Advertisement

11 ದಿನ ವಿಚಾರಣೆ 25 ತಾಸು ವಾದ ಮಂಡನೆ! ಕುರಾನ್‌ ಆಧರಿಸಿಯೇ ಹೈಕೋರ್ಟ್‌ ತೀರ್ಪು

12:55 PM Mar 16, 2022 | Team Udayavani |

ಅಂತೂ ಇಂತೂ ರಾಜ್ಯದಲ್ಲಿ ಉಲ್ಬಣಗೊಂಡಿದ್ದ ಹಿಜಾಬ್‌ ವಿವಾದಕ್ಕೆ ತಾರ್ಕಿಕ ಅಂತ್ಯವೊಂದು ಸಿಕ್ಕಿದೆ. ಹಿಜಾಬ್‌ ಧರಿಸುವುದು ಕಡ್ಡಾಯವಲ್ಲ ಎಂದು ಹೇಳಿರುವ ರಾಜ್ಯ ಹೈಕೋರ್ಟ್‌, ಈ ಕುರಿತಂತೆ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದೆ. ಸತತ 11 ದಿನಗಳ ವಿಚಾರಣೆ, 25 ತಾಸು ವಾದ-ಪ್ರತಿವಾದ ಮಂಡನೆ ಬಳಿಕ ಈಗ ಹೈಕೋರ್ಟ್‌ ತೀರ್ಪು ನೀಡಿದೆ. ಹಾಗಾದರೆ ಈ ಹಿಜಾಬ್‌ ವಿವಾದ ಸೃಷ್ಟಿಯಾಗಿದ್ದು ಹೇಗೆ? ಯಾವಾಗ? ಹೈಕೋರ್ಟ್‌ ಏನು ಹೇಳಿತು? ನ್ಯಾಯಾಧೀಶರ ವಾದವೇನಾಗಿತ್ತು? ಈ ಕುರಿತ ಒಂದು ಸಮಗ್ರ ನೋಟ ಇಲ್ಲಿದೆ…

Advertisement

ಬೆಂಗಳೂರು: ಹಿಜಾಬ್‌ ಇಸ್ಲಾಮಿನ ಅತ್ಯಗತ್ಯ ಆಚರಣೆ, ಮುಸ್ಲಿಂ ಮಹಿಳೆಯರು ಕಡ್ಡಾಯವಾಗಿ ಹಿಜಾಬ್‌ ಧರಿಸಬೇಕೆಂದು ಕುರಾನಿನಲ್ಲಿ ಹೇಳಲಾಗಿದೆ ಎಂಬ ಅರ್ಜಿದಾರರ ವಾದ ಮತ್ತು ಸಮರ್ಥನೆಗಳಿಗೆ ಅದೇ ಕುರಾನಿನ ಅಧ್ಯಾಯಗಳ ಮೂಲಕ ಉತ್ತರ ಕೊಟ್ಟಿರುವ ಹೈಕೋರ್ಟ್‌, ಕುರಾನ್‌ನಲ್ಲಿ ಹಿಜಾಬ್‌ ಧರಿಸುವುದು ಕಡ್ಡಾಯವೆಂದು ಹೇಳಿಲ್ಲ ಎಂದಿದೆ.

ಕುರಾನ್‌ನ 256ನೇ ವಚನ “ಧರ್ಮದಲ್ಲಿ ಒತ್ತಾಯ ಬೇಡವೆಂದು’ ಹೇಳಿದೆ. ಧರ್ಮ ನಂಬಿಕೆ ಹಾಗೂ ಇಚ್ಛೆಯ ಮೇಲೆ ನಿಂತಿದೆ. ಬಲವಂತದಿಂದ ಹೇರಿದರೆ ಅರ್ಥಹೀನವೆಂದು ಹೇಳಿದೆ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖೀಸಿದೆ.

ಸಾಂವಿಧಾನಿಕ ಪ್ರಶ್ನೆಗಳ ಜತೆಗೆ ತೀರ್ಪಿನುದ್ದಕ್ಕೂ ಕುರಾನ್‌ ಅಧ್ಯಾಯಗಳಲ್ಲಿ (ಸೂರ:) ಹಿಜಾಬ್‌ಗ ಸಂಬಂಧಿಸಿದ ಆಯತ್‌ (ಸೂಕ್ತ)ಗಳನ್ನು ಸುದೀರ್ಘ‌ವಾಗಿ ಪರಾಮರ್ಶಿಸಿರುವ ಹೈಕೋರ್ಟ್‌, ಕುರಾನಿನ ಆಧಾರ ಮತ್ತು ಆದೇಶಗಳನ್ನೇ ಬುನಾದಿಯಾಗಿಸಿಕೊಂಡು ಹಿಜಾಬ್‌ ಹೇಗೆ ಅತ್ಯಗತ್ಯ ಧಾರ್ಮಿಕ ಅಚರಣೆ ಅಲ್ಲ ಎಂದು ಸಾರಿದೆ.

