Advertisement

ಹೆದ್ದಾರಿ ಸಂಚಾರ: ಎಚ್ಚೆತ್ತುಕೊಳ್ಳದಿದ್ದರೆ ಇನ್ನಷ್ಟು ಅಪಾಯ

08:41 AM Sep 19, 2019 | mahesh |

“ಎನ್‌ಎಚ್‌ ಎಷ್ಟು ಸುರಕ್ಷಿತ?’ ಉದಯವಾಣಿ ಸರಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯ ವಾಸ್ತವ ವರದಿ ಈ ಕಂತಿನೊಂದಿಗೆ ಮುಕ್ತಾಯಗೊಳ್ಳುತ್ತಿದೆ. ನಮ್ಮ ವರದಿಗೆ ಪೂರಕವಾಗಿ ಈ ಭಾಗದ ಓದುಗರು ಪ್ರತಿಕ್ರಿಯೆಗಳನ್ನು ವ್ಯಕ್ತ ಪಡಿಸಿದ್ದು, ಆಯ್ದ ಕೆಲವು ಇಲ್ಲಿವೆ.

Advertisement

ಇರ್ಕಾನನ್ನು ಕಪ್ಪುಪಟ್ಟಿಗೆ ಸೇರಿಸಬೇಕು
ಸುರತ್ಕಲ್‌ನಿಂದ ನಂತೂರುವರೆಗೆ ಇರ್ಕಾನ್‌ ಕಂಪೆನಿಯವರು ನಿರ್ಮಿಸಿದ ರಾ. ಹೆದ್ದಾರಿಯಲ್ಲಿ ಪ್ರತೀ ವರ್ಷದ ಮಳೆಗೆ ಹೊಂಡ ಉಂಟಾಗುತ್ತವೆ. ಮಳೆ ಮುಗಿದ ಬಳಿಕ ದುರಸ್ತಿ ನಡೆಯುತ್ತದೆ. ಮತ್ತಿನ ಮಳೆಗಾಲದಲ್ಲಿ ಅದೇ ಕತೆ. ಒಮ್ಮೆ ಹಾಕಿದ ಡಾಮರ್‌ ಕನಿಷ್ಠ ಐದು ವರ್ಷ ಬಾಳಿಕೆ ಬರುವ ಹಾಗೆ ಕಟ್ಟುನಿಟ್ಟಾದ ಶರತ್ತು ವಿಧಿಸಬೇಕು. ಹೊಂಡ ಬಿದ್ದಲ್ಲಿ ದುರಸ್ತಿ ಪಡಿಸುವ ಜವಾಬ್ದಾರಿಯೂ ವಹಿಸಬೇಕು. ತಪ್ಪಿದಲ್ಲಿ ಮುಲಾಜಿಲ್ಲದೆ ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಆ ಕಂಪೆನಿಯ ಯಾವುದೇ ಕಾಮಗಾರಿಯ ಎಲ್ಲ ಬಿಲ್‌ಗ‌ಳನ್ನು ತಡೆ ಹಿಡಿಯಬೇಕು. ಇದನ್ನು ಕಠಿನವಾಗಿ ಜಾರಿಗೆ ತಂದರೆ ಮಾತ್ರ ಹೆದ್ದಾರಿಯ ಸ್ಥಿತಿಗತಿ ಕೊಂಚವಾದರೂ ಸುಧಾರಿಸಬಹುದೇನೋ.
– ಸಂತೋಷ್‌, ಮೂಲ್ಕಿ

ಪೇರಮೊಗ್ರು ಸೇತುವೆಯಲ್ಲೂ ಅಪಾಯ ಕಾದಿದೆ
ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ. ರೋಡ್‌ – ಉಪ್ಪಿನಂಗಡಿ ನಡುವೆ ಎದ್ದಿರುವ ಬೃಹತ್‌ ಹೊಂಡಗಳಿಂದಾಗಿ ಸುಗಮ ಸಂಚಾರಕ್ಕೆ ತಡೆಯಾಗಿದೆ. ರಸ್ತೆ ಅಗಲಗೊಳಿಸುವ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಪೇರಮೊಗ್ರು ಎಂಬಲ್ಲಿ ಕಿರು ಸೇತುವೆಯು ಹೊಂಡಗಳಿಂದ ಕೂಡಿದ್ದು, ಸೇತುವೆಯ ಪಾರ್ಶ್ವಗಳು ಕುಸಿಯುವ ಭೀತಿಯನ್ನು ಎದುರಿಸುತ್ತಿವೆ. ತಾತ್ಕಾಲಿಕವಾಗಿ ರಿಫ್ಲೆಕ್ಟರ್‌ ಬಳಸಿ ತಡೆಗೋಡೆ ರಚಿಸಲಾಗಿದೆ. ಇನ್ನೊಂದು ಪಾರ್ಶ್ವವು ತಡೆಗೋಡೆಯನ್ನೂ ಹೊಂದಿರದೆ ಬೈಕ್‌ ಸವಾರರಿಗೆ ಅಪಾಯಕಾರಿಯಾಗಿದೆ.
– ಸುದೀಪ್‌ ಶೆಟ್ಟಿ, ಪೇರಮೊಗ್ರು

