ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮತ್ತು ಇತರ ಕಾರಣಗಳಿಗೆ ಗುಂಡಿ ಬಿದ್ದಿರುವ ಹೆದ್ದಾರಿಯನ್ನು ತತ್‌ಕ್ಷಣವೇ ದುರಸ್ತಿ ಗೊಳಿಸುವ ಜತೆಗೆ ಈ ಕುರಿತ ಪ್ರಗತಿ ಪರಿಶೀಲನ ವರದಿಯನ್ನು ಜಿಲ್ಲಾಧಿಕಾರಿಗೆ ನೀಡುವಂತೆ ಸಂಸದ ನಳಿನ್ ಕುಮಾರ್ ಕಟೀಲು ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ನಡೆದ ರಾಷ್ಟ್ರೀಯ ಹೆದ್ದಾರಿ ಮತ್ತು ಇತರ ರಸ್ತೆಗಳ ದುರಸ್ತಿ ಬಗ್ಗೆ ಇಲಾಖಾಧಿಕಾರಿಗಳ ಸಭೆಯಲ್ಲಿ ಸಂಸದರು ಈ ಸೂಚನೆ ನೀಡಿದ್ದಾರೆ.
ಬಿ.ಸಿ. ರೋಡ್‌ನಿಂದ ಸುರತ್ಕಲ್‌ವರೆಗಿನ ಹೆದ್ದಾರಿ ಹದಗೆಟ್ಟಿದ್ದು, ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಳೆ ಕಡಿಮೆಯಾದರೂ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಕಾಮಗಾರಿ ಪೂರ್ಣಗೊಳಿಸಲು ಇನ್ನೆಷ್ಟು ಸಮಯ ಬೇಕು ಎಂದು ಅಧಿಕಾರಿಗಳನ್ನು ನಳಿನ್ ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅಧಿ ಕಾರಿಗಳು, ಮಂಗಳೂರು- ಸುರತ್ಕಲ್ ಹೆದ್ದಾರಿಯಲ್ಲಿ ಮುಂದಿನ 10 ದಿನಗಳೊಳಗೆ ಮತ್ತು ಬಿ.ಸಿ.ರೋಡ್‌ನಿಂದ ಮಂಗಳೂರು ವರೆಗೆ ಈ ತಿಂಗಳ ಅಂತ್ಯದೊಳಗೆ ಗುಂಡಿ ಮುಚ್ಚಲಾಗುವುದು ಎಂದು ತಿಳಿಸಿದರು.
ಪಂಪ್‌ವೆಲ್, ಮೂಲ್ಕಿ, ಉಳ್ಳಾಲ ಸರ್ವೀಸ್ ರಸ್ತೆ ಕೂಡ ಗುಂಡಿ ಬಿದ್ದಿದ್ದು, ಸಂಚಾರ ಕಷ್ಟವಾಗಿದೆ. ಪ್ರತೀ ದಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ರಸ್ತೆಗುಂಡಿಯಿಂದ ವಾಹನ ಸವಾರರು ಅಪಘಾತಕ್ಕೆ ಒಳಗಾದರೆ ನಿಮ್ಮ ಮೇಲೆಯೇ ಕ್ರಿಮಿನಲ್ ಕೇಸ್ ಹೂಡಬೇಕಾಗುತ್ತದೆ ಎಂದು ಹೆದ್ದಾರಿ ಅಧಿಕಾರಿಗಳಿಗೆ ಸಂಸದರು ಕಠಿನ ಎಚ್ಚರಿಕೆ ನೀಡಿದರು. ಇನ್ನೆರಡು ದಿನಗಳೊಳಗಾಗಿ ಕೆಲಸ ಪ್ರಾರಂಭಿಸುತ್ತೇವೆ ಎಂದು ಅಧಿಕಾರಿ ಗಳು ಭರವಸೆ ನೀಡಿದರು.
ಬಿ.ಸಿ. ರೋಡ್, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿ ಸಂಪರ್ಕದ ಹೆದ್ದಾರಿಯಲ್ಲಿ ಗುಂಡಿ ಬಿದ್ದಿದ್ದು, ಸರಿಯಾದ ರೀತಿಯಲ್ಲಿ ಗುಂಡಿ ಮುಚ್ಚುತ್ತಿಲ್ಲವಲ್ಲ ಎಂದು ಸಂಸದರು ಪ್ರಶ್ನಿಸಿದರು. ಉತ್ತರಿಸಿದ ಎಲ್ ಆ್ಯಂಡ್ ಟಿ ಕಂಪೆನಿ ಅಧಿಕಾರಿಗಳು, ರೆಖ್ಯಾ- ಗುಂಡ್ಯ- ಉಪ್ಪಿನಂಗಡಿವರೆ ಗಿನ ಗುಂಡಿ ಮುಚ್ಚುವ ಕೆಲಸ ನಡೆದಿದೆ. ಬಿ.ಸಿ. ರೋಡ್- ಮಾಣಿ ನಡುವೆ ವಾಹನ ಸಂಚಾರ ಹೆಚ್ಚಾಗಿರುವುದರಿಂದ ದುರಸ್ತಿ ಕಾರ್ಯ ವಿಳಂಬವಾಗಿದೆ ಎಂದರು.
ಬಿ.ಸಿ. ರೋಡ್ ಸುಂದರೀಕರಣ ಯೋಜನೆಗೆ ಅ.21ರಂದು ಚಾಲನೆ ದೊರೆಯಲಿದೆ. ಬಿ.ಸಿ. ರೋಡ್ ಸುತ್ತ ಮುತ್ತಲಿನ ಪ್ರದೇಶಕ್ಕೆ ಸಿ.ಸಿ. ಕೆಮರಾ ಅಳವಡಿಸುವಿಕೆ, ಬಸ್ ನಿಲ್ದಾಣದ ಬಳಿ ವೃತ್ತ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅಂದು ಶಿಲಾನ್ಯಾಸ ನಡೆಯುತ್ತದೆ ಎಂದು ನಳಿನ್ ತಿಳಿಸಿದರು.
ಶಾಸಕ ರಾಜೇಶ್ ನಾಯ್ಕ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ದ.ಕ. ಜಿ.ಪಂ. ಸಿಇಒ ಡಾ| ಆರ್. ಸೆಲ್ವಮಣಿ, ಎಸ್‌ಪಿ ಲಕ್ಷ್ಮೀಪ್ರಸಾದ್, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಪಂಪ್‌ವೆಲ್ ಫ್ಲೈಓವರ್‌ಗೆ ಕೊನೆ ಗಡುವು!
ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಬಗ್ಗೆ ಅಧಿಕಾರಿಗಳ ವಿರುದ್ಧ ನಳಿನ್ ಮತ್ತೆ ಆಕ್ರೋಶ ವ್ಯಕ್ತಪಡಿಸಿದರು. “ಗಡುವು ನೀಡಿ ಸಾಕಾಗಿದೆ. ನವಯುಗ ಸಂಸ್ಥೆಗೆ ಇದು ಕೊನೆಯ ಗಡುವು. ಈ ವರ್ಷಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಜನವರಿಯಲ್ಲಿ ಫ್ಲೈ ಓವರ್ ಉದ್ಘಾಟನೆಗೆ ವ್ಯವಸ್ಥೆ ಮಾಡಬೇಕು’ ಎಂದು ಎಚ್ಚರಿಸಿದರು.