ನೆಲಮಂಗಲ: ಒಬ್ಬ ಮಹಿಳೆಗಾಗಿ ಇಬ್ಬರು ಪುರುಷರು ಪರಸ್ಪರ ಹೊಡೆದಾಡಿದ ಘಟನೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಾವಿಕೆರೆ ಕ್ರಾಸ್‌ಬಳಿ ನಡೆದಿದೆ. ನೆಲಮಂಗಲ ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದ ಸಿದ್ದು ಹಾಗೂ ಬೆಂಗಳೂರಿನ ಕಮ್ಮನಹಳ್ಳಿ ಗ್ರಾಮದ ಮೂರ್ತಿ ಜಗಳವಾಡಿದ ಗಂಡಸರು. ಅಸಲಿಗೆ ಇವರಿಬ್ಬರೂ ಹೊಡೆದಾಡಿರುವುದು, ಶಶಿಕಲಾ ಎಂಬ ಮಹಿಳೆ “ನನ್ನ ಹೆಂಡತಿ’ ಎಂಬ ವಿಚಾರಕ್ಕೆ.
ಮೂಲತಃ ಚಿಕ್ಕಬಿದರಕಲ್ಲು ಗ್ರಾಮದ ಶಶಿಕಲಾ (28), 13 ವರ್ಷಗಳ ಹಿಂದೆ ರಂಗಸ್ವಾಮಿ ಎಂಬಾತನನ್ನು ವಿವಾಹವಾಗಿದ್ದಳು. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ದಂಪತಿ ನಡುವೆ ವೈಮನಸ್ಸು ಉಂಟಾಗಿ 2009ರಲ್ಲಿ ವಿಚ್ಛೇದನಕ್ಕೆ ಅರ್ಜಿಸಲ್ಲಿಸಿದ ಶಶಿಕಲಾ, ಅಂದಿನಿಂದಲೇ ರಂಗಸ್ವಾಮಿಯಿಂದ ಪ್ರತ್ಯೇಕವಾಗಿ ವಾಸವಿದ್ದಳು.
ಈ ನಡುವೆ ರಮೇಶ್ ಎಂಬಾತನ ಜತೆ ಸ್ನೇಹ, ಸಲುಗೆ ಬೆಳೆಸಿಕೊಂಡ ಶಶಿಕಲಾ, ಲಿವಿಂಗ್ ಟುಗೆದರ್ ವ್ಯವಸ್ಥೆಯಲ್ಲಿದ್ದಳು. 2017ರಲ್ಲಿ ರಂಗಸ್ವಾಮಿಯಿಂದ ಕಾನೂನು ರೀತಿ ವಿಚ್ಛೇದನ ದೊರೆತ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಅಷ್ಟರಲ್ಲೇ ಇಬ್ಬರ ನಡುವೆ ಮನಸ್ಥಾಪ ಉಂಟಾಗಿ ಮದುವೆ ಪ್ರಸ್ತಾಪ ಮುರಿದು ಬಿದ್ದಿತ್ತು ಎನ್ನಲಾಗಿದೆ.
ಇಬ್ಬರಿಗೂ ಮದುವೆ ಮಾತು!: ಈ ನಡುವೆ ಕಮ್ಮನಹಳ್ಳಿಯಲ್ಲಿ ಎಲೆಕ್ಟ್ರಿಕಲ್ ಕೆಲಸಮಾಡಿಕೊಂಡಿದ್ದ ಮೂರ್ತಿ ಎಂಬಾತನ ಜತೆ ಶಶಿಕಲಾಗೆ ಪ್ರೇಮಾಂಕುರವಾಗಿದೆ. ಮೂರ್ತಿ ಜತೆ ಪ್ರೀತಿಯಲ್ಲಿ ಬಿದ್ದಿದ್ದ ಶಶಿಕಲಾ, ಅತ್ತ 7 ತಿಂಗಳಿಂದ ತ್ಯಾಮಗೊಂಡ್ಲು ಹೋಬಳಿಯ ಸಿದ್ದು ಎಂಬ ಯುವಕನನ್ನೂ ಪ್ರೀತಿಸತೊಡಗಿದ್ದಳು.
ಇಬ್ಬರೂ ಪರಸ್ಪರ ಕೈಹಿಡಿದು ಊರೂರು ಓಡಾಡಿಕೊಂಡಿದ್ದರು. ಅಲ್ಲದೆ ವಿವಾಹವಾಗುವುದಾಗಿ ಮೂರ್ತಿ ಹಾಗೂ ಸಿದ್ದು ಇಬ್ಬರಿಗೂ ಶಶಿಕಲಾ ಮಾತು ಕೊಟ್ಟಿದ್ದಳು. ಆದರೆ, ಶಶಿಕಲಾಳ ಹಿನ್ನೆಲೆ ಮತ್ತು ಆಕೆ ಆಡುತ್ತಿದ್ದ ಆಟ ಅರಿಯದ ಮೂರ್ತಿ ಮತ್ತು ಸಿದ್ದು, ಮದುವೆ ಆಗದಿದ್ದರೂ “ಆಕೆ ನನ್ನ ಹೆಂಡತಿ’ ಎನ್ನುತ್ತಾ ಮನಸೋ ಇಚ್ಛೆ ಬೈದಾಡಿಕೊಂಡು, ಹೊಡೆದಾಡಿದ್ದಾರೆ. ರಸ್ತೆಯಲ್ಲಿ ಬಿದ್ದು ಹೊರಳಾಡಿದ್ದಾರೆ.
ಗಾಯ ಮಾಡಿಕೊಂಡಿದ್ದಾರೆ. ತಮ್ಮವಳಲ್ಲದ ಹೆಣ್ಣಿಗಾಗಿ ರಕ್ತ ಕೂಡ ಹರಿಸಿದ್ದಾರೆ. ಇವರ ಜಗಳ ಕಂಡ ಸಾರ್ವಜನಿಕರಿಗೂ ಶಶಿಕಲಾ ಯಾರ ಹೆಂಡತಿ ಎಂದು ತಿಳಿಯಲಿಲ್ಲ. ಪ್ರಕರಣ ಪೊಲಿಸ್ ಠಾಣೆ ಮೆಟ್ಟಿಲೇರಿದ ಬಳಿಕವಷ್ಟೇ ಆಕೆ ಯಾರನ್ನೂ ಮದುವೆಯಾಗಿಲ್ಲ ಎಂದು ತಿಳಿದುಬಂದಿದೆ. ಶಶಿಕಲಾ ಆಡಿದ ಆಟದ ಕಥೆ ಕೇಳಿ ಪೊಲಿಸರು ಕೂಡ ಅರೆ ಕ್ಷಣ ಕಂಗಾಲಾದರು.
ಪ್ರಕರಣ ಸಂಬಂಧ ಯಾರೂ ದೂರು ನೀಡಿಲ್ಲ. ಆದರೆ ಸಾರ್ವಜನಿಕ ಸ್ಥಳದಲ್ಲಿ ಶಾಂತಿಗೆ ಭಂಗ ತಂದ ಹಿನ್ನೆಲೆಯಲ್ಲಿ ಮೂವರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಪೊಲಿಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ದಾಳೇಗೌಡ ತಿಳಿಸಿದ್ದಾರೆ.