Advertisement

Highway works: ಆಮೆಗತಿಯಲ್ಲಿ ಹೆದ್ದಾರಿ ಕಾಮಗಾರಿ!

04:00 PM Aug 27, 2023 | Team Udayavani |

ಚಿಕ್ಕಬಳ್ಳಾಪುರ:  ಜಿಲ್ಲೆಯ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಡುವೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 234ರ ರಸ್ತೆ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು ವಾಹನ ಸವಾರರು, ಸಾರ್ವಜನಿಕರು ನಿತ್ಯ ತೀವ್ರ ತೊಂದರೆ ಅನುಭವಿಸಬೇಕಿದೆ.

Advertisement

ನೆರೆುಳಬಾಗಿಲು ಹಾಗೂ ಶಿರಾ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಳಬಾಗಿಲಿನಿಂದ ಚಿಕ್ಕಬಳ್ಳಾಪುರದವರೆಗೂ ದ್ವಿಪಥ ರಸ್ತೆ ನಿರ್ಮಾಣವಾಗಿ ವರ್ಷಗಳೆ ಉರುಳಿದರೂ ಗೌರಿಬಿದನೂರು-­ಚಿಕ್ಕಬಳ್ಳಾಪುರ ನಡುವೆ ಮಾತ್ರ ಕಾಮಗಾರಿ ಆರಂಭಗೊಂಡಿರಲಿಲ್ಲ.

ಆದರೆ, ಕಾಮಗಾರಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದರೂ ಕಾಮಗಾರಿ ಹಲವು ತಿಂಗಳಿಂದ ಆಮೆಗತಿಯಲ್ಲಿ ಸಾಗುವ ಮೂಲಕ ಹೆದ್ದಾರಿ ಕಾಮಗಾರಿ ಮುಗಿಯುವುದು ಯಾವಾಗ ಎಂಬ ಚಿಂತೆ ವಾಹನ ಸವಾರರನ್ನು ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಗೌರಿಬಿದನೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಂಡ ನಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾದ ಬಳಿಕ ಈ ರಸ್ತೆಯಲ್ಲಿ ವಾಹನ ದಟ್ಟಣೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಈ ರಸ್ತೆಯನ್ನು ಮೇಲ್ದರ್ಜೇಗೇರಿ ದ್ವಿಪಥ ರಸ್ತೆಯನ್ನಾಗಿ ನಿರ್ಮಿಸಲು ಕೇಂದ್ರ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡರೂ, ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ವೇಗ ಪಡೆಯದೇ ಕುಂಟುತ್ತಾ ಸಾಗಿರುವ ಪರಿಣಾಮ ವಾಹನ ಸವಾರರು ತೀವ್ರ ಹೈರಾಣಾಗುತ್ತಿದ್ದಾರೆ. ಈಗಾಗಲೇ ರಸ್ತೆ ಸಾಕಷ್ಟು ಕಿರಿದಾಗಿದ್ದು ಸುಗಮ ಸಂಚಾರ ಒಂದು ರೀತಿ ಸವಾಲಾಗಿದೆ.

ಕಣಿವೆಯಲ್ಲೂ ಕಾಮಗಾರಿ ಕುಂಠಿತ:  ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ನಡುವೆ ಬರೋಬರಿ 34 ಕಿ.ಮೀ ಉದ್ದ ರಸ್ತೆ ಆಗಲೀಕರಣವಾಗಿ ಹೆದ್ದಾರಿ ರೂಪ ಪಡೆಯಬೇಕಿದೆ. ಇದರ ನಡುವೆ ನಗರ ಹೊರ ವಲಯದ ಕಣಿವೆ ಪ್ರದೇಶದಲ್ಲೂ ಕೂಡ ರಸ್ತೆ ಅಗಲೀಕರಣ ಆಗಬೇಕಿದೆ. ಇಲ್ಲಿ ವಾಹನಗಳ ಸಂಚರಿಸಲು ಸಾಕಷ್ಟು ತಿರುವುಗಳು ಇರುವುದರಿಂದ ಆಗಾಗ ವಾಹನಗಳ ಅಪಘಾತಗಳು ಸಂಭವಿಸುತ್ತಲೇ ಇವೆ. ಆದರೆ, ಹೆದ್ದಾರಿ ಪ್ರಾಧಿಕಾರಕ್ಕೆ ಇಲ್ಲಿ ರಸ್ತೆ ಅಗಲೀಕರಣಕ್ಕೆ ಕಲ್ಲಿನ ಗುಡ್ಡಗಳು ಸವಾಲಾಗಿ ಪರಿಣಮಿಸಿದ್ದು ಕಾಮಗಾರಿ ವಿಳಂಬಕ್ಕೆ ಕಾರಣ ಎನ್ನುವ ಮಾತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ.