ಹಿಜಾಬ್‌ಗ ಸಂಬಂಧಿಸಿದಂತೆ ಕುರಾನಿನ ಅಧ್ಯಾಯಗಳಾದ ಸೂರ: ನೂರ್‌, ಸೂರಳ ಅಹ್‌ಜಾಬ್‌ ಇದರ ವಿವಿಧ ಸೂಕ್ತಗಳನ್ನು ಮತ್ತು ಅದಕ್ಕೆ ಪೂರಕವಾಗಿ ಭಾರತೀಯ ನ್ಯಾಯಶಾಸ್ತ್ರಜ್ಞ  ಅಬ್ದುಲ್ಲಾ ಯೂಸೂಫ್ ಅಲಿ ಅವರ ವ್ಯಾಖ್ಯಾನಗಳು ಮತ್ತು ಮುಸ್ಲಿಮರ ಕಡ್ಡಾಯ ಧಾರ್ಮಿಕ ವಿಚಾರಣೆಗೆ ಸಂಬಂಧಿಸಿದಂತೆ ತ್ರಿವಳಿ ತಲಾಕ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಹೈಕೋರ್ಟ್‌ ತನ್ನ ಆದೇಶದಲ್ಲಿ ವ್ಯಾಪಕವಾಗಿ ಉಲ್ಲೇಖೀಸಿದೆ.

Advertisement

ಇಸ್ಲಾಮಿನ ಉಗಮ ಕಾಲದಲ್ಲಿ ಅಜ್ಞಾನ ಮತ್ತು ಮಹಿಳೆಯರನ್ನು ಶೋಷಿಸುವ ಕಾಲಘಟ್ಟದಲ್ಲಿ ಆಕೆಯ ಸಾಮಾಜಿಕ ಭದ್ರತೆಗೆ ಹೆಣ್ಣು ಮಕ್ಕಳು ಪರದೆ ಹಾಕಿಕೊಳ್ಳುವ ಪ್ರತೀತಿ ಇತ್ತು. ಕಾಲಕ್ರಮೇಣ ಅದು ಅನೇಕ ಪಲ್ಲಟಗಳನ್ನು ಕಂಡಿದೆ. ಅದು ಸಾಂಸ್ಕೃತಿಕ ಪಾಲನೆ ಆಗಿತ್ತೇ ವಿನಾ ಧಾರ್ಮಿಕ ಆಚರಣೆ ಆಗಿರಲಿಲ್ಲ. ಕುರಾನ್‌ನಲ್ಲಿ ಎಲ್ಲೂ  ಹಿಜಾಬ್‌ ಉಲ್ಲೇಖವಾಗಿಲ್ಲ. ಆದರೆ ವಿಶ್ಲೇಷಣೆಕಾರರು ಅದನ್ನು ಸೇರಿಸಿದ್ದಾರೆ. ಭಾರತೀಯ ನ್ಯಾಯಶಾಸ್ತ್ರಜ್ಞ ಅಬ್ದುಲ್ಲಾ ಯೂಸೆಫ್‌ ಆಲಿ  59ನೇ ಸರದಲ್ಲಿ ನೀಳವಾದ ಗೌನ್‌ ಧರಿಸುವ ಬಗ್ಗೆ ಹೇಳಿದ್ದಾರೆ.  ಆದರೆ 53ನೇ ಭಾಗದಲ್ಲಿ  ಮುಸ್ಲಿಂ ಮಹಿಳೆಯರು ಸಾಮಾನ್ಯವಾಗಿ ಹಿಜಾಬ್‌(ಪರದೆ) ಧರಿಸುವ ಬಗ್ಗೆ ಉಲ್ಲೇಖವಿಲ್ಲ, ಆದರೆ ಎದೆಯ ಭಾಗವನ್ನು ಮುಚ್ಚಿಕೊಳ್ಳಲು ವೇಲ್‌ ಧರಿಸುತ್ತಿದ್ದರು.  ಹಿಜಾಬ್‌ ಅಪೇಕ್ಷಿತ ಆದರೆ ಕಡ್ಡಾಯವಲ್ಲ.

