Advertisement
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಳೆದ ಜನವರಿಯಿಂದ 99 ಮಾರಣಾಂತಿಕ, 283 ಸಾಮಾನ್ಯ ಅಪಘಾತಗಳು ಸಂಭವಿಸಿದ್ದು, 111 ಮಂದಿ ಸಾವಿಗೀಡಾಗಿದ್ದರೆ, 442 ಮಂದಿ ಗಾಯಗೊಂಡಿದ್ದಾರೆ. ನೂರಾರು ಕುಟುಂಬಗಳ ಬದುಕನ್ನು ಕರಾಳಗೊಳಿಸಿರುವ ಈ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ ಎಂಬುದು ಇದೀಗ ಸಾಲು ಸಾಲು ಪರಿಶೀಲನೆಯಿಂದ ವೇದ್ಯವಾಗಿದ್ದು, ಈ ಸಾವು ನೋವಿನ ಹೊಣೆ ಹೊರುವವರು ಯಾರು ಎಂಬ ಪ್ರಶ್ನೆ ಇದೀಗ ಎದುರಾಗಿದೆ.
Related Articles
Advertisement
ಹೈವೇನಲ್ಲಿ ಹತ್ತಾರು ಸಮಸ್ಯೆ: ಶಾಶ್ವತ ಪರಿಹಾರ ಯಾವಾಗ?: ಎಕ್ಸ್‌ಪ್ರೆಸ್ ಹೈವೇ ಕಾಮಗಾರಿ ಆರಂಭದಿಂದಲೂ ಲೋಪದಿಂದ ಕೂಡಿದೆ ಎಂದು ಹೇಳಲಾಗುತಿತ್ತು. ಇದೀಗ ಟ್ರಯಲ್ ಬೇಸ್‌ನಲ್ಲಿ ಇದು ಸಾಬೀತಾಗಿದ್ದು, ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ ಎಂಬುದಕ್ಕೆ ಇಷ್ಟೊಂದು ಸಮಿತಿಗಳು ಪರಿಶೀಲನೆ ಮಾಡುತ್ತಿರುವುದೇ ಸಾಕ್ಷಿಯಾಗಿದೆ. ಇನ್ನು ಹೆದ್ದಾರಿಯಲ್ಲಿ ಪೊಲೀಸರನ್ನ ನಿಲ್ಲಿಸಿ ದಂಡ ಹಾಕುತ್ತಿರುವುದು ಸೇರಿದಂತೆ ಇದುವರೆಗೆ ಪೊಲೀಸ್ ಇಲಾಖೆ ಕೈಗೊಂಡಿರುವ ತಾತ್ಕಾಲಿಕ ಪರಿಹಾರಗಳು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಹೀಗಾಗಿ, 119 ಕಿ.ಮೀ. ಉದ್ದದ ರಸ್ತೆಯಲ್ಲಿ ಸುಮಾರು 25 ಬ್ಲಾಕ್‌ಸ್ಪಾಟ್ ಗಳನ್ನು ಪೊಲೀಸ್ ಇಲಾಖೆ ಗುರುತಿಸಿದ್ದು, ಈ ಬ್ಲಾಕ್‌ಸ್ಪಾಟ್‌ಗಳ ಬಳಿ ಸುರಕ್ಷತಾ ಕಾಮಗಾರಿ ಸೇರಿದಂತೆ ಅಗತ್ಯ ಕ್ರಮಗಳನ್ನು ಎನ್‌ಎಚ್‌ಎಐ ಯಾವಾಗ ಕೈಗೊಳ್ಳಲಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಇನ್ನು ಎಕ್ಸ್‌ಪ್ರೆಸ್ ವೇನದಲ್ಲಿ ರೆಸ್ಟ್ ಏರಿಯಾ, ಹೆಲಿಪ್ಯಾಡ್, ಟ್ರಾಮ ಸೆಂಟರ್, ತುರ್ತು ಸನ್ನಿವೇಶಗಳಲ್ಲಿ ಎಂಟ್ರಿ-ಎಕ್ಸಿಟ್, ಸೂಚನಾ ಫಲಕಗಳ ಅಳವಡಿಕೆ, ಓಪನ್ ಟೋಲ್‌ನಿಂದ ಕ್ಲೋಸ್ ಟೋಲ್ ಮಾರ್ಪಾಡು ಸೇರಿದಂತೆ ಇನ್ನು ಅನೇಕ ಕೆಲಸ ಬಾಕಿ ಉಳಿದಿದ್ದು, ಇವುಗಳನ್ನು ಯಾವಾಗ ಪೂರ್ಣಗೊಳಿಸುವರು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
ಎಕ್ಸ್‌ಪ್ರೆಸ್‌ವೇನಲ್ಲಿ ಸಮಸ್ಯೆಗಳನ್ನು ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಕೆಲವೆಡೆ ಕಾಮಗಾರಿಯಲ್ಲಿ ಲೋಪಗಳು ಕಂಡು ಬಂದಿವೆ. ಸಮಸ್ಯೆ ನಿರ್ಮಾಣವಾದ ಬಳಿಕ ಪೊಲೀಸರನ್ನು ಸರಿ ಮಾಡಲು ಬನ್ನಿ ಎನ್ನುತ್ತಿದ್ದಾರೆ. ಎಲ್ಲಾ ಸಮಸ್ಯೆಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಮೌಖೀಕ ವರದಿ ನೀಡಲಾಗಿದೆ. ● ಅಲೋಕ್ ಕುಮಾರ್,ಎಡಿಜಿಪಿ, ಸಂಚಾರ ಮತ್ತು ಸುರಕ್ಷತಾ ವಿಭಾಗ
ಎಕ್ಸ್‌ಪ್ರೆಸ್ ವೇ ಕಾಮಗಾರಿಗೆ 8 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಖರ್ಚಾಗಿದೆ ಎಂದು ಎನ್‌ಎಚ್‌ಎಐ ಅಧಿಕೃತ ಪ್ರಕಟಣೆ ತಿಳಿಸಿದೆ. ಇಷ್ಟೊಂದು ದುಬಾರಿ ಹಣದ ರಸ್ತೆ ಅವ್ಯವಸ್ಥೆಗಳು ಇದೀಗ ಬಯಲಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಮೃತರಾಗಿರುವ ಕುಟುಂಬಗಳಿಗೆ ಎನ್‌ಎಚ್‌ಎಐ ಹಾಗೂ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಜನರ ಜೀವ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು. – ಮಲ್ಲಿಕಾರ್ಜುನ್, ಸಾಮಾಜಿಕ ಹೋರಾಟಗಾರ, ಕನಕಪುರ
– ಸು.ನಾ.ನಂದಕುಮಾರ್