ಹೆದ್ದಾರಿಗೂ ಗ್ಯಾಂಗ್‌ಮೆನ್‌ ಬೇಕು
ರಾಷ್ಟ್ರೀಯ ಹೆದ್ದಾರಿ 75ರ ಮಾಣಿ- ಬಿ.ಸಿ. ರೋಡ್‌ ರಸ್ತೆಯಲ್ಲಿ ಹಲವು ಗಜಗಾತ್ರದ ಹೊಂಡಗಳೇ ತುಂಬಿದ್ದು, ಹೊಸ ಅಪಘಾತ ವಲಯಗಳು ಸೃಷ್ಟಿಯಾಗಿವೆ. ರಸ್ತೆಯ ಇಕ್ಕೆಲಗಳ ಚರಂಡಿಗೆ ಮಳೆನೀರು ಸಮರ್ಪಕವಾಗಿ ಹರಿಯದೆ ರಸ್ತೆಯಲ್ಲೇ ನಿಂತು ಡಾಮರು ಕಿತ್ತುಹೋಗಿ ಹೊಂಡಗಳು ಸೃಷ್ಟಿಯಾಗಿವೆ. ಪ್ರತೀ ಮಳೆಗಾಲದಲ್ಲಿ ತುರ್ತು ದುರಸ್ತಿಗಾಗಿ ಹೆ¨ªಾರಿಯಲ್ಲಿ ಅಗತ್ಯ ಸಲಕರಣೆಗಳೊಂದಿಗೆ ಕೆಲಸಗಾರರನ್ನು ರೈಲ್ವೇ ಗ್ಯಾಂಗ್‌ಮನ್‌ ಮಾದರಿಯಲ್ಲಿ ನಿಯೋಜಿಸಿದರೆ ಸಾರ್ವಜನಿಕರ ಪ್ರಾಣರಕ್ಷಣೆಯೊಂದಿಗೆ ಅಪಘಾತ ಮುಕ್ತ ಸಂಚಾರವೂ ಸಾಧ್ಯ.
– ಸಂತೋಷ್‌ ಕಾಮತ್‌, ಉಪ್ಪಿನಂಗಡಿ

ಪತ್ರಿಕೆಯ ಕಾರ್ಯಕ್ಕೆ ಅಭಿನಂದನೆ
ದಕ್ಷಿಣ ಕನ್ನಡ ಜಿಲ್ಲೆಯ ಜನರು ಶಾಂತಿಪ್ರಿಯರು, ಬುದ್ಧಿವಂತರೂ ಹೌದು. ಆದರೆ ಮೂರು ವರ್ಷಗಳಿಂದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ- ಬಿ.ಸಿ. ರೋಡ್‌ ಭಾಗವನ್ನು ಚತುಷ್ಪಥವಾಗಿ ಅಗಲಗೊಳಿಸುವ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಜನಪ್ರತಿನಿಧಿಗಳು ಮೌನವಾಗಿರುವುದನ್ನು ನೋಡುವಾಗ ಅಭಿವೃದ್ಧಿಯ ಪರ ಕಾಳಜಿ ಅವರಿಗಿಲ್ಲ ಎಂಬುದು ಖಾತರಿಯಾಗುತ್ತದೆ. ಸಂಸದರು ಈ ಬಗ್ಗೆ ಕೇಂದ್ರ ಸರಕಾರದ ಹೆದ್ದಾರಿ ಇಲಾಖೆಗೆ ಒತ್ತಡ ಹೇರಿ ಜನರ ಈ ಪರದಾಟಕ್ಕೆ ಮುಕ್ತಿ ನೀಡಬೇಕಾಗಿರುವುದು ಅನಿವಾರ್ಯವಾಗಿದೆ. “ಉದಯವಾಣಿ’ ಪತ್ರಿಕೆಯು ಈ ಹಿಂದೆಯೂ ಹಲವು ಬಾರಿ ಈ ಬಗ್ಗೆ ಜನರ ಗಮನಸೆಳೆದಿದೆ; ಪತ್ರಿಕೆಯ ಸಾಮಾಜಿಕ ಕಾರ್ಯಕ್ಕೆ ಅಭಿನಂದನೆಗಳು.
– ಹಸೈನಾರ್‌ ಟಿ., ತಾಳಿತ್ತನೂಜಿ

