ಹೊಸದಿಲ್ಲಿ: ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬದಿಯ ಬಾರ್‌ಗಳನ್ನು ಮುಚ್ಚಿಸುವ ಹೈಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ಬಂದ ಬೆನ್ನಲ್ಲೇ, ವಸತಿ ಪ್ರದೇಶಗಳ ಸನಿಹದಲ್ಲಿರುವ ಮದ್ಯ ದಂಗಡಿಗಳನ್ನು ಮುಚ್ಚಿಸುವ ತಮ್ಮ ಬೇಡಿಕೆ ಈಡೇರಿಸಲು ನಿರಾಸಕ್ತಿ ತೋರಿದ ಜಿಲ್ಲಾಡಳಿತದ ಕ್ರಮಕ್ಕೆ ಬೇಸತ್ತ ಮಹಿಳೆಯರ ಗುಂಪೊಂದು ಮದ್ಯದಂಗಡಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಫೂಲ್‌ಗಡಿ ಪ್ರದೇಶದಲ್ಲಿ ನಡೆದಿದೆ. ಬೆಳಗ್ಗೆ 7 ಗಂಟೆಗೆ ಮದ್ಯದಂಗಡಿ ಬಾಗಿಲು ತೆರೆಯುತ್ತಿದ್ದಂತೆ ಅಂಗಡಿಗೆ ನುಗ್ಗಿದ ಮಹಿಳೆಯರು, ಅಲ್ಲಿನ ಸಿಬಂದಿಯನ್ನು ಥಳಿಸಿದ್ದಾರೆ. ಅನಂತರ ಮದ್ಯದ ಬಾಟಲಿಗಳನ್ನು ಒಡೆದು, ಇಡೀ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ.
10 ಲಕ್ಷ ಉದ್ಯೋಗ ನಷ್ಟ: ಇದೇ ವೇಳೆ ಸುಪ್ರೀಂಕೋರ್ಟ್ ಆದೇಶದಿಂದಾಗಿ ದೇಶಾದ್ಯಂತ 10 ಲಕ್ಷ ಉದ್ಯೋಗ ನಷ್ಟ ಉಂಟಾಗಲಿದೆ ಎಂದು ನೀತಿ ಆಯೋಗದ ಮುಖ್ಯಸ್ಥ ಅಮಿತಾಭ್ ಕಾಂತ್ ಟ್ವೀಟ್ ಮಾಡಿದ್ದಾರೆ. ಅದನ್ನೇಕೆ ಕೊಲ್ಲಬೇಕೆಂದು ಪ್ರಶ್ನಿಸಿದ್ದಾರೆ.
ಆದೇಶ ಜಾರಿ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ 500 ಮೀ. ವ್ಯಾಪ್ತಿಯಲ್ಲಿನ ಮದ್ಯ ದಂಗಡಿಗಳನ್ನು ಮುಚ್ಚಿಸುವ ಸುಪ್ರೀಂ ಕೋರ್ಟ್ ಆದೇಶ ಎ.1ರಿಂದ ದೇಶಾದ್ಯಂತ ಜಾರಿಯಾಗಿದೆ. ಹೆದ್ದಾರಿ ಸಮೀಪದಲ್ಲಿರುವ ಪ್ರತಿಷ್ಠಿತ ಕ್ಲಬ್, ಪಂಚತಾರಾ ಹೊಟೇಲ್‌ಗಳು ಮತ್ತು ಪಬ್‌ಗಳ ಸುತ್ತ ‘ಒಣಹವೆ’ ಮುಂದುವರಿದಿದೆ. ಈ ದಿಢೀರ್ ಬೆಳವಣಿಗೆಯಿಂದ ಬಹುತೇಕ ಬೊಕ್ಕಸಕ್ಕೆ ಭಾರೀ ನಷ್ಟವಾಗಿದೆ ಎಂದು ಮದ್ಯ ಮಾರಾಟಗಾರರು, ವಿವಿಧ ರಾಜ್ಯಗಳ ಪ್ರಮುಖರು ಬೇಸರ ವ್ಯಕ್ತಪಡಿಸಿದ್ದಾರೆ.