ಎನ್‌ಐಎ ತನಿಖೆ ಕೋರಿದ್ದ ಅರ್ಜಿ ವಜಾ:  ಹಿಜಾಬ್‌ ವಿವಾದ ಭುಗಿಲೇಳಲು ಪಿಎಫ್‌ಐ, ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ, ಸ್ಪೂಡೆಂಟ್‌ ಇಸ್ಲಾಮಿಕ್‌ ಆರ್ಗನೈಸೇಶನ್‌ ಆಫ್‌ ಇಂಡಿಯಾ, ಜಮಾತೇ ಇಸ್ಲಾಮಿ ಹಿಂದ್‌ ಮುಂತಾದ  ಮೂಲಭೂತವಾದಿ ಸಂಘಟನೆಗಳೇ ಕಾರಣ. ಅವುಗಳಿಗೆ ಭಾರತವನ್ನು ಇಸ್ಲಾಮೀಕರಣಗೊಳಿಸಲು ವಿದೇಶಿ ವಿಶ್ವವಿದ್ಯಾನಿಲಯಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಆರ್ಥಿಕ ನೆರವು ನೀಡುತ್ತಿವೆ. ಆ ಬಗ್ಗೆ ಎನ್‌ಐಎ ಅಥವಾ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್‌, ಅರ್ಜಿಯಲ್ಲಿ ಯಾವುದೇ ಮೆರಿಟ್‌ ಇಲ್ಲ, ಹಾಗಾಗಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಅಂಬೇಡ್ಕರ್‌ ಭಾಷಣ ಉಲ್ಲೇಖ
ಹಿಜಾಬ್‌ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಾಗುತ್ತದೆಯೇ ಎಂಬ ವಿಚಾರವನ್ನೂ ಹೈಕೋರ್ಟ್‌ ಪರಿಶೀಲಿಸಿದೆ. ಅತ್ಯಗತ್ಯ ಧಾರ್ಮಿಕ ಆಚರಣೆ ಎಂದರೆ ಏನು ಎಂದು ವಿವರಿಸಲು ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರು ಅರ್ಧಶತ ಮಾನಕ್ಕೂ ಮುನ್ನ ಮಾಡಿದ ಭಾಷಣವನ್ನು ಕೋರ್ಟ್‌ ಉಲ್ಲೇಖೀಸಿದೆ. ಪರ್ದಾ ಪದ್ದತಿಯ ಬಗ್ಗೆ ಅವರು ಹೇಳಿದ್ದು ಹಿಜಾಬ್‌ಗೂ ಅನ್ವಯವಾಗುತ್ತದೆ, ಪರ್ದಾ, ವೇಲ್‌ ಅಥವಾ ಶಿರವಸ್ತ್ರ ಧರಿಸುವುದು ಯಾವುದೇ ಸಮುದಾಯದ ಮಹಿಳೆಯರಲ್ಲೂ ವಿಶೇಷವಾಗಿ ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯ ಅಥವಾ ವಿಮೋಚನೆಗೆ ಅಡ್ಡಿಯಾಗುತ್ತದೆ. ಹಾಗಾಗಿಯೇ ನಮ್ಮ ಸಂವಿಧಾನದಲ್ಲಿ “ಸಮಾನ ಅವಕಾಶಗಳು ಮೂಲಕ ಸಾರ್ವಜನಿಕವಾಗಿ ಭಾಗಿಯಾಗುವುದರೊಂದಿಗೆ ಸಕಾರಾತ್ಮಕ ಜಾತ್ಯತೀತತೆಗೆ ಅವಕಾಶ ನೀಡಿದೆ. ಜತೆಗೆ ಅಂಬೇಡ್ಕರ್‌ ಭಾಷಣದಲ್ಲಿನ “ಭಾರತದಲ್ಲಿ ಹುಟ್ಟಿನಿಂದ ಸಾವಿನವರೆಗೆ ಎಲ್ಲವನ್ನೂ ಧರ್ಮ ಆವರಿಸಿಕೊಂಡಿದೆ. ಹೀಗಾಗಿ ಧರ್ಮದ ವ್ಯಾಖ್ಯಾನವನ್ನು ಸೀಮಿತಗೊಳಿಸುವ ಅಗತ್ಯವಿದೆ. ಎಲ್ಲ  ನಂಬಿಕೆ ಮತ್ತು ರಿವಾಜುಗಳನ್ನು ಧರ್ಮದ ಅತ್ಯಗತ್ಯ ಭಾಗ ಎನ್ನಬೇಕಿಲ್ಲ’ ಎಂಬ ಅಂಶ ಉಲ್ಲೇಖಿಸಿದೆ.

ಅತ್ಯಗತ್ಯ ಧಾರ್ಮಿಕ ಆಚರಣೆಗಳು ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣ ವಾಗಿಯೇ ಇರಬೇಕು. ಕಾನೂನು ಎನ್ನುವುದು ಬಿಳಿ ಹಾಳೆಯ ಮೇಲಿರುವ ಕಪ್ಪು ಶಾಯಿ ಅಲ್ಲ, ಯಾವುದೇ ವ್ಯಕ್ತಿ ಧಾರ್ಮಿಕ ಹಕ್ಕಿನ ಆಧಾರದಲ್ಲಿ ಏನನ್ನಾದರೂ ಕೋರುವಾಗ ತಾನು ಕೋರುತ್ತಿ ರುವ ಅಂಶ ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ಇದೆ ಎಂಬುದನ್ನು ಸಾಬೀತುಪಡಿಸಬೇಕು.
-ಹೈಕೋರ್ಟ್‌

ಅರ್ಜಿದಾರರ ವಾದ
ಹಿಜಾಬ್‌ ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆ. ಮುಸ್ಲಿಂ ಮಹಿಳೆಯರು ಹಿಜಾಬ್‌ ಧರಿಸುವುದು ಧಾರ್ಮಿಕ ಆಚರಣೆಯ ಕಡ್ಡಾಯ ಭಾಗವೆಂದು ಕುರಾನ್‌ ನಲ್ಲಿ ಹೇಳಲಾಗಿದೆ. ಇದನ್ನು ಸಂವಿಧಾನದ ವಿಧಿ 25ರ ಅಡಿಯಲ್ಲಿ ಧಾರ್ಮಿಕ ಹಕ್ಕಾಗಿ ನೀಡಲಾಗಿದೆ. ಸಮವಸ್ತ್ರ ನಿಗದಿಪಡಿಸುವ ಅಧಿಕಾರವನ್ನು ಸರಕಾರವು ಶಾಸಕರ ನೇತೃತ್ವದ ಕಾಲೇಜು ಅಭಿವೃದ್ದಿ ಸಮಿತಿ (ಸಿಡಿಸಿ) ಬಿಟ್ಟುಕೊಟ್ಟಿರುವುದು ಕಾನೂನು ಬಾಹಿರ. ಹಿಂದಿನಿಂದಲೂ ಸಮವಸ್ತ್ರದ ಬಣ್ಣದ್ದೇ ಹಿಜಾಬ್‌ ಧರಿಸಿ ತರಗತಿಗಳಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರನ್ನು ಈಗ ಉದ್ದೇಶಪೂರ್ವಕವಾಗಿ ತಡೆಯಲಾಗುತ್ತಿದೆ. ಬೇರೊಂದು ಬಣ್ಣದ ಸ್ಕಾಫ್ì ಧರಿಸುತ್ತೇವೆ ಎಂದು ನಾವು ಹೇಳುತ್ತಿಲ್ಲ. ಸಂವಿಧಾನದ ವಿಧಿ 25(1) ಅಡಿ ಲಭ್ಯವಿರುವ ಧಾರ್ಮಿಕ ಹಕ್ಕನ್ನು ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಹಾಗೂ ನೈತಿಕತೆಗೆ ಸಂಬಂಧಿಸಿದಂತೆ ಮಾತ್ರ ನಿರ್ಬಂಧಿಸಬಹುದು. ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪ ಒಪ್ಪಿತವಲ್ಲ. ಹಿಜಾಬ್‌ ಧರಿಸಲು ಅನುಮತಿ ನೀಡಬೇಕು. ಬಳೆ, ಬಿಂದಿ, ದುಪ್ಪಟ, ಕ್ರಾಸ್‌, ನಾಮಕ್ಕೆ ಇಲ್ಲದ ನಿಷೇಧ ಹಿಜಾಬ್‌ ಗೆ ಮಾತ್ರ ಏಕೆ? ರಾಜ್ಯ ಸರಕಾರದ ಆದೇಶವನ್ನು ರದ್ದುಪಡಿಸಬೇಕು.

