Advertisement

ಹೆದ್ದಾರಿ ಕಾಮಗಾರಿ: ಸುರಕ್ಷತಾ ಕ್ರಮಕ್ಕೆ ಸೂಚನೆ

04:12 PM Sep 08, 2017 | |

ಮುದ್ದೇಬಿಹಾಳ: ಪ್ರಗತಿಯಲ್ಲಿರುವ ಹುನಗುಂದ-ತಾಳಿಕೋಟೆ ರಾಜ್ಯ ಹೆದ್ದಾರಿ ಕಾಮಗಾರಿ ಪಟ್ಟಣದಲ್ಲಿಯೂ ನಡೆಯಲಿದೆ. ಪಟ್ಟಣದಲ್ಲಿರುವ ಜನ, ಜಾನುವಾರುಗಳಿಗೆ ತೊಂದರೆ ಆಗದಂತೆ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು ಎಂದು ಎಂದು ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ ಸೂಚಿಸಿದರು.

Advertisement

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಗುರುವಾರ ನಡೆದ ರಾಜ್ಯ ಹೆದ್ದಾರಿ, ಒಳಚರಂಡಿ, ಪಿಡಬ್ಲೂಡಿ ಮತ್ತು ಪುರಸಭೆ ಅಧಿಕಾರಿಗಳು, ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು ಮತ್ತು ಪುರಸಭೆ ಸದಸ್ಯರ ಸಭೆಯಲ್ಲಿ ಅವರು
ಮಾತನಾಡಿದರು.

ಅಲ್ಲಲ್ಲಿ ಅಗತ್ಯ ನಾಮಫಲಕ ಹಾಕಬೇಕು. ರಸ್ತೆ ಕಾಮಗಾರಿ ನಡೆಯುವಾಗ ಜನ, ಜಾನುವಾರುಗಳಿಗೆ ಧಕ್ಕೆ ಆಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ರಸ್ತೆ ಕಾಮಗಾರಿ ಪಟ್ಟಣ ಪ್ರದೇಶ ಹೊರತುಪಡಿಸಿ ಉಳಿದೆಡೆ ಮುಕ್ತಾಯ ಹಂತಕ್ಕೆ ಬಂದಿದೆ. ಪಟ್ಟಣದಲ್ಲಿ ಪಿಲೇಕೆಮ್ಮನಗರ ಬಡಾವಣೆಯಿಂದ ಅಂಬೇಡ್ಕರ್‌ ವೃತ್ತದವರೆಗೆ 23 ಮೀಟರ್‌, ಅಂಬೇಡ್ಕರ್‌ ವೃತ್ತದಿಂದ
ಬನಶಂಕರಿ ವೃತ್ತದವರೆಗೆ 28 ಮೀಟರ್‌ ಅಗಲದ ರಸ್ತೆ ಮಾಡಲಾಗುತ್ತದೆ. ರಸ್ತೆ ಪಕ್ಕ ವಿದ್ಯುತ್‌ ಕಂಬ, ರಸ್ತೆ ಮಧ್ಯೆ ವಿಭಜಕ, ಒಳಚರಂಡಿ, ರಸ್ತೆಯಲ್ಲಿ ಜನ ಜಾನುವಾರು ಪ್ರವೇಶಿಸದಂತೆ ಸ್ಟೀಲ್‌ ಬ್ಯಾರಿಕೇಡ್‌ ಮುಂತಾದ ಸೌಕರ್ಯ
ಒದಗಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.

ಈಗಾಗಲೇ ರಸ್ತೆ ಎರಡೂ ಕಡೆ ಇರುವ ವಿದ್ಯುತ್‌ ಕಂಬ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ. ಮರಗಳನ್ನು
ತೆರವುಗೊಳಿಸಲಾಗಿದೆ. ಪುರಸಭೆ ಪಕ್ಕದಲ್ಲಿ ಕಟ್ಟಲಾಗಿರುವ ವಾಣಿಜ್ಯ ಮಳಿಗೆ, ಎಪಿಎಂಸಿ ಕಂಪೌಂಡ್‌ ತೆರವುಗೊಳಿಸಬೇಕಾಗುತ್ತದೆ. ಒಳಚರಂಡಿ ಮತ್ತು ರಸ್ತೆ ಆರ್‌ಸಿಸಿ ಕಾಮಗಾರಿ, ಡಾಂಬರೀಕರಣ ಒಂದು ಭಾಗದಿಂದ
ಮಾಡಿಕೊಂಡು ಬರಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.

