ಕೊಪ್ಪಳ: ಹಿಜಾಬ್ ವಿಚಾರ ಕುರಿತಂತೆ ಹೈಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದ್ದು, ಜಿಲ್ಲಾದ್ಯಂತ ಶಾಂತಿಯುತ ವಾತಾವರಣ ಕಂಡು ಬಂದಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ವಿದ್ಯಾರ್ಥಿಗಳು ಎಂದಿನಂತೆ ಶಾಲಾ-ಕಾಲೇಜು ತರಗತಿಗಳಿಗೆ ತೆರಳಿ ಪಾಠ ಆಲಿಸಿದರು. ಆದರೂ ಪೊಲೀಸ್ ಇಲಾಖೆ ನಗರ ಪ್ರದೇಶದಲ್ಲಿನ ಕಾಲೇಜುಗಳಿಗೆ ಬಿಗಿ ಭದ್ರತೆ ಒದಗಿಸಿತ್ತು.
ಜಿಲ್ಲಾಡಳಿತವು ಹೈಕೋರ್ಟ್ ತೀರ್ಪು ಪ್ರಕಟಿಸುವ ಮುನ್ನವೇ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಕಲಂ 144 ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ಪೊಲೀಸ್ ಭದ್ರತೆ ಒದಗಿಸಿತ್ತು.
ಮಂಗಳವಾರ ಎಂದಿನಂತೆ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಿ ಪಾಠ, ಬೋಧನೆ ಆಲಿಸಿದರು. ನಗರ ಪ್ರದೇಶದ ಸರ್ಕಾರಿ ಕಾಲೇಜುಗಳಲ್ಲಿ ಕೆಲ ದಿನಗಳ ಹಿಂದೆ ಹಿಜಾಬ್ ವಿವಾದ ಸದ್ದು ಮಾಡಿತ್ತು. ಜಿಲ್ಲಾದ್ಯಂತ ನಗರ ಪ್ರದೇಶದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಯಿತ್ತು. ಹೈಕೋರ್ಟ್ ಆದೇಶ ಪಾಲನೆ ಮಾಡುತ್ತಿರುವ ಕುರಿತು ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆಯೂ ಒಂದು ಕೋಮಿನ ಜನ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೇ, ತಳ್ಳಾಡಿದ ಘಟನೆಯೂ ಜರುಗಿತ್ತು. ಹಾಗಾಗಿ ಜಿಲ್ಲೆಯಲ್ಲಿನ ಕೆಲವೊಂದು ಕಾಲೇಜುಗಳನ್ನು ಅತಿ ಸೂಕ್ಷ್ಮವೆಂದು ಪರಿಗಣಿಸಿ ಅಂತಹ ಶಾಲೆ ಹಾಗೂ ಕಾಲೇಜುಗಳ ಮೇಲೆಯೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮೊದಲೇ ನಿಗಾ ವಹಿಸಿತ್ತು.
ಶಾಲಾ ಕಾಲೇಜುಗಳಿಗೆ ಬಿಗಿ ಭದ್ರತೆ: ಮಂಗಳವಾರ ನಗರ ಪ್ರದೇಶದ ಕಾಲೇಜುಗಳಿಗೆ ಬೆಳಗ್ಗೆಯಿಂದಲೇ ಭಾರಿ ಭದ್ರತೆ ಒದಗಿಸಲಾಗಿತ್ತು. ಮಹಿಳಾ ಪೇದೆ ಸೇರಿ ಹೆಚ್ಚುವರಿ ಪೊಲೀಸ್ ತುಕಡಿ, ವಾಹನಗಳನ್ನು ನಿಯೋಜಿಸಿತ್ತು. ಇಷ್ಟಾದರೂ ಕೆಲು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದರು. ಇದಕ್ಕೆ ಯಾವುದೇ ಪ್ರತಿರೋಧವು ಕಾಣಲಿಲ್ಲ. ಎಂದಿನಂತೆ ವಿದ್ಯಾರ್ಥಿನಿಯರು ಕಾಲೇಜು ಆವರಣ ಪ್ರವೇಶಿಸಿ ತರಗತಿಗೆ ತೆರಳಿ ಪಾಠ ಆಲಿಸಿ ಮನೆಗಗಳತ್ತ ಮರಳಿದರು.
ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲೇ ಹಿಜಾಬ್ ವಿಚಾರ ಭಾರಿ ಸದ್ದು ಮಾಡಿತ್ತು. ಇಲ್ಲಿವರೆಗೂ ಹೈಕೋಟ್ ìನ ಮಧ್ಯಂತರ ತೀರ್ಪು ಪಾಲನೆ ಜಾರಿಯಲ್ಲಿತ್ತು. ಪ್ರಸ್ತುತ ಅಂತಿಮ ತೀರ್ಪು ಪ್ರಕಟವಾಗಿದ್ದು, ಇಲಾಖೆಯಿಂದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲ ಶಾಲೆ-ಕಾಲೇಜುಗಳಲ್ಲಿ ಕೋರ್ಟ್ ಆದೇಶ ಪಾಲನೆಗೆ ವಿದ್ಯಾರ್ಥಿಗಳಿಗೆ ಸೂಚನೆ ನೀಡುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಅಲ್ಲದೇ, ಯಾವುದೇ ಅಹಿತಕರ ಘಟನೆಗಳು ಜಿಲ್ಲೆಯಲ್ಲಿ ನಡೆದಿಲ್ಲ ಎಂದು ಇಲಾಖೆ ಅ ಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೈಕೋರ್ಟ್ ತೀರ್ಪು ಪ್ರಕಟವಾದ ನಂತರ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತ ವಾತಾವರಣ ಕಂಡುಬಂತು.