Advertisement

ಪಡುಬಿದ್ರಿ: ಸಾರ್ವಜನಿಕರಲ್ಲಿ ಗೊಂದಲ

02:50 AM Oct 30, 2018 | Team Udayavani |

ಪಡುಬಿದ್ರಿ: ನಾಲ್ಕು ಪಥಗಳ ಹೆದ್ದಾರಿ ಕಾಮಗಾರಿಯನ್ನಷ್ಟೇ ಪಡುಬಿದ್ರಿ ಭಾಗದಲ್ಲಿ ತುರ್ತಾಗಿಯೇ ಮುಗಿಸಿರುವ ನವಯುಗ ನಿರ್ಮಾಣ ಕಂಪೆನಿಯು ಇದೀಗ ಪಡುಬಿದ್ರಿ ಆಸುಪಾಸಲ್ಲಿ ಸರ್ವೀಸ್‌ ರಸ್ತೆ ಕಾಮಗಾರಿಗೆ ಮುಂದಾಗಿಲ್ಲ. ಕೇವಲ ಪಡುಬಿದ್ರಿಯ ಕೇಂದ್ರ ಭಾಗದಿಂದ ದಕ್ಷಿಣಕ್ಕೆ ಪೂರ್ವಭಾಗದಲ್ಲಷ್ಟೇ ಒಳ ಚರಂಡಿ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ಸ್ಥಳೀಯರು, ಸಾರ್ವಜನಿಕರಂತೂ ಧೂಳುಮಯ ಕಚ್ಚಾ ರಸ್ತೆಗಳನ್ನೇ ಇದೀಗ ತಮ್ಮ ಸಂಪರ್ಕ ರಸ್ತೆಯನ್ನಾಗಿ ಬಳಸಿಕೊಳ್ಳುತ್ತಿದ್ದು ಇವರ ಪರಿಪಾಟಲು ಹೇಳತೀರದಾಗಿದೆ.

Advertisement

ಒಳ ಚರಂಡಿ – ಸರ್ವಿಸ್‌ ರಸ್ತೆ ವಿಳಂಬ
ಹೊಟೇಲ್‌ ಅಮರ್‌ ಕಾಂಫರ್ಟ್ಸ್ ಬಳಿ ಸರ್ವಿಸ್‌ ರಸ್ತೆಗಾಗಿ ಹೆದ್ದಾರಿ ಪಶ್ಚಿಮ ಬದಿ ಒಂದು ದಿನವಷ್ಟೇ ಕಾಮಗಾರಿಯನ್ನು ನಿರ್ವಹಿಸಲಾಗಿದ್ದು ಇಲ್ಲೂ ದೊಡ್ಡ ಕುಳಿಯನ್ನು ನಿರ್ಮಿಸಿ ಕೈಬಿಡಲಾಗಿದೆ. ಎರಡೂ ಭಾಗಗಳಲ್ಲೂ ಪಂಚಾಯತ್‌ ನೀರಿನ ಪೈಪ್‌ಲೈನ್‌ ಕಾಮಗಾರಿಯನ್ನು ನವಯುಗ ನಿರ್ಮಾಣ ಕಂಪೆನಿಯು ಪಂಚಾಯತ್‌ ಪ್ರಸ್ತಾವನೆಗೆ ಒಪ್ಪಿಕೈಗೊಳ್ಳಬೇಕಿದೆ. ಇದಿನ್ನೂ ಪೂರ್ಣಗೊಂಡಿಲ್ಲ. ಮಳೆ ನೀರು ಪೂರ್ಣ ಒತ್ತಡದೊಂದಿಗೆ ಹರಿದು ಬರುವ ಹೆದ್ದಾರಿ ಪಶ್ಚಿಮ ಭಾಗದಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಇದುವರೆಗೂ ಒಂದಿನಿತೂ ಹೆದ್ದಾರಿ ಚತುಃಷ್ಪಥ ಗುತ್ತಿಗೆದಾರ ನವಯುಗ ನಿರ್ಮಾಣ ಕಂಪೆನಿಯು ನಿರ್ವಹಿಸಿಲ್ಲ.

ಕಾರ್ಕಳ – ಪಡುಬಿದ್ರಿ ಸಂಧಿಭಾಗ ಅಪಘಾತ ವಲಯ
ಹೆದ್ದಾರಿ ಚತುಷ್ಪಥದ ನಡುವೆ 1.6ಮೀಟರ್‌ ಅಗಲದ ರಸ್ತೆ ವಿಭಾಜಕವನ್ನು ನಿರ್ಮಿಸಲಾಗಿದ್ದು ಇದರ ನಿರ್ವಹಣೆಯನ್ನೂ ಇನ್ನೂ ಪೂರ್ಣಗೊಳಿಸಲಾಗಿಲ್ಲ. ಹೆದ್ದಾರಿ ಭಾಗವು ರಾತ್ರಿಯ ವೇಳೆ ಪೂರ್ಣ ಕತ್ತಲು ಮಯವಾಗಿದೆ. ಹೆದ್ದಾರಿ ದೀಪಗಳ ವ್ಯವಸ್ಥೆಯನ್ನು ಕಲ್ಪಿಸುವಲ್ಲೂ ನವಯುಗ ಕಂಪೆನಿ ಹಿಂದೆ ಬಿದ್ದಿದೆ. ಕಾರ್ಕಳ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಂಧಿ ಭಾಗವು ಪೂರ್ಣ ಅಯೋಮಯವಾಗಿದ್ದು ಮತ್ತೂಂದು ಕಟಪಾಡಿ ಜಂಕ್ಷನ್‌ ತರಹವೆಂಬಂತೆ ಪೂರ್ಣ ಅಪಘಾತ ವಲಯವಾಗಿಯೇ ಪರಿವರ್ತನೆಗೊಂಡಿದೆ. 