Advertisement

ತೆರಿಗೆ ಕಟ್ಟಿಯೂ ಇಂಥ ರಸ್ತೆಯಲ್ಲಿ ಸಂಚರಿಸುವ ದೌರ್ಭಾಗ್ಯ!
ನಮ್ಮ ಜಿಲ್ಲೆಯಲ್ಲಿ ಹಾದುಹೋಗುವ ರಾ.ಹೆ.ಗಳ ಪೈಕಿ ರಾ.ಹೆ. 75ರಲ್ಲಿ ಗರಿಷ್ಠ ವಾಹನಗಳು ಸಂಚರಿಸುತ್ತವೆ. ಇಲ್ಲಿ ಅಪಘಾತಗಳೂ ಅಧಿಕ. ಈ ರಸ್ತೆಯನ್ನು ಚತುಷ್ಪಥವಾಗಿಸಲು ಕಾಮಗಾರಿ ಪ್ರಾರಂಭಗೊಂಡು ಹಲವು ವರ್ಷ ಕಳೆಯಿತು. ಈಗ ಹಲವು ಕಾರಣಗಳಿಂದ ಕಾಮಗಾರಿ ನಿಲ್ಲಿಸಲಾಗಿದೆ. ಆದರೆ ಕಾಮಗಾರಿ ಸಂದರ್ಭದಲ್ಲಿ ಅಗೆಯಲಾದ ಗುಂಡಿಗಳು ರಸ್ತೆಯ ಅಂಚಿನಲ್ಲಿ ಹಾಗೆಯೇ ಇದ್ದು, ದಿನನಿತ್ಯ ಸಂಚರಿಸುವ ಪ್ರಯಾಣಿಕರು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ. ರಾತ್ರಿಯ ವೇಳೆ, ಮಳೆ ಬಂದಾಗ ರಸ್ತೆ ಯಾವುದು -ಹೊಂಡ ಯಾವುದು ತಿಳಿಯುವುದೇ ಇಲ್ಲ. ಬಿ. ಸಿ. ರೋಡ್‌ನಿಂದ ಉಪ್ಪಿನಂಗಡಿಯ ವರೆಗಿನ ಪ್ರಯಾಣವಂತೂ ಶತ್ರುವಿಗೂ ಬೇಡ. ನಾವು ಇಷ್ಟೆಲ್ಲ ತೆರಿಗೆ ಕಟ್ಟಿ ಇಂತಹ ರಸ್ತೆಯಲ್ಲಿ ಸಂಚರಿಸಬೇಕೇ? ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಬೇಗನೆ ಕಾಮಗಾರಿ ಮುಕ್ತಾಯಗೊಳಿಸಿ, ಸುಸಜ್ಜಿತವಾದ ರಸ್ತೆ ನಿರ್ಮಿಸಿಕೊಡಿ. ಹೆದ್ದಾರಿ ಪ್ರಾಧಿಕಾರ ಕಾರಣಗಳನ್ನು ಬದಿಗಿಟ್ಟು ಆದಷ್ಟು ಬೇಗ ಕ್ರಮಗಳನ್ನು ತೆಗೆದುಕೊಂಡು ಸಮಸ್ಯೆಗೆ ಕಡಿವಾಣ ಹಾಕಬೇಕು .
– ದೀಪಕ್‌ ಜೈನ್‌, ಉಪ್ಪಿನಂಗಡಿ

