Advertisement

ನೀರಿಗಾಗಿ ಹೆದ್ದಾರಿ ಬಂದ್‌

07:41 AM May 21, 2019 | Suhan S |

ಚಿಕ್ಕೋಡಿ: ಕಳೆದ ಎರಡು ತಿಂಗಳಿಂದ ಸಂಪೂರ್ಣ ಬತ್ತಿದ ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಚಿಕ್ಕೋಡಿ ಉಪವಿಭಾಗದ ಕರವೇ ಕಾರ್ಯಕರ್ತರು ಅಂಕಲಿ-ಮಾಂಜರಿ ಬಳಿ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಶೀಘ್ರ ನದಿಗೆ ನೀರು ಹರಿಸುವಂತೆ ಆಗ್ರಹಿಸಿದರು.

Advertisement

ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಸೋಮವಾರ ಕೃಷ್ಣಾ ನದಿಗೆ ಕಟ್ಟಿರುವ ಅಂಕಲಿ-ಮಾಂಜರಿ ಸೇತುವೆ ಮೇಲೆ ರಾಜ್ಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ನಂತರ ನದಿಗೆ ನೀರು ಬಿಡಬೇಕೆಂದು ತಹಶೀಲ್ದಾರ ಡಾ.ಸಂತೋಷ ಬಿರಾದಾರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಳೆದ ಎರಡು ತಿಂಗಳಿಂದ ಸಂಪೂರ್ಣವಾಗಿ ಕೃಷ್ಣಾ ನದಿ ಬತ್ತಿ ಹೋಗಿದ್ದರಿಂದ ನದಿ ತೀರದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಮಾಂಜರಿ, ಯಡೂರ, ಚಂದೂರ, ಇಂಗಳಿ, ನಸಲಾಪೂರ ಸವದತ್ತಿ ಮುಂತಾದ ಗ್ರಾಮದ ರೈತರು, ಸಾರ್ವಜನಿಕರು ಪರದಾಡುವಂತಾಗಿದೆ. ರೈತರು ಬೆಳೆದ ಪೈರುಗಳು ನದಿಯಲ್ಲಿ ನೀರಿಲ್ಲದೇ ಬಾಡಿಹೋಗುತ್ತಿವೆ, ಈ ಕುರಿತು ಜಿಲ್ಲಾ ಮತ್ತು ತಾಲೂಕಾಡಳಿತ ಜೊತೆ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸದಲಗಾ ಮಾಜಿ ಶಾಸಕ ಕಲ್ಲಪ್ಪಾ ಮಗೆಣ್ಣವರ ಮಾತನಾಡಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರಿಗೆ ರಾಜ್ಯಸರಕಾರದಿಂದ ಮನವಿ ನೀಡಿ ನಾಲ್ಕು ಟಿಎಂಸಿ ಅಡಿ ನೀರು ಕೊಯ್ನಾ ಜಲಾಶಯದಿಂದ ಹರಿಸಲು ಬೇಡಿಕೆ ಸಲ್ಲಿಸಲಾಗಿದೆ. ಲೋಕಸಭೆ ಚುನಾವಣೆ ಇರುವುದರಿಂದ ನೀರು ಬಂದಿಲ್ಲ, ಕೂಡಲೇ ಮಹಾರಾಷ್ಟ್ರ ಸರ್ಕಾರ ರಾಜ್ಯದ ರೈತರ ಕಷ್ಟಗಳಿಗೆ ಸ್ಪಂದಿಸಿ ನದಿಗೆ ನೀರು ಹರಿಸಬೇಕೆಂದು ಮನವಿ ಮಾಡಿದರು.

ಪ್ರತಿಭಟನಾಕಾರರು ಸುಮಾರು 3 ಗಂಟೆಗಳಕಾಲ ರಸ್ತೆ ತಡೆ ನಡೆಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ ಸಂತೋಷ ಬಿರಾದಾರ ಮನವಿ ಸ್ವೀಕರಿಸಿ ಕೃಷ್ಣಾ ನದಿ ತೀರದ ಎಲ್ಲ ಗ್ರಾಮಗಳಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗೆ ಮಾತನಾಡಿ, ಸರ್ಕಾರದಿಂದ ನೀರು ಬಿಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಅದೇ ಪ್ರಕಾರ ಕುಡಿಯುವ ನೀರಿನ ಅಭಾವ ಉಂಟಾಗಿರುವ ಗ್ರಾಮಗಳಿಗೆ ಟ್ಯಾಂಕರ್‌ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದರು.

Advertisement

ಈ ಸಂದರ್ಭದಲ್ಲಿ ಅಣ್ಣಾಸಾಹೇಬ ಯಾದವ, ಬಬನರಾವ ಭಿಲವಡೆ, ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿಯ ಅಧ್ಯಕ್ಷ ಮಹಾದೇವ ತಳವಾರ, ಚಿಕ್ಕೋಡಿ ಅಧ್ಯಕ್ಷ ನಾಗೇಶ ಮಾಳಿ ಹಾಗೂ ಗಣೇಶ ರೋಕಡೆ, ಸಂಜಯ ಬಡಿಗೇರ, ಆನಂದ ಬಳ್ಳಾರಿ, ಅಶೋಕ ಅಂಗಡಿ, ಸಿದ್ದು ವಡೆಯರ್‌, ವಿಶಾಲ ಕುಡಚೆ, ರಾಮು ಹಂಡೆ, ಕೃಷ್ಣಾ ಕೋಳಿ, ನಾಗೇಶ ಕಾಡಾಪೂರೆ, ವಿನಾಯಕ ಪೋತದಾರ, ಮಹಾಂತೇಶ ಹಿರೆಮಠ, ಸುನೀಲ ತಾವದಾರೆ, ಶ್ರೀಕಾಂತ ಅಸೋದೆ ಸೇರಿದಂತೆ ಯಡೂರ, ಚಂದೂರ, ಇಂಗಳಿ, ನಸಲಾಪೂರ ಸವದತ್ತಿ ಗ್ರಾಮದ ರೈತರು ಪಾಲ್ಗೊಂಡಿದ್ದರು.ಸಿ.ಪಿ.ಐ ಬಸವರಾಜ ಮುಕರ್ತಿಹಾಳ, ಅಂಕಲಿ ಪಿ.ಎಸ್‌.ಐ ವಿನೋದ ದೋಡಮನಿ, ಸದಲಗಾ ಪಿಎಸ್‌ಐ ಅನಿಲ ಕುಂಬಾರ ಬಿಗಿ ಬಂದೊಬಸ್ತ್ ಏರ್ಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next