ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನನೆಗುದಿಗೆ ಬಿದ್ದಂತಹ ಪಡುಬಿದ್ರಿ, ಕುಂದಾಪುರಗಳಲ್ಲಿನ ಕಾಮಗಾರಿಗಳಿಗೆ ತ್ವರಿತತೆಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಕೂಡಲೇ ವೇಗವನ್ನು ಒದಗಿಸುವುದು, ಮಲ್ಪೆಯಿಂದ ಕರಾವಳಿ ಜಂಕ್ಷನ್‌ವರೆಗಿನ ಹೆದ್ದಾರಿಯನ್ನು ಅಗಲೀಕರಣಗೊಳಿಸಿ ಕಾಂಕ್ರೀಟೀಕರಣ, ಕೊಂಕಣ ರೈಲ್ವೇ ಹಳಿಗಳ ಡಬ್ಲಿಂಗ್ ಹಾಗೂ ವಿದ್ಯುದ್ದೀಕರಣಗೊಳಿಸುವುದು, ಹೆಜಮಾಡಿ ಮೀನುಗಾರಿಕಾ ಬಂದರಿನ ಕಾಮಗಾರಿಯನ್ನು ಅತೀ ಶೀಘ್ರವಾಗಿ ಕೈಗೆತ್ತಿಕೊಂಡು ಅದನ್ನು ಪೂರ್ಣಗೊಳಿಸುವತ್ತ ತನ್ನ ವಿಶೇಷ ಆದ್ಯತೆಯಿರುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಜೂ. 2ರಂದು ಪಡುಬಿದ್ರಿಯ ಹೊಟೇಲ್ ನಯತ್ ರೆಸಿಡೆನ್ಸಿಯ ಶುಭಮ್ ಸಭಾಂಗಣದಲ್ಲಿ ಬಿಜೆಪಿಯ ಪಡುಬಿದ್ರಿ ಮಹಾಶಕ್ತಿಕೇಂದ್ರದ ವತಿಯಿಂದ ಎರಡನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿರುವುದಕ್ಕಾಗಿ ಹಮ್ಮಿಕೊಳ್ಳಲಾದ ಅವರ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಬ್ಲೂ ಫ್ಯಾಗ್ ಬೀಚ್‌ಗಾಗಿ 8ಕೋಟಿ ರೂ. ಗಳನ್ನು ಕೇಂದ್ರ ಸರಕಾರವು ಈಗಾಗಲೇ ನೀಡಿದ್ದರೂ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿವೆ. ಹಾಗಾಗಿ ಅವಕ್ಕೆ ಸಂಬಂಧಿಸಿ ಅನುದಾನಗಳನ್ನು ಕೇಂದ್ರ ಸರಕಾರದಿಂದ ಹೊಂದಿಸಿಕೊಂಡು ಕಾಮಗಾರಿಗಳ ವೇಗವನ್ನು ಹೆಚ್ಚಿಸಬೇಕಿದೆ. ತನ್ನ ಸಂಸದರ ಅನುದಾನದಲ್ಲಿ ಯಾವುದೇ ಪಕ್ಷಪಾತವಾಗದಂತೆ ಅನುದಾನಗಳ ವಿಕೇಂದ್ರೀಕರಣಗೊಳಿಸಿ ಮಹಾಶಕ್ತಿಕೇಂದ್ರಗಳ ಆಧಾರದಲ್ಲಿಯೇ ಅವನ್ನು ಹಂಚಿ ನೀಡಲಾಗುವುದು. ಮುಂದಿನ 10ತಿಂಗಳಲ್ಲಿ ಪಂಚಾಯತ್ ಚುನಾವಣೆ, ಮುಂದೆ ಜಿ. ಪಂ. ಚುನಾವಣೆಗಳು ನಡೆಯಲಿದ್ದು ಈಗ ಬಿಜೆಪಿಗೆ ಬಂದಿರುವ ಮತಗಳು ನಮ್ಮನ್ನು ಬಿಟ್ಟು ಹೋಗದಂತೆ ಮತ್ತು ತನಗಾಗಿ ದುಡಿದ ಕಾರ್ಯಕರ್ತರು ತಳಮಟ್ಟದಲ್ಲಿನ ಪಂಚಾಯತ್ ವ್ಯವಸ್ಥೆಗಳನ್ನು ಸೇರಿಕೊಳ್ಳುವಂತೆ ಈಗಿಂದೀಗಲೇ ಕಾರ್ಯಕರ್ತರು ಕೆಲಸಕಾರ್ಯಗಳನ್ನು ಆರಂಭಿಸಬೇಕಿದೆ. ಕಾಂಗ್ರೆಸ್‌ಗೆ 16 ರಾಜ್ಯಗಳಲ್ಲಿ ಇಂದು ನೆಲೆಯೇ ಇಲ್ಲವಾಗಿದೆ. ಈ ಉತ್ಸಾಹ ಮುಂದೆಯೂ ನಮ್ಮಲ್ಲಿ ಉಕ್ಕುತ್ತಿರಲಿ ಎಂದು ಸಂಸದೆ ಶೋಭಾ ಹೇಳಿದರು.
