ಸಾಗರ : ತಮ್ಮನ್ನು ಹಿಜಾಬ್ ಹಾಕಿಕೊಂಡು ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಗುರುವಾರ 20ಕ್ಕೂ ಹೆಚ್ಚು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ತರಗತಿಗಳು ಆರಂಭವಾಗಿವೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಬುಧವಾರ ಪದವಿಪೂರ್ವ ತರಗತಿಗಳು ಆರಂಭಗೊಂಡಿದ್ದರೆ ಸಾಗರದಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗುರುವಾರ ತರಗತಿ ಪ್ರಾರಂಭ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಗುರುವಾರ ಬೆಳಿಗ್ಗೆ 24 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು.
ಪ್ರಾಚಾರ್ಯರು ಹಾಗೂ ಉಪನ್ಯಾಸಕ ವರ್ಗ ಅವರನ್ನು ಕಾಲೇಜು ಆವರಣದಲ್ಲಿ ತಡೆದು ಸರ್ಕಾರದ ನಿಯಮ ಪಾಲಿಸುವಂತೆ ಮನವಿ ಮಾಡಿದ್ದಾರೆ. ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ವಲ್ಪಹೊತ್ತು ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿಯೇ ಇದ್ದು ತಮಗೆ ತರಗತಿಗೆ ಹೋಗಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪ್ರಾಚಾರ್ಯರು ಒಪ್ಪಿಗೆ ನೀಡಲಿಲ್ಲ.
ಇದನ್ನೂ ಓದಿ : ಮುಂದುವರಿದ ಕಾಂಗ್ರೆಸ್ ನಾಯಕರ ಧರಣಿ : ಕಲಾಪ ನಾಳೆಗೆ ಮುಂದೂಡಿಕೆ
ವಿದ್ಯಾರ್ಥಿನಿಯರಿಂದ ಮನವಿ: ನಂತರ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಿ ತರಗತಿಗೆ ಹೋಗಲು ಅವಕಾಶ ಕಲ್ಪಿಸುವಂತೆ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನಾವು ಹಿಂದಿನಿಂದಲೂ ತರಗತಿಗಳಿಗೆ ಹಿಜಾಬ್ ಧರಿಸಿಯೇ ಬರುತ್ತಿದ್ದೇವೆ. ಈಗ ಏಕಾಏಕಿ ಹಿಜಾಬ್ ಧರಿಸಿರುವುದರಿಂದ ತರಗತಿಗೆ ಬಿಡುವುದಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳಂತೆ ನಮಗೂ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಬೇಕು. ಇದರ ಜೊತೆಗೆ ನಮಗೂ ಆನ್‌ಲೈನ್ ತರಗತಿ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಪತ್ರಕರ್ತರಿಗೆ ನಿರ್ಬಂಧ: ಗಲಾಟೆ ಆಗಬಹುದು ಎಂಬ ಮುಂದಾಲೋಚನೆಯಲ್ಲಿ ಪೊಲೀಸರು ಕಾಲೇಜಿನ ಸುತ್ತಮುತ್ತಲೂ ಬಿಗಿಬಂದೋಬಸ್ತು ಮಾಡಿದ್ದರು. ಈ ಸಂದರ್ಭದಲ್ಲಿ ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ಪೊಲೀಸ್ ಅಧಿಕಾರಿಗಳು ನಿರ್ಬಂಧ ಹೇರುವ ಮೂಲಕ ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಿದರು. ತಾವು ವಾಸ್ತವವನ್ನು ವರದಿ ಮಾಡುವುದಾಗಿ ಪತ್ರಕರ್ತರು ಪರಿಪರಿಯಾಗಿ ಬೇಡಿಕೊಂಡರೂ ಪೊಲೀಸ್ ಅಧಿಕಾರಿಗಳು ಫೋಟೋ ತೆಗೆಯಲು ಸಹ ಬಿಡದೆ ಪತ್ರರ್ಕರನ್ನು ವಾಪಾಸ್ ಕಳಿಸಿದ ಘಟನೆ ನಡೆಯಿತು.