ಬೆಂಗಳೂರು: ಉಡುಪಿ ಹಾಗೂ ಕುಂದಾಪುರದ ಶಿಕ್ಷಣ ಸಂಸ್ಥೆಗಳಲ್ಲಿ ಕಾಣಿಸಿಕೊಂಡಿದ್ದ ಹಿಜಾಬ್ ವಿವಾದ ಈಗ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಹೈಕೋರ್ಟ್ ಮಧ್ಯಂತರ ಆದೇಶದ ಮಧ್ಯೆಯೂ ಚಂದ್ರಾಲೇಔಟ್ ನ ಸರಕಾರಿ ಶಾಲೆಗೆ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಬ್ ಧರಿಸಿ ಬಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಚಂದ್ರಾ ಲೇಔಟ್ ನ ವಿದ್ಯಾಸಾಗರ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸರಕಾರದ ಆದೇಶದ ಅನ್ವಯ ಪ್ರೌಢಶಾಲೆಗಳಲ್ಲಿ ತರಗತಿ ಆರಂಭಿಸಲಾಗಿತ್ತು. ಆದರೆ ನ್ಯಾಯಾಲಯದ ಆದೇಶದ ಅನ್ವಯ ಯಾವುದೇ ಧಾರ್ಮಿಕ ಸಂಕೇತದ ವಸ್ತ್ರ ಧರಿಸಿ ಬರುವುದಕ್ಕೆ ಸಾಧ್ಯವಿಲ್ಲ ಎಂದು ಶಿಕ್ಷಕರು ಸೂಚಿಸಿದ್ದರು.
ಈ ಸಂಬಂಧ ಶಾಲೆಯ ಬೋರ್ಡ್ ನಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ಇಲ್ಲ ಎಂದು ಬರೆಯಲಾಗಿತ್ತು. ಆದರೆ ಈ ಬರಹದಲ್ಲಿ ಅಶ್ಲೀಲವಾಗಿ ಬರೆಯಲಾಗಿದೆ ಎಂದು ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು ಆರೋಪಿಸಿ ದ್ದಾರೆ. ಆದರೆ ಶಾಲಾ ಅಭಿವೃದ್ಧಿ ಮಂಡಳಿ ಇದನ್ನು ನಿರಾಕರಿಸಿದೆ.
ಈ ಹಿನ್ನೆಲೆಯಲ್ಲಿ ನೂರಾರು ಜನರು ಶಾಲೆಯ ಮುಂದೆ ಜಮಾಯಿಸಿದ್ದು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಜೆ ಭೇಟಿ ನೀಡಿದ್ದಾರೆ.
ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದಾರೆ. ಪೋಷಕರನ್ನು ವಾಪಸ್ ಕಳುಹಿಸಲು ಹರಸಾಹಸ ಪಡುತ್ತಿದ್ದಾರೆ.