ತೆರವಿಗೆ ಕಾದಿವೆ ನೂರಾರು ಕಟ್ಟಡಗಳು: ಗೌರಿಬಿದನೂರುನಿಂದ ಚಿಕ್ಕಬಳ್ಳಾಪುರ ನಗರದವರೆಗೂ ಹೆದ್ದಾರಿ ಕಾಮಗಾರಿ ನಡೆಯಬೇಕಿದೆ. ಈ ದಿಕ್ಕಿನಲ್ಲಿ ಹೆದ್ದಾರಿ ಕಾಮಗಾರಿಗೆ ನಗರದ ಎಂಜಿ ರಸ್ತೆಯಲ್ಲಿ ಈಗಾಗಲೇ ನುರಾರು ಕಟ್ಟಡಗಳ ತೆರವಿಗೆ ಸರ್ವೆ ಕಾರ್ಯ ನಡೆದಿದೆ. ಆದರೆ ಕಟ್ಟಡಗಳ ತೆರವು ಕಾರ್ಯ ಇನ್ನೂ ಆರಂಭಗೊಂಡಿಲ್ಲ. ನಗರದ ಎಂಜಿ ರಸ್ತೆಯ ಹಲವು ದಶಕಗಳಿಂದ ಅಗಲೀಕರಣ ಆಗದೇ ತೀವ್ರ ಸಮಸ್ಯೆ ಮುಂದುವರೆದಿದೆ. ಈಗ ಕಾಮಗಾರಿ ನಡೆಸುತ್ತಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಹಾದು ಹೋಗುವ ಹೆದ್ದಾರಿಯನ್ನು ಅಂದರೆ ಎಂಜಿ ರಸ್ತೆಯನ್ನು ಆದಷ್ಟು ಬೇಗ ಅಗಲೀಕರಣ ಮಾಡಿದರೆ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Advertisement

ಮೋದಿ, ನಿತಿನ್‌ ಗಡ್ಕರಿಗೆ ಪತ್ರ ಬರೆದಿದ್ದ ನಾಗರಿಕರು!:

ಗೌರಿಬಿದನೂರು, ಚಿಕ್ಕಬಳ್ಳಾಪುರ ನಡುವೆ ಸಾಗುವ ರಾಷ್ಟ್ರೀಯ ಹೆದ್ದಾರಿ 234 ರಸ್ತೆ ಅಗಲೀಕರಣ ಹಲವು ವರ್ಷಗಳ ಕಾಲ ನೆನಗುದಿಗೆ ಬಿದ್ದಿದ್ದರ ಕುರಿತು, ಮಂಚೇನಹಳ್ಳಿ ಭಾಗದ ಹಿರಿಯ ನಾಗರಿಕರು ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಸದ್ಯ ಕಾಮಗಾರಿ ಆರಂಭಗೊಂಡರೂ ನಿರೀಕ್ಷಿತ ಪ್ರಮಾಣದಲ್ಲಿ ವೇಗ ಪಡೆದಿಲ್ಲ. ಕಾಮಗಾರಿ ತೀವ್ರ ಮಂದಗತಿಯಲ್ಲಿ ಸಾಗಿರುವ ಪರಿಣಾಮ ವಾಹನ ಸವಾರರು ತೀವ್ರ ಪರದಾಟ ನಡೆಸಬೇಕಿದೆ.

ಡೀಸಿ ಕಚೇರಿವರೆಗೂ ರಸ್ತೆ ಅಗಲೀಕರಣ ಯಾವಾಗ?:

ವಿಪರ್ಯಾಸದ ಸಂಗತಿಯೆಂದರೆ ನಗರದಿಂದ ಡೀಸಿ ಕಚೇರಿವರೆಗೂ ರಸ್ತೆ ಅಗಲೀಕರಣ ಯಾವಾಗಲೋ ಮುಗಿಯಬೇಕಿತ್ತು. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಚಿಂತಾಮಣಿಯಿಂದ ಡೀಸಿ ಕಚೇರಿವರೆಗೂ ಹೆದ್ದಾರಿ ಅಗಲೀಕರಣ ಆಗಿ ಅಭಿವೃದ್ಧಿ ಕಂಡರೂ ಒಂದರೆಡು ಕಿ.ಮೀ ರಸ್ತೆ ಅಭಿವೃದ್ಧಿಗೆ ನಾನಾ ತೊಡುಕುಗಳ ಉಂಟಾಗಿ ಶಿಡ್ಲಘಟ್ಟ ಮಾರ್ಗದ ರಸ್ತೆ ಡೀಸಿ ಕಚೇರಿವರೆಗೂ ಈಗಲೂ ನನೆಗುದಿಗೆ ಬಿದ್ದಿದೆ. ಸದ್ಯ ಅದೇ ರಸ್ತೆಯಲ್ಲಿ ಮಹಿಳಾ ಪದವಿ ಕಾಲೇಜ್‌ ಆರಂಭಗೊಂಡಿರುವು­ದರಿಂದ ವಾಹನ ಹಾಗೂ ಜನ ದಟ್ಟಣೆ ಹೆಚ್ಚಾಗಿದೆ. ಈಗಲಾದರೂ ಸಂಬಂಧಪಟ್ಟವರು ಸ್ಥಗಿತಗೊಂಡಿರುವ ಕಾಮಗಾರಿ ಪೂರ್ಣಗೊಳಿಸಬೇಕಿದೆ.

ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು ಇನ್ನೂ 24  ತಿಂಗಳ ಕಾಲಾವಕಾಶ ಇದೆ. ಹೆದ್ದಾರಿ ಉದ್ದಕ್ಕೂ ಸಾಕಷ್ಟು ಸೇತುವೆಗಳ  ನಿರ್ಮಾಣ ಹಾಗೂ ಕಟ್ಟಡಗಳ ತೆರವು ಕಾರ್ಯ ಆಗಬೇಕಿದೆ. ಆದ್ದರಿಂದ ಕಾಮಗಾರಿ ಹಂತ ಹಂತವಾಗಿ ಸಾಗುತ್ತಿದೆ. ಸಾರ್ವಜನಿಕರು, ವಾಹನ ಸವಾರರು ಸಹಕರಿಸಬೇಕು.-ಮಲ್ಲಿಕಾರ್ಜುನ್‌, ಸಹಾಯಕ ಕಾರ್ಯಪಾಲಕ ಅಭಿಯಂತರರು, ಹೆದ್ದಾರಿ ಪ್ರಾಧಿಕಾರಿ.

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next