ಸರಕಾರ ಹಿಜಾಬ್‌ ನಿರ್ಬಂಧಿಸುವ ಮೂಲಕ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕು ಮೊಟಕು ಗೊಳಿಸುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ, ಸರಕಾರ ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಪೂರಕ ಸಹಕಾರ ನೀಡಬೇಕೆ ಹೊರತು ತಡೆಯುವುದಲ್ಲ. ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಕಾನೂನು ಬದ್ಧವಲ್ಲ. ಶಿಕ್ಷಣ ಕಾಯ್ದೆಯ ಅಧಿಕಾರವನ್ನು ಸಿಡಿಸಿ ಗೆ ನೀಡಿರುವುದು ಸರಿಯಲ್ಲ.
-ದೇವದತ್‌ ಕಾಮತ್‌, ಹಿರಿಯ ವಕೀಲ

ಸರಕಾರದ ವಾದ
ಹಿಜಾಬ್‌ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ ಇದು ಸರಕಾರ ನಿಲುವು. ಹಿಜಾಬ್‌ ನಿರ್ಬಂಧ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆಯಾಗುವುದಿಲ್ಲ. ರಾಜ್ಯ ಸರಕಾರ ಹಿಜಾಬ್‌ ನಿರ್ಬಂಧಿಸಿಯೂ ಇಲ್ಲ; ಸಮವಸ್ತ್ರ ನಿಗದಿಪಡಿಸಿಯೂ ಇಲ್ಲ. ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ನೀಡಲಾಗಿದೆ. ಉಡುಪಿಯ ಕಾಲೇಜು ಅಭಿವೃದ್ದಿ ಸಮಿತಿ 2013ರಲ್ಲಿಯೇ ಸಮವಸ್ತ್ರದ ಬಗ್ಗೆ ನಿರ್ಣಯ ಅಂಗೀಕರಿಸಿದೆ. ಈ ವಿವಾದದಿಂದ ಸರಕಾರ ಅಂತರ ಕಾಯ್ದುಕೊಂಡಿತ್ತು. ಅನಗತ್ಯವಾಗಿ ಈ ವಿವಾದದಲ್ಲಿ ಸರಕಾರವನ್ನು ಎಳೆದು ತರಲಾಗಿದೆ. ಸಮಾನತೆ, ಶಿಸ್ತಿಗೆ ಪೂರಕವಾದ ಸಮವಸ್ತ್ರ ಧರಿಸಲು ಸೂಚಿಸಲಾಗಿದೆ. ಹಿಜಾಬ್‌ ಧಾರಣೆ ಇಸ್ಲಾಂನ ಧಾರ್ಮಿಕ ಹಕ್ಕಲ್ಲ ಮತ್ತು ಸಂವಿಧಾನದ 25(1)ಪರಿಪೂರ್ಣ ಹಕ್ಕಲ್ಲ. ಸರಕಾರ  ಕಾನೂನು ಮೂಲಕವೂ ನಿರ್ಬಧಿಂಸಬಹುದು. ಕೋವಿಡ್‌ ವೇಳೆಯಲ್ಲಿ ಎಲ್ಲ ಚರ್ಚ್‌, ದೇವಾಲಯ ಮಸೀದಿ ಮುಚ್ಚಲಾಗಿತ್ತು. ಸಾರ್ವಜನಿಕ ಆರೋಗ್ಯದ ಕಾರಣದಿಂದ ಇಂತಹ ನಿರ್ಬಂಧಕ್ಕೆ ಅವಕಾಶವಿದೆ.

ಯಾವುದೇ ಆಚರಣೆಯನ್ನು ವ್ಯಕ್ತಿಯ ಆಯ್ಕೆಗೆ ಬಿಟ್ಟಿದ್ದರೆ ಅದು ಅತ್ಯಗತ್ಯ ಆಚರಣೆಯಲ್ಲ. ಎಲ್ಲ ಮಹಿಳೆಯರಿಗೂ ಹಿಜಾಬ್‌ ಧರಿಸುವುದು ಕಡ್ಡಾಯವೇ ಎಂಬುದನ್ನು ಅರ್ಜಿದಾರರೇ ಸಾಬೀತು ಮಾಡಬೇಕು. ಹಿಜಾಬ್‌ ಕಡ್ಡಾಯ ವೆಂಬುದಕ್ಕೆ ಆಧಾರಗಳಿಲ್ಲ. ಅರ್ಜಿದಾರರು ಒಂದೇ ಒಂದು ದಾಖಲೆಯನ್ನೂ ನೀಡಿಲ್ಲ. ಅವರು ಶೂನ್ಯ ಸಾಕ್ಷ್ಯ ನೀಡಿ ಹಿಜಾಬ್‌ ಪರ ಆದೇಶ ಕೇಳುತ್ತಿದ್ದಾರೆ.
-ಪ್ರಭುಲಿಂಗ ಕೆ. ನಾವದಗಿ, ಅಡ್ವೋಕೇಟ್‌ ಜನರಲ್‌.

