Advertisement

ಪರ್ಕಳ ಪೇಟೆಯ ಹೆದ್ದಾರಿ ವಿಸ್ತರಣೆ ಕಾಮಗಾರಿ: ಕಟ್ಟಡ ತೆರವಿಗೆ ಸ್ಥಳೀಯರ ವಿರೋಧ

06:20 PM Apr 11, 2021 | Team Udayavani |

ಉಡುಪಿ: ರಾಷ್ಟ್ರೀಯ ಹೆದ್ದಾರಿ 169(ಎ) ವಿಸ್ತರಣೆ ಕಾಮಗಾರಿ ಪರ್ಕಳ ಪೇಟೆಯಲ್ಲಿ ಆರಂಭವಾಗಿದ್ದು, ರವಿವಾರ ಪೇಟೆಯಲ್ಲಿದ್ದ ಕಟ್ಟಡ ತೆರವು ಕಾರ್ಯಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

Advertisement

ಕಟ್ಟಡ ತೆರವು ಮಾಡುವ ಬಗ್ಗೆ ಹೆದ್ದಾರಿ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡಿಲ್ಲ. ಅಲ್ಲದೆ ನೋಟಿಸ್‌ ಕೂಡ ಜಾರಿ ಮಾಡಿಲ್ಲ. ಏಕಾಏಕಿಯಾಗಿ ತೆರವು ಕಾರ್ಯ ಆರಂಭಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳಕ್ಕೆ ಮಣಿಪಾಲ ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಆಗಮಿಸಿ ಸ್ಥಳೀಯರನ್ನು ಮನವೊಲಿಸಿ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿದರು. ಆದರೆ ಸ್ಥಳೀಯರು ಹೆದ್ದಾರಿ ಪ್ರಾಧಿಕಾರದ ಹಿರಿಯ ಎಂಜಿನಿಯರ್‌ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.

ಕಾರ್ಯಾಚರಣೆಗೆ ವಿರೋಧ
ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ್‌ ಕಾಂಚನ್‌, ಮುಂದಾಳು ಅಮೃತ್‌ ಶೆಣೈ, ನೋಟಿಸ್‌ ಕೊಡದೆ ಕಟ್ಟಡ ತೆರವಿಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ವಿದ್ಯುತ್‌ ಸಂಪರ್ಕವನ್ನು ಸ್ಥಗಿತಗೊಳಿಸಿಲ್ಲ. ಇದು ಯಾವ ರೀತಿಯ ಕಾರ್ಯಾಚರಣೆ? ಪರಿಹಾರ ವಿತರಣೆ ಕುರಿತು ಸಂಶಯಗಳಿವೆ ಎಂದರು.

ಇದನ್ನೂ ಓದಿ :ಕೋವಿಡ್‌ ಭೀತಿ: ಮಲ್ಪೆ ಬೀಚ್‌, ಸೀವಾಕ್‌, ಐಲ್ಯಾಂಡ್‌ನ‌ಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ

Advertisement

ಎಂಜಿನಿಯರ್‌ರಿಂದ ಸ್ಪಷ್ಟನೆ
ಬಳಿಕ ಹಿರಿಯ ಎಂಜಿನಿಯರ್‌ ನಾಗರಾಜ್‌ ನಾಯ್ಕ… ಸ್ಥಳಕ್ಕೆ ಆಗಮಿಸಿ ಸ್ಪಷ್ಟನೆ ನೀಡಿದರು. ಈಗಾಗಲೇ ತೆರವು ಕಾರ್ಯದ ಬಗ್ಗೆ ಹಲವು ಸುತ್ತಿನ ಸಭೆ ನಡೆಸಲಾಗಿದೆ. ತ್ರಿಡಿ ನೋಟಿಫಿಕೇಶನ್‌ ಜಾರಿಗೊಳಿಸಿದ್ದು, ಇದರ ಬಳಿಕ ಈ ಜಾಗ ಕೇಂದ್ರ ಸರಕಾರದ ಸ್ವಾಧೀನಕ್ಕೆ ಬರುತ್ತದೆ. ಇದು ಕೊನೆಯ ನೋಟಿಸ್‌ ಆಗಿರುತ್ತದೆ ಎಂದರು.

ಖಾಲಿ ಕಟ್ಟಡ ಮೊದಲಿಗೆ ತೆರವು
ಆಗ ಸಂತ್ರಸ್ತರು ಹಾಗೂ ಎಂಜಿನಿಯರ್‌ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಇದೀಗ ಕಟ್ಟಡ ತೆರವು ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಖಾಲಿ ಇರುವ ಕಟ್ಟಡವನ್ನು ಮೊದಲು ತೆರವು ಮಾಡುತ್ತೇವೆ. ಬಳಿಕ ಅಂಗಡಿ ಮುಂಗಟ್ಟು ತೆರವಿಗೆ ಒಂದು ವಾರ ಕಾಲಾವಕಾಶ ಕೊಡುತ್ತೇವೆ ಎಂದು ಅವರು ತಿಳಿಸಿದರು.

ಶಾಸಕರಿಂದ ಮನವೊಲಿಕೆ
ಶಾಸಕ ಕೆ.ರಘುಪತಿ ಭಟ್‌ ಅವರೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸಿದರು. ಪರ್ಕಳ ಪೇಟೆ ಭಾಗದಲ್ಲಿ ರಸ್ತೆ ವಿಸ್ತರಣೆಗೆ ಭೂಸ್ವಾಧೀನ ಸಂಬಂಧ ಕಾಮಗಾರಿಗೆ ತಡೆಯಾಗಿತ್ತು. ಈಗ ಭೂಸ್ವಾಧೀನ ಪಡಿಸಲು 3ಎ ಸಿದ್ದಗೊಂಡು ಪರಿಹಾರ ಮಂಜೂರಾದ ಬಳಿಕ ಕಾಮಗಾರಿ ಆರಂಭಗೊಂಡಿದೆ. ಇದಕ್ಕೆ ಸಂಬಂಧಿಸಿದ ಪರಿಹಾರ ಪ್ರಕ್ರಿಯೆಗಳು ತ್ವರತಗತಿಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next