Advertisement

ರಸ್ತೆ ಕಾಮಗಾರಿ ಪೂರ್ಣಗೊಂಡ ಮೇಲೆ ಹುನಗುಂದ ತಾಲೂಕಿನ ಧನ್ನೂರ ಮತ್ತು ತಾಳಿಕೋಟೆ ಹತ್ತಿರ ಟೋಲ್‌ ಸಂಗ್ರಹ ಕೇಂದ್ರ ನಿರ್ಮಿಸಿ ಶುಲ್ಕ ವಸೂಲಿ ಮಾಡಲಾಗುತ್ತದೆ. 18 ವರ್ಷ ನಿರ್ವಹಣೆ ಜವಾಬ್ದಾರಿ
ಗುತ್ತಿಗೆದಾರರದ್ದಾಗಿದೆ. ಪಟ್ಟಣದ ಒಳಗಡೆ ಕಾಮಗಾರಿ ನಿರ್ವಹಿಸುವ ಕಾರಣ ತೊಂದರೆ ಆಗದಂತೆ ಕಡ್ಡಾಯವಾಗಿ ಸುರಕ್ಷತಾ ಕ್ರಮ ಪಾಲಿಸಲಾಗುತ್ತದೆ ಎಂದು ಗುತ್ತಿಗೆದಾರರು ಸಭೆಗೆ ತಿಳಿಸಿದರು.

ಮುಖ್ಯರಸ್ತೆಯಲ್ಲಿ ಒಳಚರಂಡಿಗೆ ಚೇಂಬರ್‌ ಮಾಡುವಾಗ ಅಳತೆ ಕಡಿಮೆ ಇದ್ದಲ್ಲಿ ರೆಡಿಮೇಡ್‌ ಕಾಂಕ್ರಿಟ್‌ ಚೇಂಬರ್‌ ಅಳವಡಿಸಬೇಕು ಎಂದು ಹೆದ್ದಾರಿ ಅಧಿಕಾರಿಗಳು ಗುತ್ತಿಗೆದಾರರಿಗೆ ಸಲಹೆ ನೀಡಲು ಮುಂದಾದರು. ಆದರೆ
ಇದನ್ನು ಆಕ್ಷೇಪಿಸಿದ ಪುರಸಭೆ ಸದಸ್ಯ ಪಿಂಟೂ ಸಾಲಿಮನಿ ಅವರು ಈಗಿರುವಂತೆ ಇಟ್ಟಂಗಿ ಚೇಂಬರ್‌ ಮಾಡಿ ಅದರ ಗೋಡೆಗಳಿಗೆ ಕಾಂಕ್ರಿಟ್‌ ವಾಲ್‌ ಹಾಕಿದರೆ ಹೆಚ್ಚು ಬಾಳಿಕೆ ಬರುತ್ತದೆ. ಭಾರೀ ತೂಕದ ವಾಹನಗಳು ರಸ್ತೆ
ಮೇಲೆ ಸಂಚರಿಸಿದರೂ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ರೆಡಿಮೇಡ್‌ ಸಿಸಿ ಚೇಂಬರ್‌ ಅಳವಡಿಸಿದರೆ ಕೊಳಚೆ ನೀರು ಸೋರಿಕೆಯಾಗಿ ರಸ್ತೆ ಕುಸಿದು ಸಂಚಾರ ಸಮಸ್ಯೆ ಉಂಟಾಗುವ ಸಂಭವ
ಅಲ್ಲಗಳೆಯುವಂತಿಲ್ಲ. ಈ ಸಮಸ್ಯೆ ಬಗ್ಗೆ ಈಗಲೇ ಮುಂಜಾಗ್ರಾಕತಾ ಕ್ರಮ ಕೈಕೊಂಡು ಕೆಳಗೆ ಕಾಂಕ್ರಿಟ್‌ ಹಾಕಿ, ಇಟ್ಟಂಗಿ ಚೇಂಬರ್‌ ವಾಲ್‌ಗೆ ಸಿಮೆಂಟ್‌ ಕಾಂಕ್ರಿಟ್‌ ಪ್ರೊಟೆಕ್ಷನ್‌ ನೀಡಿ ಬಲಿಷ್ಠಗೊಳಿಸಬೇಕು ಎಂದು ಸಲಹೆ
ನೀಡಿದರು. 

ತಹಶೀಲ್ದಾರ ಎಂಎಎಸ್‌ ಬಾಗವಾನ, ರಾಜ್ಯ ಹೆದ್ದಾರಿ ಅಧಿಕಾರಿಗಳಾದ ಎನ್‌.ಆರ್‌. ಶಿವಶಂಕರ, ರಾಮರಾವ ರಾಠೊಡ, ಬಿ.ಎಸ್‌. ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಒಳಚರಂಡಿ, ಪಿಡಬ್ಲೂಡಿ,
ಪುರಸಭೆ ಅಧಿಕಾರಿಗಳು, ಇಂಜಿನಿಯರ್‌ಗಳು ಸಲಹೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next