Advertisement

ಹೆದ್ದಾರಿ ಬದಿ ಹೊಂಚು ಹಾಕುತ್ತಿವೆ ಅಪಾಯಕಾರಿ ಕೆರೆಗಳು!

12:17 AM Sep 10, 2019 | mahesh |

ಗುತ್ತಿಗಾರು: ಪುತ್ತೂರಿನ ಮಡ್ಯಂಗಳದಲ್ಲಿ ಕಾರು ಕೆರೆಗೆ ಉರುಳಿ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡ ಘಟನೆ ಮನದಲ್ಲಿನ್ನೂ ಹಸಿಯಾಗಿರುವಾಗಲೇ ಅಂತಹುದೇ ದುರ್ಘ‌ಟನೆಗಳು ಸಂಭವಿಸಬಹುದಾದ ಎರಡು ಅಪಾಯಕಾರಿ ಸ್ಥಳಗಳು ಸುಬ್ರಹ್ಮಣ್ಯ-ಜಾಲಸೂರು ರಾಜ್ಯ ಹೆದ್ದಾರಿಯ ತಳೂರು ಹಾಗೂ ನಾರ್ಣಕಜೆಯಲ್ಲಿ ಇವೆ.

Advertisement

ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವಂತೆ ಇರುವ ಎರಡು ಕೆರೆಗಳು ಖಾಸಗಿ ಒಡೆತನದಲ್ಲಿದ್ದರೂ ಅದರ ಸುತ್ತ ಯಾವುದೇ ತಡೆಬೇಲಿ ಅಳವಡಿಸದ ಕಾರಣ ಅಪಾಯವನ್ನು ಆಹ್ವಾನಿಸುತ್ತಿವೆ.

ಅನಾಹುತ ತಪ್ಪಿತ್ತು
ತಳೂರಿನ ಬಳಿಯಿರುವ ಕೆರೆಗೆ ಹಲವು ವರ್ಷಗಳಿಂದಲೇ ತಡೆಬೇಲಿಯಿಲ್ಲದೇ ಅಪಾಯಕಾರಿ ಆಗಿದೆ. 50 ಅಡಿಗಳಷ್ಟು ಆಳ ಹಾಗೂ ಗ್ರಾನೈಟ್‌ ಕಲ್ಲಿನ ಮಧ್ಯೆ ಈ ಕೆರೆ ರಚನೆಯಾಗಿದೆ. ಮುಖ್ಯ ರಸ್ತೆಗೆ ಕೆಲವೇ ಅಡಿಗಳ ಅಂತರದಲ್ಲಿ ಈ ಕೆರೆ ಇದೆ. ಕಳೆದ ಬೇಸಗೆಯಲ್ಲಿ ಯಾತ್ರಾರ್ಥಿಗಳ ಕಾರೊಂದು ಈ ಕೆರೆಗೆ ಬೀಳುವುದು ಸ್ವಲ್ಪದರಲ್ಲೇ ತಪ್ಪಿತ್ತು. ಅಲ್ಲೇ ಇದ್ದ ಮರಗಳ ಮಧ್ಯೆ ಕಾರು ಸಿಲುಕಿಕೊಂಡ ಕಾರಣ ಭಾರೀ ಅನಾಹುತ ತಪ್ಪಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು. ಅದಾದ ಬಳಿಕವೂ ಈ ಕೆರೆಗೆ ತಡೆಬೇಲಿ ಅಳವಡಿಸಿಲ್ಲ.

ಕೆರೆಯೊಳಗೆ ಬಿದ್ದಿದ್ದವು ವಾಹನಗಳು
ಮತ್ತೂಂದು ಕೆರೆ ನಾರ್ಣಕಜೆ ಸಮೀಪದ ತಿರುವಿನಲ್ಲಿದ್ದು, ಈ ಕೆರೆಗೆ ಹಲವು ವಾಹನಗಳು ಬಿದ್ದಿವೆ. ಹಿಂದೊಮ್ಮೆ ಈ ಕೆರೆಗೆ ಸವಾರನೊಬ್ಬ ಬೈಕ್‌ ಸಮೇತ ಬಿದ್ದಿದ್ದ. ಬೈಕ್‌ ನೀರಿನಲ್ಲಿ ಮುಳುಗಿದ್ದು, ಸವಾರ ಈಜಿಕೊಂಡು ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದ. ಈ ಕೆರೆಗೆ ಭಾಗಶಃ ತಡೆಬೇಲಿ ಅಳವಡಿಸಿದ್ದರೂ ಅದು ಸುರಕ್ಷಿತ ವಾಗಿಲ್ಲ. ಪೂರ್ಣ ಪ್ರಮಾಣದ ತಡೆಬೇಲಿ ಅಗತ್ಯವಿದ್ದು, ಸಂಭವನೀಯ ಅಪಾಯ ತಪ್ಪಿಸಲು ಸಹಕಾರಿಯಾಗಲಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತು ಈ ಕೆರೆಗೆ ತಡೆಬೇಲಿ ಅಳವಡಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಡೆಬೇಲಿಗೆ ಪ್ರಸ್ತಾವನೆ ಸಲ್ಲಿಕೆ
ನಾರ್ಣಕಜೆ ಹಾಗೂ ತಳೂರಿನ ಅಪಾಯಕಾರಿ ಕೆರೆಗಳಿಗೆ ತಡೆ ಬೇಲಿ ನಿರ್ಮಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮೋದನೆ ಬಂದ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು.
– ಸಣ್ಣೇ ಗೌಡ, ಎಇ, ಲೋಕೋಪಯೋಗಿ ಇಲಾಖೆ ಸುಳ್ಯ

Advertisement

ಕೃಷ್ಣಪ್ರಸಾದ್‌ ಕೊಲ್ಚಾರು

Advertisement

Udayavani is now on Telegram. Click here to join our channel and stay updated with the latest news.

Next