ಉಪನ್ಯಾಸಕರ ಪರ ವಕೀಲರ ವಾದ
ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್‌ ವಿವಾದ ಭುಗಿಲೇಳಲು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (ಸಿಎಫ್‌ಐ)ಕಾರಣ, ಅದೇ ವಿದ್ಯಾರ್ಥಿನಿಯರು ಮತ್ತು ಪೋಷಕರನ್ನು ಪ್ರಚೋದಿಸಿ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿ ಗಲಭೆ ಸೃಷ್ಟಿಸಿತು. ಕಾಲೇಜಿನಲ್ಲಿ ಸಮವಸ್ತ್ರ ಧರಿಸುವುದು 2004ರಿಂದಲೂ ಕಡ್ಡಾಯವಾಗಿದೆ ಮತ್ತು ಅದನ್ನು ಎಲ್ಲ ವಿದ್ಯಾರ್ಥಿಗಳೂ ಪಾಲಿಸಿಕೊಂಡು ಬರುತ್ತಿದ್ದಾರೆ. ಯಾವೊಬ್ಬ ವಿದ್ಯಾರ್ಥಿಯೂ ಅದನ್ನು ಪ್ರಶ್ನಿಸಿಲ್ಲ. ಅರ್ಜಿದಾರರೂ ಸಹ ಎರಡು ವರ್ಷಗಳಿಂದ ಆ ನಿಯಮ ಪಾಲನೆ ಮಾಡುತ್ತಿದ್ದರು. ಇದೀಗ ಇದ್ದಕ್ಕಿದ್ದಂತೆ ಆ ವಿಚಾರ ಮುನ್ನೆಲೆಗೆ ತರಲಾಗಿದೆ. ಸಿಎಫ್‌ಐ ಸಂಘಟನೆ ಶಿಕ್ಷಕರಿಗೂ ಬೆದರಿಕೆ ಹಾಕಿದೆ. ಶಿಕ್ಷಕರು ದೂರು ನೀಡಲೂ ಹೆದರಿದ್ದರು. ಶಿಕ್ಷಕರು ವಿದ್ಯಾರ್ಥಿನಿಯರನ್ನು ತೆಗಳಿದ್ದಾರೆಂದು ಸುಳ್ಳು ಆರೋಪಿಸಲಾಗಿದೆ. ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಯರು ಹಾಗೂ ಪೋಷಕರು, ಅಧ್ಯಾಪಕರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ, ಅವುಗಳಲ್ಲಿ ಯಾವುದೇ ಹುರುಳಿಲ್ಲ. ಅಧ್ಯಾಪಕರು ಎಲ್ಲ ವಿದ್ಯಾರ್ಥಿಗಳನ್ನೂ ಒಂದೇ ರೀತಿಯಲ್ಲಿ ನೋಡುತ್ತಿದ್ದಾರೆ, ಆದರೂ ತಾರತಮ್ಯದಿಂದ ನೋಡುತ್ತಿದ್ದರು, ಹೊಡೆಯುತ್ತಿದ್ದರು ಎಂದೆಲ್ಲ ಆರೋಪಿಸಿರುವುದನ್ನು ಒಪ್ಪಲಾಗದು.

ಧಾರ್ಮಿಕ ಸ್ವಾತಂತ್ರ್ಯ ಸಂಪೂರ್ಣ ಹಕ್ಕಲ್ಲ. ಹಿಂದೂಗಳಲ್ಲಿದ್ದ ಬಹುಪತ್ನಿತ್ವ, ಸತಿ ಪದ್ದತಿ ರದ್ದು ಮಾಡಲಾಗಿದೆ. ಹಲವು ಮುಸ್ಲಿಂ ರಾಷ್ಟ್ರಗಳಲ್ಲಿಯೇ ಹಿಜಾಬ್‌ ಕಡ್ಡಾಯವಲ್ಲ. ಸಿಎಫ್‌ಐ ನಂತಹ ಸಂಘಟನೆಗಳು ಸಮಾಜವನ್ನು ಬೆದರಿಸಬಾರದು. ಉಡುಪಿ ಕೃಷ್ಣ ಮಠದ ಸುತ್ತ ಹಲವು ಮುಸ್ಲಿಂ ಕುಟುಂಬಗಳಿವೆ.ರಥೋತ್ಸವದ ವೇಳೆ ಅವರೂ ಪಾಲ್ಗೊಳ್ಳುತ್ತಾರೆ. ಇಂತಹ ಸಾಮರಸ್ಯ ವಾತಾವರಣ ಹಾಳು ಮಾಡಲಾಗುತ್ತಿದೆ.
-ಎಸ್‌.ಎಸ್‌. ನಾಗಾನಂದ, ಹಿರಿಯ ವಕೀಲ.