ಮೇಲ್ಸೇತುವೆ ನಿರ್ಮಿಸಬೇಕು
ಮಂಗಳೂರಿನ ಬಿಕರ್ನ ಕಟ್ಟೆ ಜಯಶ್ರೀ ಗೇಟು ಮೇಲ್ಸೇತುವೆ ಬಳಿ ಮೂಡುಬಿದಿರೆಗೆ ಹೋಗುವ ರಾ.ಹೆದ್ದಾರಿಯ ಭಾಗ ಬಹಳ ಕಿರಿದಾಗಿದೆ. ಇಲ್ಲಿ ಭಯಾನಕ ಹೊಂಡಗಳೂ ಇವೆ. ಇದು ಹಲವು ವರುಷಗಳ ಸಮಸ್ಯೆ. ರಾ. ಹೆ. ಇಲಾಖೆ ಮತ್ತು ಮಂಗಳೂರು ಮನಪಾ ಒಪ್ಪಂದ ಮಾಡಿಕೊಂಡು, ಅನುದಾನ ಪಾಲುದಾರಿಕೆಯಲ್ಲಿ ಬಿಕರ್ನಕಟ್ಟೆಯಿಂದ ಮಲ್ಲಿಕಟ್ಟೆಗೆ ಬರುವ ರಸ್ತೆಗೆ ಮತ್ತು ಆಕಾಶವಾಣಿ ಕಡೆಯಿಂದ ಕೆಪಿಟಿ ಕಡೆಗೆ ಹೋಗುವ ರಸ್ತೆಗೆ ಮೇಲ್ಸೇತುವೆ ನಿರ್ಮಿಸಬೇಕು. ಸೇತುವೆಯ ಕೆಳಗಡೆ ಷಟ³ಥವಾಗಿರಬೇಕು. ಹೀಗೆ ಮಾಡಿದರೆ ವಾಹನ ದಟ್ಟನೆ ಕಡಿಮೆಯಾಗಿ ಸುಗಮ ಸಂಚಾರ ಸಾಧ್ಯ.
– ಬಿ.ಎಲ…. ದಿನೇಶ್‌ ಕುಮಾರ್‌, ಮೂಡುಬಿದಿರೆ

ಕೊಟ್ಯಕಲ್‌ನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದೆ ಬಂಡೆ
ಹೆದ್ದಾರಿ ನಂ.75ರ ಶಿರಾಡಿ ಮತ್ತು ಗುಂಡ್ಯ ಮಧ್ಯೆ ಇರುವ ಕೊಟ್ಯಕಲ್‌ ಅನ್ನುವ ಸ್ಥಳದಲ್ಲಿ ರಸ್ತೆಯ ಮೇಲ್ಗಡೆ ಬಂಡೆ ಸಂಪೂರ್ಣವಾಗಿ ಬಿರುಕುಬಿಟ್ಟು ರಸ್ತೆಗೆ ಉರುಳಲು ತಯಾರಾಗಿ ನಿಂತಿದೆ. ಅಂದಹಾಗೆ ಇದು ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ್ದಲ್ಲ. ಗುತ್ತಿಗೆ ವಹಿಸಿಕೊಂಡಿರುವ ಎಲ್‌ ಆ್ಯಂಡ್‌ ಟಿ ಕಂಪೆನಿಯವರು ಚತುಷ್ಪಥ ಕಾಮಗಾರಿಗಾಗಿ ಬಂಡೆ ತೆರವು ಮಾಡಲು ಹೋಗಿ ಆದದ್ದು. ಆದರೆ ಅದು ಸಾಧ್ಯವಾಗದೆ ಅರ್ಧದಲ್ಲೇ ಗಂಟುಮೂಟೆ ಕಟ್ಟಿದಂತಿದೆ. ಆದರೆ ಹೆದ್ದಾರಿ ಪ್ರಾಧಿಕಾರದವರಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಇದರ ಬಗೆ ತಲೆಯೇ ಕೆಡಿಸಿಕೊಂಡಿಲ್ಲ.ರಸ್ತೆಯಂತೂ ಚಂದ್ರನ ಅಂಗಳದಂತಾಗಿದೆ. ಮಾನ್ಯ ಸಾರಿಗೆ ಸಚಿವರು ಹೊಸ ಸಾರಿಗೆ ದಂಡ ಸಂಹಿತೆ ಯನ್ನೇನೋ ತರಾತುರಿಯಲ್ಲಿ ಜಾರಿ ಮಾಡಿದ್ದಾರೆ. ಆದರೆ ಆ ಗುಣಮಟ್ಟದ ರಸ್ತೆಗಳಂತೂ ಇಲ್ಲ. ಕಡೇಪಕ್ಷ ವಿಮೆ ಮತ್ತು ತೆರಿಗೆಯಾದರೂ ಕಡಿಮೆ ಮಾಡಿ. ನೀವು ನಿರ್ಮಿಸಿರುವ ಚಂದ್ರನ ಮೇಲ್ಮೆ„ಯಂಥ ರಸ್ತೆಯಲ್ಲಿ ಓಡಿಸುವ ವಾಹನಗಳ ನಿರ್ವಹಣೆ, ಇಂಧನ ಕ್ಷಮತೆಯ ವೆಚ್ಚವಾದರೂ ಸರಿದೂಗಲಿ.
– ವಿನೋದ್‌ ಕುಮಾರ್‌, ಗುಂಡ್ಯ

