Advertisement

3 ವರ್ಷವಾದರೂ ಪೂರ್ಣಗೊಳ್ಳದ ಹೆದ್ದಾರಿ ಕಾಮಗಾರಿ

08:41 PM Oct 12, 2019 | Lakshmi GovindaRaju |

ಕೊಳ್ಳೇಗಾಲ: ಪಟ್ಟಣದ ಹೃದಯ ಭಾಗದ ರಾಷ್ಟ್ರೀಯ ಹೆದ್ದಾರಿ 209 ನಾಲ್ಕು ಪಥದ ಕಾಂಕ್ರಿಟ್‌ ರಸ್ತೆ, ಚರಂಡಿ ಕಾಮಗಾರಿ ಆರಂಭಗೊಂಡು 2 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದಾಗಿ ನಿತ್ಯ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

ಅವ್ಯವಸ್ಥೆ: ಕಳೆದ 2 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಸುಮಾರು 65 ಕೋಟಿ ರೂ. ವೆಚ್ಚದ ಅಂದಾಜಿನಲ್ಲಿ ಪಟ್ಟಣದ ಹೊಸ ಅಣಗಳ್ಳಿಯಿಂದ ಮುಡಿಗುಂಡದವರೆಗೂ ಸುಮಾರು ನಾಲ್ಕು ಕಿ.ಮೀ. ಕಾಂಕ್ರಿಟ್‌ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಿತ್ತು. ಆದರೆ, ಕಾಮಗಾರಿ ಆರಂಭವಾಗಿ ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದರೂ ರಸ್ತೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ.

ಈ ಹಿಂದೆ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಆರ್‌.ಧ್ರುವನಾರಾಯಣ್‌ ಅವರು ಪಟ್ಟಣದ ಹೃದಯ ಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ 209 ರಸ್ತೆಯನ್ನು ಅಗಲೀಕರಣ ಮಾಡಿ ಕಾಂಕ್ರಿಟ್‌ ರಸ್ತೆ, ಚರಂಡಿ ನಿರ್ಮಾಣ ಮಾಡಿ ಪಟ್ಟಣಕ್ಕೆ ಮೆರುಗು ತರಲು ಮುಂದಾಗಿದ್ದರು. ಆದರೆ ಅಧಿಕಾರಿಗಳು ತಮಗಿಷ್ಟ ಬಂದಂತೆ ರಸ್ತೆ ನಿರ್ಮಾಣ ಮಾಡಿ ಅಪೂರ್ಣಗೊಳಿಸಿ, ಕೈ ತೊಳೆದುಕೊಂಡಿದ್ದಾರೆ.

ಅವ್ಯವಸ್ಥೆಯ ರಸ್ತೆ: ನಾಲ್ಕು ಪಥದ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಿರುವ ಗುತ್ತಿಗೆದಾರರು ರಸ್ತೆ ಮಧ್ಯೆ ತಡೆಗೋಡೆ ನಿರ್ಮಾಣ ಮಾಡಿದ್ದು, ತಡೆಗೋಡೆ ಮೇಲೆ ವಿದ್ಯುತ್‌ ಕಂಬಗಳನ್ನು ಅಳವಡಿಸಲು ಸ್ಥಳ ಬಿಡಲಾಗಿದೆ. ಆದರೆ, ಇದುವರೆಗೂ ವಿದ್ಯುತ್‌ ಕಂಬ ಜೋಡಣೆ ಕಾರ್ಯ ಮುಗಿದಿಲ್ಲ.