ಉಡುಪಿ ಕಾಲೇಜು ಅಭಿವೃದ್ಧಿ ಸಮಿತಿ ವಾದ
ಹಿಜಾಬ್‌ಗ ಅವಕಾಶ ನೀಡಿದರೆ ಸಮಾನ ಶಿಕ್ಷಣಕ್ಕೆ ಮತ್ತು ಸಾರ್ವಜನಿಕ ವ್ಯವಸ್ಥಗೆ ಧಕ್ಕೆ ಆಗಲಿದೆ. ಹಿಜಾಬ್‌ಗ ಅನುಮತಿ ನೀಡಿದರೆ ನಾಳೆ ಕೇಸರಿ ಶಾಲು ಕೇಳುತ್ತಾರೆ, ಹೀಗೆ ಇದು ಕೊನೆಯಾಗುವುದಿಲ್ಲ. “ಕಾಲೇಜು ಅಭಿವೃದ್ದಿ ಸಮಿತಿಗೂ ಬೈಲಾಗಳಿವೆ. ಬೈಲಾ ಪ್ರಕಾರವೇ ಸಮಿತಿ ಸದಸ್ಯರ ಆಯ್ಕೆಯಾಗುತ್ತಿದೆ. ಶಾಸಕರಲ್ಲದೇ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಣ ತಜ್ಞರು ಕೂಡಾ ಸಮಿತಿಯಲ್ಲಿರುತ್ತಾರೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ 19(2)ಅಡಿ ಇತಿಮಿತಿಗಳಿವೆ. ಶಿಕ್ಷಣ ಸಂಸ್ಥೆಗಳು ಜಾತ್ಯತೀತ ತಣ್ತೀದಡಿ ನಡೆಯುತ್ತವೆ. ಕಾಲೇಜಿನ ಆವರಣದೊಳಗೆ ಧಾರ್ಮಿಕ ಗುರುತುಗಳ ಅಗತ್ಯವಿಲ್ಲ’. “ಧಾರ್ಮಿಕ ಗುರುತುಗಳನ್ನು ಹೇರುವುದು ಸೂಕ್ತವಲ್ಲ. ನಮ್ಮ ಕಾಲೇಜಿನಲ್ಲಿ 100 ಮುಸ್ಲಿಂ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 5 ವಿದ್ಯಾರ್ಥಿನಿಯರು ಮಾತ್ರ ಹಿಜಾಬ್‌ಗ ಒತ್ತಾಯ ಮಾಡುತ್ತಿದ್ದಾರೆ. ಯಾವುದೇ ಸಮುದಾಯದವರಾದರೂ ತರಗತಿಯಲ್ಲಿ ಸಮಾನತೆ ಇರಬೇಕು. ಧಾರ್ಮಿಕ ಗುರುತುಗಳಿಗೆ ಅವಕಾಶ ನೀಡಿದರೆ ಜಾತ್ಯತೀತ ಶಿಕ್ಷಣ ನೀಡುವುದು ಹೇಗೆ’. “ಹಿಜಾಬ್‌ ಧರಿಸದ ಮುಸ್ಲಿಂ ವಿದ್ಯಾರ್ಥಿನಿಯರೂ ಇದ್ದಾರೆ. ಹಿಜಾಬ್‌ಗ ಅವಕಾಶ ನೀಡಿದರೆ ಹಿಜಾಬ್‌ ಧರಿಸದವರನ್ನು ಧಾರ್ಮಿಕರಲ್ಲವೆಂದು ಪರಿಗಣಿಸುವ ಸಾಧ್ಯತೆ ಇದೆ.

ಹಿಜಾಬ್‌ಗ ಅವಕಾಶ ಕೊಟ್ಟರೆ ಸಮಾನ ಶಿಕ್ಷಣಕ್ಕೆ ಧಕ್ಕೆಯಾಗುತ್ತದೆ. ಶಿಕ್ಷಣ ಜಾತ್ಯತೀತ ಚಟುವಟಿಕೆಯಾಗಿದ್ದು, ಇದರಲ್ಲಿ ಧಾರ್ಮಿಕ ಗುರುತಿನ ಅಗತ್ಯವಿಲ್ಲ. ಹಿಜಾಬ್‌ಗ ಅವಕಾಶ ನೀಡಿದರೆ, ನಂಬುವವರು ಮತ್ತು ನಂಬದವರ ಮಧ್ಯೆ ತಾರತಮ್ಯ ಸೃಷ್ಟಿಯಾಗಲಿದೆ. ಸಮವಸ್ತ್ರ ನಿಯಮ ಇರುವುದೇ ತಾರತಮ್ಯ ತಡೆಯುವುದಕ್ಕೆ. ಬಡವನಿರಲಿ, ಶ್ರೀಮಂತನಿರಲಿ, ಹಿಂದೂ ಇರಲಿ ಮುಸ್ಲಿಂ ಇರಲಿ. ಎಲ್ಲರೂ ಸಮನಾದ ಉಡುಪು ಧರಿಸಬೇಕು”.
-ಸಜನ್‌ ಪೂವಯ್ಯ, ಹಿರಿಯ ವಕೀಲ

