ಬೆಳ್ತಂಗಡಿ: ಅಕಾಲಿಕ ಗಾಳಿ ಮಳೆಗೆ ಹಲವೆಡೆ ಹಾನಿ ಸಂಭವಿಸುತ್ತಿದೆ. ಮತ್ತೂಂದೆಡೆ ಮಳೆಗಾಲ ಸಮೀಪಿಸುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಸಹಿತ ರಾಜ್ಯ ಹೆದ್ದಾರಿಗಳ ಅಂಚಿನಲ್ಲಿರುವ ಬೃಹದಾಕಾರದ ಮರ, ರೆಂಬೆಗಳು ಧರೆಗುರುಳಿ ವಾಹನ ಸವಾರರ ಆಪತ್ತಿಗೆ ಹೊಂಚು ಹಾಕಿ ಕುಳಿತಿದೆ.
ತಾಲೂಕಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 73 ರ ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ, ಗುರುವಾಯನಕೆರೆ ನಾರಾವಿ ರಾಜ್ಯ ಹೆದ್ದಾರಿ, ಗುರುವಾಯನಕೆರೆ ವೇಣೂರು ರಸ್ತೆ, ಧರ್ಮಸ್ಥಳ – ಕೊಕ್ಕಡ ಸಾಗುವ ರಸ್ತೆ, ಗುರುವಾಯನಕೆರೆಯಿಂದ ಉಪ್ಪಿನಂಗಡಿ ರಸ್ತೆಗಳು ಸಹಿತ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಬೃಹದಾಕಾರದ ಮರಗಳು ರಸ್ತೆಗೆ ವಾಲಿ ನಿಂತಿವೆ.
ಪ್ರತೀ ವರ್ಷ ಮಳೆಗಾಲಕ್ಕೂ ಮುನ್ನ ಅರಣ್ಯ ಇಲಾಖೆ ಎಪ್ರಿಲ್-ಮೇ ಅವಧಿಯಲ್ಲಿ ಅಪಾಯಕಾರಿ ಮರ, ಗೆಲ್ಲು ತೆರವಿಗೆ ಕ್ರಮವಹಿಸುತ್ತದೆ. ಉಜಿರೆ ಧರ್ಮಸ್ಥಳ ರಸ್ತೆಯ ಸ್ವಲ್ಪ ಭಾಗದಲ್ಲಿ ಅರಣ್ಯ ಇಲಾಖೆ ಕೆಲಸ ಮಾಡಿತ್ತಾದರೂ ಅದು ಎಲ್ಲೆಡೆಗೆ ವಿಸ್ತರಣೆ ಆಗಿಲ್ಲ. ಈಗ ಸದ್ಯ ಸುರಿದ ಗಾಳಿ ಮಳೆಗೆ ಮದ್ದಡ್ಕ ಸಮೀಪ ಹಾಗೂ ಕನ್ಯಾಡಿ ನೀರ ಚಿಲುಮೆ ಸಮೀಪ ಎರಡು ಕಡೆಗಳಲ್ಲಿ ಮರ ಬಿದ್ದು ರಸ್ತೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಎರಡು ವರ್ಷಗಳ ಹಿಂದೆ ಉಜಿರೆ ಕಾಲೇಜು ಸಮೀಪ ಮಳೆಗಾಲ ಅವಧಿಯಲ್ಲಿ ಸಂಚರಿಸುತ್ತಿದ್ದ ಕಾರೊಂದರ ಮೇಲೆ ಮರ ಬಿದ್ದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.
ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ರಸ್ತೆಯ ಭಾಗ ದಲ್ಲಂತು ಸಾಲು ಸಾಲು ಮರಗಳಿವೆ. ಮಳೆಗಾಲ ಸಮೀಪಿಸುತ್ತಿರುವುದರಿಂದ ಅಪಾಯಕ್ಕೆ ಮನ್ನ ಅರಣ್ಯ ಇಲಾಖೆ ಅಥವಾ ಮೆಸ್ಕಾಂ ಇಲಾಖೆ ಟ್ರೀ ಟ್ರಿಮ್ಮಿಂಗ್ ಕಾರ್ಯ ನಡೆಸಬೇಕಿದೆ. ಇಲ್ಲವಾದಲ್ಲಿ ಮರಗಳು ರಸ್ತೆಗೆ ಉರುಳಿದರೆ ತಾಸುಗಟ್ಟಲೆ ವಾಹನ ಸಂಚಾರ ವ್ಯತ್ಯಯವಾಗಲಿದೆ. ಚಿಕ್ಕಮಗಳೂರು ಸಹಿತ ಈ ಭಾಗದಿಂದ ಮಂಗಳೂರಿಗೆ ತುರ್ತಾಗಿ ಆ್ಯಂಬ್ಯುಲೆನ್ಸ್ ಸಂಚಾರ ನಡೆಸುವ ಸಮಯದಲ್ಲಿ ಘಟನೆ ಸಂಭವಿಸಿದರೆ ಪ್ರಾಣವೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಮರ, ಗೆಲ್ಲು ವಿದ್ಯುತ್ ಕಂಬಗಳಿದ್ದು ಬಿದ್ದಲ್ಲಿ ಸಾವಿರಾರು ರೂ. ನಷ್ಟ ಸಂಭವಿಸಲಿದೆ. ಈಗ ಪರೀಕ್ಷೆ ಸಮಯವಾದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಲಿದೆ.
ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮೊದಲೇ ಇಕ್ಕಟ್ಟಾದ ರಸ್ತೆಯಾದ್ದರಿಂದ ಗಾಳಿ ಮಳೆಗೆ ಮರಗಳು ಉರುಳಿದಲ್ಲಿ ರಾತ್ರಿ ಪೂರ್ತಿ ವಾಹನ ಸವಾರರು ಘಾಟ್‌ನಲ್ಲೆ ಕಳೆಯಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಅಗತ್ಯವಾಗಿ ತೆರವುಕಾರ್ಯ ನಡೆಯಬೇಕಿದೆ.