ಪಾದಚಾರಿ ರಸ್ತೆ: ರಸ್ತೆ ಮಗ್ಗುಲಲ್ಲೇ ಪಾದಚಾರಿಗಳ ಓಡಾಟಕ್ಕೆ ಸ್ಥಳ ಬಿಡಲಾಗಿದ್ದು, ಪಾದಚಾರಿ ರಸ್ತೆಯಲ್ಲಿ ಕಾಂಕ್ರಿಟ್‌ನಿಂದ ಮಾಡಿರುವ ನೆಲಹಾಸುಗಳನ್ನು ಮಾಡಬೇಕಾಗಿದ್ದ ಗುತ್ತಿಗೆದಾರರು ನೆಲಹಾಸಿಗೆ ಮಾಡದೆ ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ನೀರು ನಿಂತು ಪಾದಚಾರಿಗಳು ಓಡಾಡದಂತೆ ಅವ್ಯವಸ್ಥೆ ಉಂಟಾಗಿದೆ.

Advertisement

ಸುಂದರ ನಗರ: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ ನಾಲ್ಕು ಪಥದ ರಸ್ತೆ ಸಂಪೂರ್ಣಗೊಂಡಿದ್ದರೆ ಪಟ್ಟಣಕ್ಕೆ ಒಂದು ಮಾದರಿಯ ಕಳೆ ಬರುತ್ತಿತ್ತು. ಆದರೆ ರಸ್ತೆಯಲ್ಲಿ ವಿದ್ಯುತ್‌ ಅಳವಡಿಕೆಯಾಗದೆ ಮತ್ತು ಪಾದಚಾರಿಗಳ ರಸ್ತೆಯೂ ಸಿದ್ಧಗೊಳ್ಳದೆ ಸಂಪೂರ್ಣ ನೆನಗುದಿಗೆ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಂಡು ಸುಂದರ ನಗರವಾಗುವುದು ಯಾವಾಗ ಎಂಬುದೇ ಪ್ರಶ್ನೆಯಾಗಿ ಉಳಿದಿದೆ.

ಜಿಲ್ಲಾಧಿಕಾರಿಗೆ ಮನವಿ: ರಾಷ್ಟ್ರೀಯ ಹೆದ್ದಾರಿ 209 ನಾಲ್ಕು ಪಥದ ಕಾಂಕ್ರಿಟ್‌ ರಸ್ತೆ, ಚರಂಡಿ ಕಾಮಗಾರಿ ಅಪೂರ್ಣಗೊಂಡಿದ್ದು, ಕೂಡಲೇ ಪೂರ್ಣಗೊಳಿಸಲು ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಜಿಲ್ಲಾಧಿಕಾರಿಗೆ ಸ್ಥಳೀಯರು ಸೇರಿದಂತೆ ತಾನು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಸಂಬಂಧಿಸಿದ ಕೇಂದ್ರ ಸರ್ಕಾರದ ಅಧಿಕಾರಿಗಳ ಗಮನ ಸೆಳೆದು ಕ್ರಮಕೈಗೊಳ್ಳಲಾಗುವುದು ಎಂದು ಉಪ ವಿಭಾಗ ಅಧಿಕಾರಿ ನಿಖೀತಾ ಎಂ.ಚಿನ್ನಸ್ವಾಮಿ ತಿಳಿಸಿದ್ದಾರೆ.

ಪಟ್ಟಣದ ಹೊಸ ಅಣಗಳ್ಳಿ ಯಿಂದ ಮುಡಿಗುಂಡದ ವರೆಗೆ ರಾಷ್ಟ್ರೀಯ ಹೆದ್ದಾರಿ 209 ನಾಲ್ಕು ಪಥದ ಕಾಂಕ್ರಿಟ್‌ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರರು ಅಪೂರ್ಣಗೊಳಿಸಿದ್ದಾರೆ. ಅದನ್ನು ಪೂರ್ಣಗೊಳಿಸುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ಸುಮಾರು 2.16 ಕೋಟಿ ರೂ. ಅಂದಾಜಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ದೊರೆಯುತ್ತಿದ್ದಂತೆ ಕಾಮಗಾರಿ ಆರಂಭವಾಗಲಿದೆ.
-ನಾಗಶೆಟ್ಟಿ, ನಗರಸಭೆ ಪೌರಾಯುಕ್ತ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next