ಅರ್ಜಿಗಳನ್ನು ಆಕ್ಷೇಪಿಸಿದವರ ವಾದ
ಹಿಜಾಬ್‌, ಗಡ್ಡ, ಬುರ್ಖಾ ಮತ್ತಿತರ ವಿಷಯಗಳ ಬಗ್ಗೆ ಈಗಾಗಲೇ ಹಲವು ನ್ಯಾಯಾಲಯಗಳು ನಿರ್ಣಯಗಳನ್ನು ನೀಡಿರುವಾಗ, ಮತ್ತದೇ ವಿಚಾರಗಳ ಬಗ್ಗೆ ನ್ಯಾಯಾಲಯಗಳು ಮತ್ತೆಷ್ಟು ಕಾಲ ನಿರ್ಣಯಿಸುತ್ತಾ ಕೂರಬೇಕು, ನ್ಯಾಯಾಲಯದ ಇನ್ನೆಷ್ಟು ಸಮಯ ಅಪವ್ಯಯವಾಗಬೇಕು? ಹಿಜಾಬ್‌ ವಿವಾದ ಉಲ್ಬಣಗೊಳ್ಳಲು ಕೆಲವು  ಇಸ್ಲಾಮಿ ಸಂಘಟನೆಗಳ ಪಾತ್ರವಿದೆ. ಸಿಎಫ್ಐ, ಪಿಎಫ್ಐ, ಎಸ್‌ಐಒ, ಜಮಾತೆ ಇಸ್ಲಾಮಿ ಸಂಘಟನೆಗಳು ಭಾಗಿಯಾಗಿವೆ. ಅವುಗಳಿಗೆ ಸೌದಿಯಿಂದ ಆರ್ಥಿಕ ನೆರವು ಸಿಗುತ್ತಿದೆ ಎಂಬ ಬಗ್ಗೆ  ಮಾಧ್ಯಮಗಳ ವರದಿಯಿದೆ. ಭಾರತವನ್ನು ಇಸ್ಲಾಮೀಕರಣ ಮಾಡುವುದು ಆ ಸಂಘಟನೆಗಳ ಉದ್ದೇಶ. ಸಿಬಿಐ ಅಥವಾ ಎನ್‌ಐಎ ತನಿಖೆಗೊಳಪಡಿಸಿದರೆ ಸತ್ಯಾಂಶ ಹೊರಬರಲಿದೆ.
-ಸುಭಾಷ್‌ ಝಾ, ವಕೀಲರು.

ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅರುಣ್‌ ಶ್ಯಾಂ, ಸರಕಾರಿ ವಕೀಲರಾದ ಬಿ.ವಿ. ಕೃಷ್ಣ, ವಿನೋದ್‌ ಕುಮಾರ್‌ ಸರಕಾರದ ಪರ ಹಾಜರಿದ್ದರು. ವಕೀಲರಾದ ಮೃಣಾಲ್‌ ಶಂಕರ್‌, ಆರ್‌. ವೆಂಕಟರಮಣಿ, ಗುರು ಕೃಷ್ಣಕುಮಾರ್‌, ಎಸ್‌.ಪಿ. ಸುಭಾಷಿಣಿ, ಸಿರಾಜುದ್ದೀನ್‌, ಜಿ.ಆರ್‌. ಮೋಹನ್‌, ಬಾಲಕೃಷ್ಣನ್‌ ಮತ್ತಿತರರು ಅರ್ಜಿದಾರರು ಮತ್ತು ಪ್ರತಿವಾದಿಗಳ ಪರ ವಾದ ಮಂಡಿಸಿದರು.

ಸಮಾಜದ ಒಟ್ಟಾರೆ ಹಿತದೃಷ್ಟಿ ಮತ್ತು ಸಾಂವಿಧಾನಿಕ ತಣ್ತೀಗಳನ್ನು ಗಮನದಲ್ಲಿಟ್ಟು ಹಿಜಾಬ್‌ ವಿಚಾರದಲ್ಲಿ ಹೈಕೋರ್ಟ್‌ ಒಂದು ನ್ಯಾಯೋಚಿತ ಮತ್ತು ತರ್ಕಬದ್ಧ ತೀರ್ಪು ನೀಡಿದೆ.
-ಮೃಣಾಲ್‌ ಶಂಕರ್‌, ವಕೀಲ

ಬಳೆ, ಬಿಂದಿ, ದುಪ್ಪಟ, ಕ್ರಾಸ್‌, ನಾಮಕ್ಕೆ ಇಲ್ಲದ ನಿಷೇಧ ಹಿಜಾಬ್‌ಗ ಮಾತ್ರ ಏಕೆ?  ಶಾಸಕರಿಗೆ ಸಮವಸ್ತ್ರ ನಿಗದಿ ಅಧಿಕಾರ ನೀಡಿರು ವುದು ಪ್ರಜಾಪ್ರಭುತ್ವದ ಪಾಲಿಗೆ ಮರಣ ಶಾಸನ ವಾಗಲಿದೆ. ಇದರಿಂದ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕು ರಕ್ಷಣೆ ಅಸಾಧ್ಯ. ಸರಕಾರದ ನಿಲುವು ತಾರತಮ್ಯದಿಂದ ಕೂಡಿದೆ. ಇದು ಧಾರ್ಮಿಕ ತಾರತಮ್ಯವಾಗಿದೆ. ಸರಕಾರದ ಪೂರ್ವಾಗ್ರಹ ನಿರ್ಧಾರ ರದ್ದಾಗಬೇಕು.
-ಪ್ರೊ| ರವಿವರ್ಮ ಕುಮಾರ್‌, ಹಿರಿಯ ವಕೀಲ

ಕರ್ನಾಟಕ ಶಿಕ್ಷಣ ಕಾಯ್ದೆಯ ಪ್ರಕಾರ ವಸ್ತ್ರ ಸಂಹಿತೆ ಕುರಿತು ಆದೇಶ ಹೊರಡಿಸಲು ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಶಿಕ್ಷಣ ಕಾಯ್ದೆಗೂ, ಸಮವಸ್ತ್ರಗಳಿಗೂ ಯಾವುದೇ ಸಂಬಂಧವಿಲ್ಲ. ಸಮವಸ್ತ್ರ ಧರಿಸಬೇಕು ಎಂದು ಸರಕಾರದ ನಿಯಮಗಳಲ್ಲಿ ಹೇಳಲಾಗಿದೆ. ಆದರೆ ಸಮವಸ್ತ್ರ ಧರಿಸದವರನ್ನು ತರಗತಿಗಳಿಂದ ಹೊರಗಿಡಬೇಕು ಎಂದು ಹೇಳಿಲ್ಲ. ಸಮವಸ್ತ್ರ ಧರಿಸದವರಿಗೆ ದಂಡ ವಿಧಿಸುವ ಬಗ್ಗೆಯೂ ನಿಯಮದಲ್ಲಿ ಇಲ್ಲ.
-ಸಂಜಯ್‌ ಹೆಗ್ಡೆ, ಹಿರಿಯ ವಕೀಲ.

