Advertisement

ಹಿಜಾಬ್ ವಿಚಾರ: ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿ

01:28 PM Mar 17, 2022 | Team Udayavani |

ವಿಧಾನಸಭೆ : ಹೈಕೋರ್ಟ್ ತೀರ್ಪಿನ ಬಳಿಕವೂ ಕೆಲವರು ಹಿಜಾಬ್ ವಿಚಾರ ಸಂಬಂಧ ಪ್ರತಿಭಟನೆ ನಡೆಸುವುದಕ್ಕೆ ಮುಂದಾಗಿರುವುದು ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.

Advertisement

ಶೂನ್ಯವೇಳೆಯಲ್ಲಿ ಹಿಜಾಬ್ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ರಘುಪತಿ ಭಟ್ ಹೈಕೋರ್ಟ್ ತೀರ್ಪು ಬಂದ ನಂತರವೂ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಧಿಕ್ಕರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.ಅಂತಹವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಳೆದ ಬಾರಿ ಪರೀಕ್ಷೆ ತಪ್ಪಿಸಿಕೊಂಡಿದ್ದು,ಈಗ ಹಿಜಾಬ್ ತೆಗೆದಿಟ್ಟು ಹೋಗಲು ಮುಂದಾಗುವ ವಿದ್ಯಾರ್ಥಿನಿಯರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕೆಂದು ಒತ್ತಾಯಿಸಿದರು. ಆಗ ರಘುಪತಿ ಭಟ್ ರನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡರು.ಕೋರ್ಟ್ ತೀರ್ಪಿನ ವಿರುದ್ದ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಆಗ ಪ್ರತಿಭಟನಾಕಾರರ ಸಮರ್ಥನೆಗೆ ಮುಂದಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಕೋರ್ಟ್ ತೀರ್ಪಿನ ವಿರುದ್ಧವಾಗಿಲ್ಲ.ಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಇದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.ಅದರ ಜೊತೆಗೆ ಶಾಂತಿಯುತವಾಗಿ ಬಂದ್, ಪ್ರತಿಭಟನೆ ಮಾಡುವುದು ಅವರ ಸಂವಿಧಾನಾತ್ಮಕ ಹಕ್ಕು. ಅದನ್ನು ಸರ್ಕಾರ ಹೇಗೆ ತಡೆಯಲು ಸಾಧ್ಯ ? ಬಂದ್, ಪ್ರತಿಭಟನೆ ಮಾಡಲು ಬಿಡಿ ಎಂದು ವಾದಿಸಿದರು.

ಕಾಂಗ್ರೆಸ್ ಉಪನಾಯಕ ಯು.ಟಿ.ಖಾದರ್ ಮಾತನಾಡಿ, ನ್ಯಾಯಾಲಯಕ್ಕೆ ಅಗೌರವ ತೋರಿಸಬೇಕು ಎಂಬ ಕಾರಣಕ್ಕೆ ಬಂದ್ ಕರೆಕೊಟ್ಟಿಲ್ಲ. ಅಸಮಾಧಾನದ ಕಾರಣಕ್ಕೆ ಧಾರ್ಮಿಕ ಮುಖಂಡರು ಬಂದ್ ಕರೆ ಕೊಟ್ಟಿದ್ದಾರೆ ಎಂದರು.

Advertisement

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿ.ಟಿ.ರವಿ, ಇದರಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದು ಮಹಾ ಪಾಪದ ಕೆಲಸ‌. ಶಾಲೆಗಳಲ್ಲಿ ಸಮವಸ್ತ್ರ ಯಾಕೆ ಇರಬೇಕೆಂಬ ಬಗ್ಗೆ ಕೋರ್ಟ್ ನಲ್ಲಿ ಹತ್ತು ದಿನಗಳ ಕಾಲ ವಿವರವಾದ ವಿಚಾರಣೆ ನಡೆದಿದೆ. ಆ ಬಳಿಕವಷ್ಟೇ ಕೋರ್ಟ್ ತೀರ್ಪು ನೀಡಲಾಗಿದೆ.ಅದನ್ನು ಧಿಕ್ಕರಿಸಿ ಪ್ರತಿಭಟನೆ, ಬಂದ್ ಮಾಡುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಕೋರ್ಟ್ ಆದೇಶದ ನಂತರವೂ ಕೆಲ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿಲ್ಲ. ಈಗ ಅವರಿಗೆ ಎರಡನೆ ಅವಕಾಶ ಕೊಡುವ ಬಗ್ಗೆ ಸರ್ಕಾರ ವಿಮರ್ಶೆ ಮಾಡಬಹುದು. ಆದರೆ ನಾವು ಇದನ್ನೇ ಬೆಳೆಸಿಕೊಂಡು‌ ಹೋದರೆ ಮುಂದೆ ಬೇರೆ ರೀತಿಯ ಪರಿಣಾಮಗಳಾಗುತ್ತವೆ. ಬೇಕೆಂದಾಗಲೆಲ್ಲಾ ಪರೀಕ್ಷೆ ಬರೆಯಲು ಕೇಳಿದ್ರೆ ಅವಕಾಶ ಕೊಡಲು ಆಗುತ್ತದೆಯೇ ?ಅದಕ್ಕೆ ಅವಕಾಶ ಕೊಡುತ್ತಾ ಹೋದರೆ ಪರೀಕ್ಷಾ ವ್ಯವಸ್ಥೆ ಉಳಿಯುತ್ತದೆಯೇ ?ಪರೀಕ್ಷೆ ಅಂದ್ರೆ ಎಲ್ಲರಿಗೂ ಒಮ್ಮೆ ಮಾತ್ರ ಅವಕಾಶ ಕೊಡುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next