ಕುಂದಾಪುರ: ಕರಾವಳಿಯ ಕೆಲವು ಕಾಲೇಜುಗಳಲ್ಲಿ ಆರಂಭವಾಗಿರುವ ಹಿಜಾಬ್- ಕೇಸರಿ ಶಾಲು ವಿವಾದ ಮುಂದುವರಿದಿದೆ. ಕುಂದಾಪುರದ ಜೂನಿಯರ್ ಕಾಲೇಜು ನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗಳಿಗೆ ಪ್ರವೇಶ ನಿರಾಕರಣೆ ಮಾಡಿದ ಕಾರಣಕ್ಕಾಗಿ ಶಾಲೆಗೆ ಪೋಷಕರು ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ನಡೆದಿದೆ.
ಇದನ್ನೂ ಓದಿ: ಲಿಂಗಾನುಪಾತದಲ್ಲಿ ವ್ಯತ್ಯಾಸ: ಉಡುಪಿ ಜಿಲ್ಲೆಯಲ್ಲಿ ಸಾವಿರ ಪುರುಷರಿಗೆ 935 ಸ್ತ್ರೀಯರು!
ಹಿಜಾಬ್ ಗೆ ಪ್ರತಿಯಾಗಿ ಸುಮಾರು 300 ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ. ನಂತರ ಶಾಲು ತೆಗೆದು ತರಗತಿಗೆ ಪ್ರವೇಶ ಮಾಡಿದರು.
ವಿದ್ಯಾರ್ಥಿನಿಯರಿಗೆ ಶಾಲಾ ಪ್ರವೇಶಕ್ಕೆ ಅವಕಾಶ ನೀಡದ ಕಾರಣ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ಆವರಣದಲ್ಲಿ ಹಿಂದೂ ಸಂಘಟನೆಯ ಪ್ರಮುಖರು, ಮುಸ್ಲಿಂ ಸಂಘಟನೆ ಪ್ರಮುಖರು ಹಾಜರಿದ್ದಾರೆ. ಪೊಲೀಸರಿಂದ ಬಿಗಿ ಭದ್ರತೆ ವಹಿಸಲಾಗಿದೆ.
ಇದೇ ವೇಳೆ ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲೂ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಆಗಮಿಸಿದ್ದರು.
ಹಿಜಾಬ್ ಮೂಲಭೂತ ಹಕ್ಕು: ಘಟನೆಯ ಬಗ್ಗೆ ಮಾತನಾಡಿದ ಮಾಜಿ ಸಚಿವ ಜಮೀರ್ ಅಹಮದ್ ಖಾನ್, “ಹಿಜಾಬ್ ಧರಿಸುವುದು ಮೂಲಭೂತ ಹಕ್ಕು. ಇದು ಇಂದು ನಿನ್ನೆಯದಲ್ಲ. ಸರ್ಕಾರ ಮೌನ ವಹಿಸಿದೆ. ಕೇಸರಿ ಶಾಲು ಹಾಕಿ ಬರಲಾಗಿದೆ. ಬಿಜೆಪಿ ರಾಜಕೀಯ ಮಾಡುತ್ತಿದೆ. ಪಿಯುಸಿ ನಂತರ ಡ್ರೆಸ್ ಕೋಡ್ ಇಲ್ಲ ಎಂದು ಸರ್ಕಾರವೇ ಹೇಳಿತ್ತು. ಇದೀಗ ಉಲ್ಟಾ ಹಿಡಿಯುತ್ತಿದ್ದಾರೆ ಎಂದಿದ್ದಾರೆ.