ಹಿಜಾಬ್‌ ನಿರ್ಬಂಧ ನಿರಂಕುಶ ಆದೇಶ ವಾಗಿದೆ. ವಿದ್ಯಾರ್ಥಿನಿಯರು ಕನ್ನಡಕ ಹಾಕಿದರೂ ನಿರ್ಬಂಧಿಸು ತ್ತೀರಾ, ಸರಕಾರದ ಕ್ರಮ ನ್ಯಾಯಬದ್ದವಾಗಿಲ್ಲ, ಆದೇ ಶಕ್ಕೂ ಮುನ್ನ ಪೋಷಕರ ನಿಲುವು ಕೇಳಬೇಕಿತ್ತು. ಆದೇಶಕ್ಕೂ ಮುನ್ನ ಪೋಷಕರು, ಶಿಕ್ಷಕರ ಸಮಿತಿಯನ್ನೂ ಕೇಳಿಲ್ಲ. ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೀಡಿದೆ. ಸಮವಸ್ತ್ರದ ಹೆಸರಲ್ಲಿ ಬೇರೆಯವರ ಹಕ್ಕು ಕಸಿದುಕೊಳ್ಳುವಂತಿಲ್ಲ. ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್‌ ಧರಿಸುವುದು ಹಕ್ಕು, ಆ ಹಕ್ಕನ್ನು ಸರಕಾರ ಗೌರವಿಸಬೇಕು.
-ಯೂಸುಫು ಮುಚ್ಚಲಾ,  ಹಿರಿಯ ನ್ಯಾಯವಾದಿ

ನಮ್ಮ ಶಿಕ್ಷಣ ಸಂಸ್ಥೆಗಳು ನಿಜಕ್ಕೂ ಜಾತ್ಯತೀತವಾಗಿವೆಯೇ? ಸರಸ್ವತಿ ಪೂಜೆ, ಆಯುಧ ಪೂಜೆಗಳು ನಡೆಯುತ್ತವೆ. ಹಿಜಾಬ್‌ನಂತಹ ಬೇರೆ ಯವರಿಗೆ ತೊಂದರೆಯಾಗದ ಸಂಪ್ರದಾಯಗಳಿಗೆ ಅವಕಾಶ ನೀಡಬೇಕು. ಜಾತ್ಯತೀತದ ಹೆಸರಲ್ಲಿ ಏಕರೂಪತೆ ತರುವುದರಿಂದ ಅಲ್ಪಸಂಖ್ಯಾಕ‌ರಿಗೆ ಸಮಸ್ಯೆಯಾಗಲಿದೆ. ನಾಳೆ ಮಾಲ್‌ಗ‌ಳೂ ಜಾತ್ಯತೀತ ಸ್ಥಳಗಳೆಂದು ಘೋಷಿಸಿದರೆ,ನಮ್ಮ ಧಾರ್ಮಿಕ ಸ್ವಾತಂತ್ರ್ಯ ಮನೆಯೊಳಗೆ ಸೀಮಿತವಾಗುವುದಿಲ್ಲವೇ. ಹಾಗಾಗಿ ಹಿಜಾಬ್‌ಗ ಅವಕಾಶ ನೀಡಬೇಕು.
-ಮೊಹಮ್ಮದ್‌ ತಾಹೀರ್‌, ಹೈಕೋರ್ಟ್‌ ವಕೀಲ

ಇಸ್ಲಾಂ ಧರ್ಮಕ್ಕೂ ಮುನ್ನವೇ ಹಿಜಾಬ್‌ ಧರಿಸುವ ಪದ್ದತಿ ಚಾಲ್ತಿಯಲ್ಲಿತ್ತು ಮತ್ತು ಕುರಾನ್‌ ಪ್ರಕಾರ ಮುಸ್ಲಿಂ ಮಹಿಳೆಯರು ತಲೆ, ಮುಖ, ಎದೆ ಭಾಗವನ್ನು ಮುಚ್ಚಲು ಹಿಜಾಬ್‌ ಧರಿಸುವುದು ಕಡ್ಡಾಯ. ಭಾರತ ಹಿಂದೂ ರಾಷ್ಟ್ರವೂ ಅಲ್ಲ, ಇಸ್ಲಾಮಿಕ್‌ ರಾಷ್ಟ್ರವೂ ಅಲ್ಲ. ಪ್ರಜಾಪ್ರಭುತ್ವ ಮತ್ತು ಜಾತ್ಯತೀಯ ರಾಷ್ಟ್ರವಾಗಿದೆ. ಇಲ್ಲಿ ಹಿಜಾಬ್‌ ಧರಿಸಲು ಅವಕಾಶ ಮಾಡಿಕೊಡಲೇಬೇಕು. ನೈತಿಕತೆ ಕಾಪಾಡಲು ಇದು ಅಗತ್ಯ.ಇದು ನಮ್ಮ ಜೀವನ, ಮರಣದ ಪ್ರಶ್ನೆ. ನಾವು ಹಿಜಾಬ್‌ ಬಿಡಲು ಸಾಧ್ಯವಿಲ್ಲ.
-ಎ.ಎಂ. ದಾರ್‌, ಹಿರಿಯ ನ್ಯಾಯವಾದಿ.

Advertisement

Udayavani is now on Telegram. Click here to join our channel and stay updated with the latest news.

Next