ಮೈಸೂರು: ರೈತರ ಕೃಷಿ ಸಾಲ ಮನ್ನಾ ಹಾಗೂ ಕೃಷಿ ಉತ್ಪನ್ನಗಳಿಗೆ ಡಾ. ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿ ಮೂಲಕ ವೈಜಾnನಿಕ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ರಾಷ್ಟ್ರೀಯ ಕಿಸಾನ್ ಮಹಾಸಂಘದ ಆಶ್ರಯದಲ್ಲಿ ದೇಶಾದ್ಯಂತ 153ಕ್ಕೂ ಹೆಚ್ಚು ರೈತ ಸಂಘಟನೆಗಳ ವತಿಯಿಂದ ಆ.9ರಂದು ಹೆದ್ದಾರಿ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು. ಸರ್ಕಾರ ಪೊಲೀಸರ ಮೂಲಕ ಚಳವಳಿ ಹತ್ತಿಕ್ಕಲು ಯತ್ನಿಸಿದರೆ ಜೈಲ್ ಭರೋ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತರ ನೈಜ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಸರ್ಕಾರಗಳು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಭಾವನಾತ್ಮಕ ವಿಚಾರಗಳನ್ನು ಬಿಂಬಿಸಿ, ಜನರನ್ನು ಪ್ರಚೋದಿಸಿ ರಾಜಕಾರಣ ಮಾಡುವ ಮೂಲಕ ಹೊಣೆಗೇಡಿತನ ತೋರಿಸುತ್ತಿವೆ. ಆದ್ದರಿಂದ ರೈತರು ಹಳ್ಳಿ ಹಳ್ಳಿಗಳಲ್ಲಿ ಶಾಂತಿಯುತವಾಗಿ ಸ್ವಯಂ ಪ್ರೇರಿತರಾಗಿ ಚಳವಳಿ ನಡೆಸಿ, ಸರ್ಕಾರಗಳ ಕಣ್ಣು ತೆರೆಸಲು ದೇಶಾದ್ಯಂತ ಏಕಕಾಲದಲ್ಲಿ ಹೆದ್ದಾರಿ ಬಂದ್ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದರು.
ಸತತ ಬರಗಾಲದಿಂದ ರೈತರು ತತ್ತರಿಸಿದ್ದು, ಈ ಬಾರಿಯೂ ಮಳೆ ಇಲ್ಲದೆ ಜಲಾಶಯಗಳು ಬರಿದಾಗಿವೆ. ರಾಜ್ಯ ಸರ್ಕಾರ ಮಾಡಿರುವ ಸಾಲಮನ್ನಾ ರೈತರ ಕಣ್ಣೊರೆಸುವ ತಂತ್ರವಾಗಿದ್ದು ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಸಕ್ತ ಸಾಲಿನಲ್ಲಿ ಬೆಳೆ ತೆಗೆಯಲು ನೀರಿಲ್ಲದ ಕಾರಣ ಬೆಳೆ ನಷ್ಟದ ಬದಲಿಗೆ, ಬರ ನಷ್ಟ ಪರಿಹಾರ ಘೋಷಿಸಿ ರೈತ ಕುಟುಂಬದ ನಿರ್ವಹಣೆಗಾಗಿ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಜಾರಿಗೊಳಿಸಬೇಕು. ಪ್ರಸಕ್ತ ಸಾಲಿನಲ್ಲಿ ಕಬ್ಬಿಗೆ ಎಸ್‌ಎಪಿ ಬೆಲೆ ನಿರ್ಧಾರವಾಗದ ಕಾರಣ ಕಾರ್ಖಾನೆಗಳು ರೈತರ ಕಬ್ಬಿಗೆ ಅಂತಿಮ ಕಂತಿನ ಹಣ ಪಾವತಿಸಿಲ್ಲ. ಮುಂದಿನ ಸಾಲಿಗೂ ದರ ನಿಗಧಿಯಾಗದೆ ರೈತರಿಗೆ ತೊಂದರೆಯಾಗಿದೆ, ತಕ್ಷಣವೇ ದರ ನಿಗಧಿಗೊಳಿಸಬೇಕೆಂದರು.
ಜಲಾಶಯಗಳಲ್ಲಿ ಈಗಿರುವ ನೀರನ್ನು ಕೆರೆ ಕಟ್ಟೆಗಳಿಗೆ ತುಂಬಿಸಿ, ನಾಲೆಗಳಿಗೆ ಬಿಡುವ ಮೂಲಕ ಅಂತರ್ಜಲ ಹೆಚ್ಚಿಸಲು ಸರ್ಕಾರ ಮುಂದಾಗಬೇಕು. ರಾಜ್ಯದ ರೈತರ ನೈಜ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಸಿಎಂ ಸಿದ್ದರಾಮಯ್ಯ ತಮ್ಮ ತಪ್ಪು ಮುಚ್ಚಿಕೊಳ್ಳಲು ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುತ್ತಿದ್ದಾರೆ. ಇವರು ರಾಜ್ಯದ ಮುಖ್ಯಮಂತ್ರಿಯೋ, ತಮಿಳುನಾಡಿನ ಮುಖ್ಯಮಂತ್ರಿಯೋ ಎಂಬುದು ತಿಳಿಯುತ್ತಿಲ್ಲ ಎಂದು ಲೇವಡಿ ಮಾಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಜಿಲ್ಲಾ ಸಂಚಾಲಕ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಬರಡನಪುರ ನಾಗರಾಜ್ ಇದ್ದರು.