Advertisement

ಹೆದ್ದಾರಿ ಕಾಮಗಾರಿ: ಸಂಕಲಕರಿಯ ರಂಗ ಮಂದಿರ ನೆಲಸಮ

11:07 AM Apr 10, 2022 | Team Udayavani |

ಬೆಳ್ಮಣ್‌: ಕಳೆದ 43 ವರ್ಷಗಳಿಂದ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಜತೆ ಸಾಂಸ್ಕೃತಿಕವಾಗಿಯೂ ಗುರುತಿಸಿಕೊಂಡ ಸಂಕಲ ಕರಿಯ ವಿಜಯಾ ಯುವಕ ಸಂಘದ 20 ವರ್ಷಗಳ ಹಳೆಯ ರಂಗ ವೇದಿಕೆ ಅತ್ರಾಡಿ-ಬಜ್ಪೆ ಹೆದ್ದಾರಿ ಕಾಮಗಾರಿಯ ವಿಸ್ತರಣೆಯ ಕಾರಣದಿಂದ ಧರಾಶಾಯಿಯಾಗಿದೆ.

Advertisement

ಸಚಿವ ವಿ. ಸುನಿಲ್‌ ಕುಮಾರ್‌ ಅವರ ಮುತುವರ್ಜಿಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಅತ್ರಾಡಿ-ಮಂಗಳೂರು ಬಜಪೆ ಹೆದ್ದಾರಿಯ ಬೆಳ್ಮಣ್‌ -ಸಂಕಲಕರಿಯ ರಸ್ತೆ ಕಾಮಗಾರಿ ಪ್ರಾರಂಭಗೊಂಡಿದ್ದು ಈಗಾಗಲೇ ರಸ್ತೆಯ ಇಕ್ಕೆಲಗಳನ್ನು ವಿಸ್ತರಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಶುಕ್ರವಾರ ಸಂಕಲಕರಿಯ ವಿಜಯಾ ಯುವಕ ಸಂಘದ ರಂಗವೇದಿಕೆ ನೆಲಸಮವಾಗಿದೆ.

ಅನಿವಾರ್ಯ ಮತ್ತು ನಿರೀಕ್ಷಿತ

43 ವರ್ಷಗಳ ಹಿಂದೆ ಪ್ರಾರಂಭಗೊಂಡ ವಿಜಯಾ ಯುವಕ ಸಂಘ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ನಿರಂತರ ಚಟುವಟಿಕೆಯಲ್ಲಿದ್ದು ಕಳೆದ 16 ವರ್ಷಗಳ ಹಿಂದೆ ಖುಷಿ ಮಹಿಳಾ ಮಂಡಲವೂ ಈ ಸಂಸ್ಥೆಯಡಿಯಲ್ಲಿ ಪ್ರಾರಂಭಗೊಂಡು ಪ್ರತೀ ತಿಂಗಳು ತಿಂಗೊಲ್ದ ಬೊಲ್ಪು ಎಂಬ ಸಾಂಸ್ಕೃತಿಕ ಕಾರ್ಯಕ್ರಮದ ಜತೆ ಸ್ಥಳೀಯ ಸಾಧಕರನ್ನು ಸಮ್ಮಾನಿಸುವ ಕಾರ್ಯಕ್ರಮ ನಡೆಸುತ್ತಿತ್ತು. ಈ ಪ್ರಕ್ರಿಯೆ ಅನಿವಾರ್ಯ ಮತ್ತು ನಿರೀಕ್ಷಿತವಾಗಿತ್ತು, ಯಾಕೆಂದರೆ ಈ ವೇದಿಕೆ ಇದ್ದದ್ದೇ ಲೋಕೋಪಯೋಗಿ ಇಲಾಖೆಯ ಜಾಗದಲ್ಲಿ. ಆದ್ದರಿಂದ ಈ ದಂಡ ತೆರಲೇಬೇಕಾದ ಅನಿವಾರ್ಯತೆಗೆ ಈ ರಂಗವೇದಿಕೆ ಬಿದ್ದಿದೆ.

ಮುಂದೇನು..?