ಬಸ್‌ ನಿಲ್ದಾಣವಿಲ್ಲದೇ ಗೊಂದಲದ ಗೂಡು
ಹೆದ್ದಾರಿ ಬಸ್‌ ನಿಲ್ದಾಣಗಳೂ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಕಾರ್ಕಳ ಭಾಗಕ್ಕೆ ಹೋಗಬೇಕಾದ ಬಸ್‌ ನಿಲ್ದಾಣ ಮತ್ತು ಮಂಗಳೂರು ಕಡೆಯ ಬಸ್‌ ನಿಲ್ದಾಣಗಳ ಮಧ್ಯೆ ಸುಮಾರು ಅರ್ಧ ಕಿ.ಮೀ. ಅಂತರವಿದ್ದು ಪ್ರಯಾಣಿಕರ ಅಲ್ಲಿಗೆ ಹೆದ್ದಾರಿ ದಾಟಿ ತೆರಳುವ ವೇಳೆಯಲ್ಲೇ ಎರಡು ಕಾರ್ಕಳದ ಬಸ್‌ಗಳು ಮಿಸ್‌ ಆಗಿರುತ್ತವೆ. ಹಾಗೆಯೇ ಕಾರ್ಕಳ ಕಡೆಯಿಂದ ಬರುವ ಪ್ರಯಾಣಿಕರಿಗೆ ಮೂರು – ನಾಲ್ಕು ಉಡುಪಿ ಮಣಿಪಾಲದ ಬಸ್‌ಗಳು ತೆರಳಿರುತ್ತವೆ. ರಾತ್ರಿ ವೇಳೆಯಲ್ಲಂತೂ ಈ ಬಸ್‌ ನಿಲ್ದಾಣಗಳಲ್ಲಿ ಕಗ್ಗತ್ತಲೆ ಕವಿದಿರುತ್ತದೆ. 

ಗ್ರಾ. ಪಂ. ಬಸ್‌ ನಿಲ್ದಾಣದ ಜಾಗದ ಗುರುತಿಸುವಿಕೆ ನಡೆಸಿಲ್ಲ
ಈ ಎಲ್ಲಾ ವಿಚಾರಗಳ ಕುರಿತಾಗಿ ನವಯುಗ ನಿರ್ಮಾಣ ಕಂಪೆನಿಯ ಯೋಜನಾ ನಿರ್ದೇಶಕ ಶಂಕರ್‌ ರಾವ್‌ ಅವರನ್ನು ಮಾತಾಡಿಸಿದಾಗ ಒಳ ಚರಂಡಿ ಕಾಮಗಾರಿಗಳು ತೀರುತ್ತಿರುವಂತೆಯೇ ತಾವು ಸರ್ವೀಸ್‌ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತೇವೆ. ಪೂರ್ವ ಬದಿಯ ಒಳ ಚರಂಡಿಯ ಕೆಲಸದ ಬಳಿಕ ಸರ್ವೀಸ್‌ ರಸ್ತೆ ಕಾಮಗಾರಿ ಆರಂಭವಾಗಲಿದೆ. ಆ ಬಳಿಕ ಪಶ್ಚಿಮ ಬದಿಯ ಒಳಚರಂಡಿ, ಸರ್ವೀಸ್‌ ರಸ್ತೆಗಳು ನಿರ್ಮಾಣಗೊಳ್ಳುತ್ತವೆ. ಹೆದ್ದಾರಿ ಮಧ್ಯೆ ರಸ್ತೆ ವಿಭಾಜಕದ ಪೂರ್ಣ ಕಾಮಗಾರಿ, ವಿದ್ಯುತ್‌ ಜೋಡಣೆಗಳು ಡಿಸೆಂಬರ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ. ಪಡುಬಿದ್ರಿಯಲ್ಲಿ ಬಸ್‌ ನಿಲ್ದಾಣಗಳನ್ನು ಎಲ್ಲಿ ನಿರ್ಮಿಸಬೇಕೆಂದು ತಾವು ಪಡುಬಿದ್ರಿ ಗ್ರಾ. ಪಂ. ಗೆ ಈಗಾಗಲೇ ಜಾಗ ಗುರುತಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಸ್ಥಳೀಯ ಗ್ರಾ.ಪಂ. ಇದುವರೆಗೂ ಸ್ಪಂದಿಸಿಲ್ಲ ಎಂಬುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next