ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಾಗಿ ಭೂಮಿಯ ಮಾಲಕರಿಗೆ ನೀಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 21,38,40,039 ರೂ. ಮಂಜೂರು ಮಾಡಿದೆ. ಹೊಸದುರ್ಗ ಗ್ರಾಮದಲ್ಲಿ 11,11,45,557 ರೂ., ಬಲ್ಲ ಗ್ರಾಮದಲ್ಲಿ 7,15,51,500 ರೂ., ಕುಂಜತ್ತೂರು ಗ್ರಾಮದಲ್ಲಿ 3,11,42,982 ರೂ. ಮಂಜೂರು ಮಾಡಲಾಗಿದೆ. ಭೂ ದಾಖಲೆ ಪತ್ರ ಹಾಜರುಪಡಿಸುವ ಅನುಸಾರ ಇವರ ಬ್ಯಾಂಕ್ ಖಾತೆಗೆ ಹಣ ಪಾವತಿಸಲಾಗುವುದು. ನ್ಯಾಯಾಲಯದಲ್ಲಿ ಪ್ರಕರಣಗಳಿರುವ ಭೂಮಿಯ ಹಣವನ್ನು ನ್ಯಾಯಾಲಯದಲ್ಲಿ ಕಟ್ಟಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರವು ತಿಳಿಸಿದೆ. ಇದುವರೆಗೆ ಭೂ ಮಾಲಕರಿಗೆ ನೀಡಲು ರಾಷ್ಟ್ರೀಯ ಪ್ರಾಧಿಕಾರವು ಮಂಜೂರುಗೊಳಿಸಿದ ಒಟ್ಟು ಹಣ 67.69 ಕೋಟಿ ರೂ. ಆಗಿದೆ. 3.1129 ಹೆಕ್ಟೇರ್ ಭೂಮಿಯಲ್ಲಿ ಒಟ್ಟು 272 ಮಂದಿ ಮಾಲಕರಿಗೆ ಹಣ ಮಂಜೂರುಗೊಳಿಸಲಾಗಿದೆ.
ನೀಲೇಶ್ವರ, ಪಳ್ಳಿಕ್ಕೆರೆ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ನೀಲೇಶ್ವರ, ಪೇರೋಲ್ ಗ್ರಾಮಗಳಲ್ಲಿ 42 ಮಂದಿ ಮಾಲಕರಿಂದ ಸ್ವಾಧೀನಪಡಿಸಿದ ಭೂಮಿಗೆ ನೀಡಲು 17,36,64,900 ರೂ. ಪ್ರಾಧಿಕಾರವು ಮಂಜೂರುಗೊಳಿಸಿದೆ. 1.065 ಹೆಕ್ಟೇರ್ ಭೂಮಿಗಿರುವ ಹಣ ಇದಾಗಿದೆ. ಹೆದ್ದಾರಿ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿದ ಭೂಮಿಗೆ ನೀಡಲು ಪ್ರಾಧಿಕಾರದ ಭೂಸ್ವಾಧೀನ ವಿಭಾಗದ ಸಹಾಯಕ ಜಿಲ್ಲಾಧಿಕಾರಿ ಆಗ್ರಹಿಸಿರುವುದನ್ನು ಅನುಸರಿಸಿ ಪ್ರಾಧಿಕಾರವು ಹಂತ ಹಂತವಾಗಿ ಹಣ ಮಂಜೂರು ಮಾಡುತ್ತಿದೆ.