Advertisement

ಯುವಕ ಸಂಘ ಹಾಗೂ ಮಹಿಳಾ ಮಂಡಲಗಳ ಚಟುವಟಿಕೆಗಳನ್ನು ನಿರಂತರವಾಗಿಸಲು ಸೂಕ್ತ ವೇದಿಕೆಯ ಅಗತ್ಯ ಇದ್ದು ಈಗಾಗಲೇ ಸಂಸ್ಥೆಗಳ ಪ್ರತಿನಿಧಿಗಳು ಮುಂಡ್ಕೂರು ದೊಡ್ಡಮನೆಯ ಕೋರ್ದಬ್ಬು ದೈವಸ್ತಾನದ ಬಳಿಯ ದೊಡ್ಡಮನೆಯವರ ಜಾಗದಲ್ಲಿ ವಿನಂತಿಸಿ ದಾನಿಗಳ ನೆರವಿನಿಂದ ರಂಗವೇದಿಕೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.

ಈ ಕಾರಣಕ್ಕಾಗಿ ಈ ಹೆದ್ದಾರಿ ಯೋಜನೆಯ ರೂವಾರಿ ಸಚಿವ ವಿ.ಸುನಿಲ್‌ ಕುಮಾರ್‌, ಇಲಾಖೆಯ ನೆರವು ಪಡೆಯುವ ಯೋಚನೆಯೂ ಇದೆ. ಒಟ್ಟಾರೆಯಾಗಿ 20 ವರ್ಷಗಳಿಂದ ಸಂಕಲಕರಿಯದ ಜನತೆಯ ಕ್ರಿಯಾಶೀಲ ಚಟುವಟಿಕೆಗಳ ಕೇಂದ್ರವಾಗಿದ್ದ ರಂಗ ಮಂದಿರ ಇನ್ನು ನೆನಪಾಗಿಯೇ ಉಳಿಯಲಿದೆ.

ಧ್ವಜಸ್ಥಂಭವೂ ಸ್ಥಳಾಂತರ

ಯುವಕ ಸಂಘ ಹಾಗೂ ಮಹಿಳಾ ಮಂಡಲಕ್ಕೆ ಉದ್ಯಮಿ ಎಳಿಂಜೆ ರಘುರಾಮ ಶೆಟ್ಟಿಯವರು ಕೊಡುಗೆಯಾಗಿ ನೀಡಿದ್ದ ಧ್ವಜಸ್ಥಂಭವೂ ರಸ್ತೆ ವಿಸ್ತರಣೆಗೆ ತುತ್ತಾಗಿದ್ದು ಅದೂ ಸ್ಥಳಾಂತರಗೊಳ್ಳುವ ನಿರೀಕ್ಷೆ ಇದೆ.

ನೂತನ ರಂಗ ಮಂದಿರ ನಿರ್ಮಾಣ

43 ವರ್ಷಗಳ ಇತಿಹಾಸ ಉಳ್ಳ ಸಂಘದ 20 ವರ್ಷಗಳ ಹಳೆಯ ವೇದಿಕೆ ರಸ್ತೆ ವಿಸ್ತರಣೆಗೆ ನೆಲಸಮವಾದ ಬಗ್ಗೆ ವಿಷಾದ ಇದೆ. ಆದರೆ ಅಭಿವೃದ್ಧಿಯ ವಿಚಾರದಲ್ಲಿ ಆಕ್ಷೇಪ ಇಲ್ಲ. ಇದು ಅನಿವಾರ್ಯ ಮತ್ತು ಅಗತ್ಯ. ಸಚಿವರು ಹಾಗೂ ದಾನಿಗಳ ನೆರವಿನಿಂದ ನೂತನ ರಂಗ ಮಂದಿರ ನಿರ್ಮಿಸಲಿದ್ದೇವೆ. –ಚಂದ್ರಹಾಸ ಎಂ., ಅಧ್ಯಕ್ಷ ವಿಜಯಾ ಯುವಕ ಸಂಘ

ಇನ್ನು ನೆನಪು ಮಾತ್ರ

ಸಂಘ ಹಾಗೂ ಮಹಿಳಾ ಮಂಡಲಗಳ ಚಟುವಟಿಕೆಗಳ ಕೇಂದ್ರವಾಗಿದ್ದ ರಂಗವೇದಿಕೆ ಇನ್ನು ನೆನಪು ಮಾತ್ರ. ನೂತನ ರಂಗ ಮಂದಿರಕ್ಕೆ ಪ್ರಯತ್ನಿಸಲಿದ್ದೇವೆ. -ಸ್ನೇಹಾ ಪಿ.ಶೆಟ್ಟಿ, ಖುಷಿ ಮಹಿಳಾ ಮಂಡಲದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next