ಸುಂಕ ವಸೂಲಾತಿ ಮಾತ್ರ ಅಲ್ಲ
ಹೆದ್ದಾರಿ ಹದಗೆಟ್ಟಿರುವುದು ನಿಜ. ಆದರೆ ಈ ವರ್ಷದ ಅಧಿಕ ಮಳೆಯ ಪರಿಣಾಮ ರಸ್ತೆಗೆ ಡಾಮರೀಕರಣ ಮಳೆಗಾಲದಲ್ಲಿ ಅಸಾಧ್ಯವಾಗಿತ್ತು. ಅದರ ಬದಲು ಮಳೆಗಾಲದಲ್ಲಿ ಪರ್ಯಾಯ ದುರಸ್ತಿ ಕೈಗೊಳ್ಳಬಹುದಿತ್ತು. ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಸುಂಕ ವಸೂಲಿ ಮಾಡುವುದು ಬಿಟ್ಟರೆ ಅಲ್ಲಿಯೇ ಪಕ್ಕದಲ್ಲೂ ರಸ್ತೆ ದುರಸ್ತಿ ಮಾಡುವುದಿಲ್ಲ.
– ಯಶೋಧರ ಕುಲಾಲ್‌, ವಗ್ಗ

ಬ್ಯಾರಿಕೇಡ್‌ಗಳಿಂದ ಅಪಘಾತ
ರಾ.ಹೆ. 75 ಮತ್ತು 66ರ ಅಪಘಾತಗಳಿಗೆ ಅವೈಜ್ಞಾನಿಕ ರಸ್ತೆ ವಿಭಾಜಕಗಳು ಪ್ರಮುಖ ಕಾರಣ. ಇವನ್ನು ವೈಜ್ಞಾನಿಕವಾಗಿ ಸರಿಪಡಿಸಿ, ಸೂಕ್ತ ಮುನ್ಸೂಚನೆ ಫ‌ಲಕಗಳನ್ನು ಅಳವಡಿಸಬೇಕು. ಬ್ಯಾರಿಕೇಡ್‌ಗಳು ಸುಗಮ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿವೆ, ಅವಘಡಗಳಿಗೆ ಕಾರಣವಾಗುತ್ತಿವೆ. ಇವನ್ನು ತೆರವುಗೊಳಿಸಬೇಕು. ಹೆದ್ದಾರಿಯ ಸುರಕ್ಷಿತ ಪ್ರಯಾಣಕ್ಕಾಗಿ “ಉದಯವಾಣಿ’ಯ ಕಾಳಜಿ ಪ್ರಶಂಸನೀಯ.
– ಕಿರಣ್‌, ತಲಪಾಡಿ

ಆಡಳಿತವನ್ನು ಎಚ್ಚರಿಸಿ
ನಮ್ಮ ರಾ.ಹೆ. 75 ಮತ್ತು 66ರಲ್ಲಿ ದಿನನಿತ್ಯ ಸಂಚರಿಸುವವರ ಬವಣೆ ಹೇಳತೀರದು. ಜನರಿಗೆ ಆಗುವ ತೊಂದರೆಯ ಬಗ್ಗೆ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸ ನಡೆಯಬೇಕು. ಪಾಣೆ ಮಂಗಳೂರು, ಮೆಲ್ಕಾರ್‌ ಮತ್ತು ಮಾಣಿಗಳಲ್ಲಿ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಈ ಹೆದ್ದಾರಿಯಲ್ಲಿ ಸಂಚರಿಸುವ ಸ್ಥಿತಿ ಇದೆ. ಇದು ನಿಜವಾಗಿಯೂ ನಮ್ಮ ದುರಂತವೇ ಸರಿ.
– ರಾಜೇಶ್‌ ಶೆಟ್ಟಿ, ಮಾಣಿ

ನೀವೂ ಸಮಸ್ಯೆ ತಿಳಿಸಿ
ದಕ್ಷಿಣ ಕನ್ನಡದ ತಲಪಾಡಿಯಿಂದ ಉಡುಪಿ ಜಿಲ್ಲೆಯ ಬೈಂದೂರು ಮೂಲಕ ಹಾದುಹೋಗುವ ರಾ.ಹೆ. 66ರಲ್ಲಿ ಹೆಚ್ಚುತ್ತಿರುವ ಅಪಘಾತಗಳು ಕೊನೆಯಾಗ ಬೇಕೆನ್ನುವುದು ಉದಯವಾಣಿ ಕಾಳಜಿ. ಈ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ನಿಮ್ಮ ಸಲಹೆ- ಅಭಿಪ್ರಾಯ, ಸಮಸ್ಯೆಗಳನ್ನು 9964169554 ಈ ಸಂಖ್ಯೆಗೆ ಫೂಟೋ ಸಮೇತ ವಾಟ್ಸಾ ಪ್‌ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next