ಹೆದ್ದಾರಿ ಅಭಿವೃದ್ಧಿಗೆ 10.4180 ಹೆಕ್ಟೇರ್ ಹೆಚ್ಚುವರಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಬಡಾಜೆ, ಬಂಗ್ರಮಂಜೇಶ್ವರ, ಹೊಸಬೆಟ್ಟು, ಮುಳಿಂಜ, ಶಿರಿಯ, ಆರಿಕ್ಕಾಡಿ, ಮೊಗ್ರಾಲ್, ಕೂಡ್ಲು, ಕಾಸರಗೋಡು, ಚೆಂಗಳ, ತೆಕ್ಕಿಲ್, ಪನಯಾಲ್, ಪೆರಿಯ, ಪುಲ್ಲೂರು, ಅಜಾನೂರು, ಬಲ್ಲ, ಕಾಂಞಂಗಾಡು, ನೀಲೇಶ್ವರ, ಪೇರೋಲ್, ಚೆರುವತ್ತೂರು, ಪಿಲಿಕ್ಕೋಡು ಗ್ರಾಮಗಳಲ್ಲಿ ಸರಕಾರಿ ಸ್ಥಳವನ್ನೊಳಗೊಂಡ ಭೂಮಿ ಇದಾಗಿದೆ.
ಬೆಲೆ ನಿರ್ಣಯ ಪ್ರಕ್ರಿಯೆಗಳು ಪೂರ್ಣವಾದಲ್ಲಿ ಭೂಮಿಗೆ ಹಣ ಮಂಜೂರುಗೊಳಿಸಿ ಆದೇಶ ಹೊರಡಿಸಲಾಗುವುದು. ಹಲವು ಸ್ಥಳಗಳಲ್ಲಿ ಭೂಮಿಯ ನಿಖರವಾದ ದಾಖಲೆಗಳಿಲ್ಲದ ಹೆಸರಿನಲ್ಲಿ ಸ್ಥಳ ಸ್ವಾಧೀನಪಡಿಸುವಿಕೆ, ಭೂಮಿಯ ಬೆಲೆ ನೀಡುವುದು ಇತ್ಯಾದಿ ವಿಳಂಬಕ್ಕೆ ಕಾರಣವಾಗುತ್ತಿದೆ. ವಿವಿಧ ವಿಭಾಗಗಳನ್ನು ಏಕೋಪನಗೊಳಿಸುವ ಕಾರ್ಯಾಚರಣೆಯ ಅಭಾವ ಮುಂತಾದವು ಕೂಡ ಪ್ರಾಧಿಕಾರಕ್ಕೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಗಳು ವಿಳಂಬಗೊಳ್ಳಲು ಕಾರಣವಾಗುತ್ತಿದೆ. ಶೇಕಡಾ 65ರಷ್ಟು ಭೂಮಿ ಹಸ್ತಾಂತರಿಸಿದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿರ್ಮಾಣ ಕಾಮಗಾರಿ ಆರಂಭಿಸಬಹುದು ಎಂದು ತಿಳಿಸಲಾಗಿದೆ.
ಬೆಲೆ ನಿರ್ಣಯ ಪೂರ್ಣಗೊಂಡಿಲ್ಲ
ಕಾಸರಗೋಡು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಆಸುಪಾಸುಗಳಲ್ಲಿ ಕಟ್ಟಡ, ಆಸ್ಪತ್ರೆ ಮೊದಲಾದವುಗಳ ಬೆಲೆ ನಿರ್ಣಯ ಪ್ರಕ್ರಿಯೆಗಳು ಇನ್ನೂ ಪೂರ್ಣಗೊಂಡಿಲ್ಲ. ಇದುವೇ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಪ್ರಧಾನ ಅಡಚಣೆಯಾಗಿದೆ. ಹೆದ್ದಾರಿ ಅಭಿವೃದ್ಧಿಗೆ ಸ್ವಾಧೀನಪಡಿಸಿದ 79 ಹೆಕ್ಟೇರ್ ಭೂಮಿಯಲ್ಲಿ 3.1129 ಹೆಕ್ಟೇರ್ ಭೂಮಿಯ ಹಸ್ತಾಂತರ ಪ್ರಕ್ರಿಯೆಗಳು ಮಾತ್ರ ಸಮರ್ಪಕವಾಗಿ ಪೂರ್ಣಗೊಂಡಿವೆ. ಉಳಿದ ಭೂಮಿಯ ವಿಚಾರ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.