾರ ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ನಗರದ ವಿವಿಧೆಡೆ ಹಾಗೂ ಕಾಲೇಜುಗಳ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಇತ್ತು. ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಬಹುತೇಕ ಪಿಯುಸಿ, ಪದವಿ ಕಾಲೇಜುಗಳ ಮುಂದೆ ಪೊಲೀಸರು ಇರುವುದು ಕಂಡುಬಂದಿತು. ಹಿಜಾಬ್ ಧರಿಸಿ ಕಾಲೇಜಿಗೆ ಬರುವುದಾಗಿ ಘೋಷಿಸಿದ್ದ ಇಲ್ಲಿನ ಜೆಸಿ ನಗರದ ಮಹಿಳಾ ಕಾಲೇಜು ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾಲೇಜು ಸುತ್ತಲೂ ಗುಂಪು ಸೇರದಂತೆ ಪೊಲೀಸರು ಸೂಚನೆ ನೀಡುತ್ತಿದ್ದರು. ಎಂದಿನಿಂತೆ ಕಾಲೇಜುಗಳ ತರಗತಿಗಳು ನಡೆದವು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.
Related Articles
Advertisement
ಆರ್‌ಎಎಫ್ ಕಂಪನಿ ಆಗಮನ
ಮುನ್ನೆಚ್ಚರಿಕಾ ಕ್ರಮವಾಗಿ ನಗರಕ್ಕೆ ಒಂದು ಕಂಪನಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊಂದಿರುವ ಆರ್‌ಎಎಫ್ ಕಂಪನಿ ಕರೆಸಲಾಗಿತ್ತು. ಇದರೊಂದಿಗೆ ಮಹಿಳಾ ಕೆಎಸ್‌ಆರ್‌ಪಿ ಸಿಬ್ಬಂದಿ ಕೂಡ ಕೆಲ ಪ್ರದೇಶಗಳಲ್ಲಿ ಬಂದೋಬಸ್ತಿನಲ್ಲಿದ್ದರು. ಇದರೊಂದಿಗೆ ನಗರ ಸಶಸ್ತ್ರ ಮೀಸಲು ಪಡೆ, ಸಿವಿಲ್ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿತ್ತು. ಶಸ್ತ್ರಸಜ್ಜಿತ ಆರ್‌ಎಎಫ್, ಕೆಎಸ್‌ಆರ್‌ಪಿ ಹಾಗೂ ಸ್ಥಳೀಯ ಪೊಲೀಸರು ನಗರದಲ್ಲಿ ಪಥ ಸಂಚಲನ ನಡೆಸಿದರು. ಕಿತ್ತೂರು ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತ, ಸಂಗೊಳ್ಳಿ ರಾಯಣ್ಣ ರಸ್ತೆ, ಕೊಪ್ಪಿಕರ್ ರಸ್ತೆ, ಕೋಯಿನ್ ರಸ್ತೆ, ಸ್ಟೇಷನ್ ರಸ್ತೆ, ಗಣೇಶ ಪೇಟೆ, ಸಿಬಿಟಿ, ಶಾಹ ಬಜಾರ್, ರಾಧಾಕೃಷ್ಣ ಗಲ್ಲಿ, ದುರ್ಗದ ಬಯಲು, ಬಾಬಸಾನ ಗಲ್ಲಿ, ಮೈಸೂರು ಸ್ಟೋರ್, ಪೆಂಡಾರ ಗಲ್ಲಿ, ತುಳಜಾ ಭವಾನಿ ಮಂದಿರ, ಕಮರಿಪೇಟೆ, ಮುಲ್ಲಾ ಓಣಿ ಮಾರ್ಗವಾಗಿ ಡಾಕಪ್ಪ ವೃತ್ತದವರೆಗೆ ಪಥ ಸಂಚಲನ ನಡೆಯಿತು.
ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಮಹಾನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಶಿವಮೊಗ್ಗದ ಭದ್ರಾವತಿಯಿಂದ ಆರ್‌ಎಎಫ್ ಒಂದು ಕಂಪನಿ ಹೆಚ್ಚುವರಿಯಾಗಿ ಕರೆಯಿಸಿಕೊಳ್ಳಲಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಕೋರ್ಟ್ ತೀರ್ಪಿಗೆ ಗೌರವ ಕೊಡಬೇಕು. ಯಾವುದೇ ವಿಜಯೋತ್ಸವ, ಪ್ರತಿಭಟನೆಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದ್ದು, ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
–ಲಾಭೂರಾಮ, ಮಹಾನಗರ ಪೊಲೀಸ್ ಆಯುಕ್ತ
ಹೈಕೋರ್ಟ್ ತೀರ್ಪು ಎಲ್ಲರೂ ಪಾಲಿಸಬೇಕು: ಸಚಿವ ಜೋಶಿ
ಹುಬ್ಬಳ್ಳಿ: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತ್ರಿಸದಸ್ಯ ಪೀಠ ಅಂತಿಮ ತೀರ್ಪು ಪ್ರಕಟಿಸಿದ್ದು, ಶಾಲೆಗಳಲ್ಲಿ ಸಮವಸ್ತ್ರ ವಿಚಾರದಲ್ಲಿ ರಾಜ್ಯ ಸರಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಹೈಕೋರ್ಟ್ ತೀರ್ಪುನ್ನು ಸ್ವಾಗತಿಸುತ್ತಿದ್ದು, ಎಲ್ಲರೂ ಇದನ್ನು ಪಾಲಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯ ಯಾವುದೂ ಅಲ್ಲ. ಹೈಕೋರ್ಟ್ ಆದೇಶ ಅನುಷ್ಠಾನಕ್ಕೆ ಎಲ್ಲರೂ ಸಹಕಾರ ನೀಡಬೇಕು. ಸಮಾಜದಲ್ಲಿ ಶಾಂತಿ ಕಾಪಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಎಲ್ಲರೂ ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡಬೇಕಾಗಿದೆ. ಪರೀಕ್ಷೆ, ತರಗತಿಗಳಿಂದ ಹೊರಗೆ ಉಳಿಯುವ ನಿರ್ಧಾರ ಕೈಬಿಟ್ಟು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂದು ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.