ಸಭೆಯನ್ನು ಉದ್ದೇಶಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಲಾಲಾಜಿ ಮೆಂಡನ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿದರು. ವೇದಿಕೆಯಲ್ಲಿ ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಜಿ. ಪಂ. ಸದಸ್ಯೆ ರೇಶ್ಮಾ ಉದಯಕುಮಾರ್ ಶೆಟ್ಟಿ ಇನ್ನಾ, ತಾ. ಪಂ. ಸದಸ್ಯರಾದ ನೀತಾ ಗುರುರಾಜ್, ಕೇಶವ ಮೊಲಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ್ ನಾಯಕ್, ನವೀನ್ ಶೆಟ್ಟಿ ಕುತ್ಯಾರು, ಕಾರ್ಯದರ್ಶಿಗಳಾದ ರಮಾಕಾಂತ ದೇವಾಡಿಗ, ಸಂಧ್ಯಾ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಡುಬಿದ್ರಿ ಮಹಾಶಕ್ತಿ ಕೇಂದ್ರದ ಮಟ್ಟದಲ್ಲಿ ಬಿಜೆಪಿಗೆ ಮುನ್ನಡೆಯನ್ನು ದೊರಕಿಸಿಕೊಡಲು ಶ್ರಮಿಸಿದ ಬೂತ್ ಪ್ರಮುಖರನ್ನು ಗೌರವಿಸಲಾಯಿತು.
ಪಡುಬಿದ್ರಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಶಿವಪ್ರಸಾದ ಶೆಟ್ಟಿ ಎಲ್ಲದಡಿ ಸ್ವಾಗತಿಸಿದರು. ಪಡುಬಿದ್ರಿ ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ ಪ್ರಸ್ತಾವಿಸಿದರು. ರಾಮಕೃಷ್ಣ ರಾವ್ ಎರ್ಮಾಳು ಕಾರ್ಯಕ್ರಮ ನಿರ್ವಹಿಸಿದರು. ಪಡುಬಿದ್ರಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ವಂದಿಸಿದರು.
ಶೋಭಾಗೆ “ಮಿಡ್ಲ್ ಮ್ಯಾನ್’ ಇಲ್ಲ
ಸಂಸದೆ ಶೋಭಾ ಕರಂದ್ಲಾಜೆಗೆ “ಮಿಡ್ಲ್ ಮ್ಯಾನ್'(ಮಧ್ಯವರ್ತಿ)ಗಳೇ ಇಲ್ಲ. ಯಾರ ನಾನು ಅವರಲ್ಲಿಗೆ ಹೋದೆ ಸಿಕ್ಕಿಲ್ಲ. ಇಲ್ಲಿಗೆ ಹೋದೆ ಸಿಕ್ಕಿಲ್ಲ ಎಂದು ಹೇಳ್ಳೋದೇ ಬೇಡ. ನಾನು ಮಣಿಪಾಲದಲ್ಲಿ ತನ್ನ ಕಚೇರಿ ತೆರೆದಾಕ್ಷಣ ವಾರದಲ್ಲಿ ಯಾವ ದಿನ ತಾನು ತನ್ನ ಕೇಂದ್ರ ಸ್ಥಾನದಲ್ಲಿರುವುದಾಗಿ ಜನತೆಗೆ ತಿಳಿಸುತ್ತೇನೆ. ಆ ದಿನ ತಾವು ಯಾರೇ ಆಗಲಿ ನೇರವಾಗಿ ನನ್ನಲ್ಲಿಗೇ ಬಂದು ತಮ್ಮ ದೂರು, ದುಮ್ಮಾನ, ಅಹವಾಲುಗಳನ್ನು ನೀಡಬಹುದಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.