ಬೆಳ್ತಂಗಡಿ: ಪುಂಜಾಲ ಕಟ್ಟೆಯಿಂದ ಚಾರ್ಮಾಡಿ ತನಕದ 35 ಕಿ.ಮೀ. ವ್ಯಾಪ್ತಿಯ ರಸ್ತೆ ಅಭಿ ವೃದ್ಧಿಗೆ ಸಮೀಕ್ಷೆಗಳು ನಡೆದಿದೆ. ಕೇಂದ್ರ ಸರಕಾರದಿಂದ 718 ಕೋಟಿ ರೂ. ಅನುದಾನ ಮಂಜೂರು ಗೊಂಡಿದೆ. ಸಮೀಕ್ಷೆ ನಡೆಸಿ ಗುರುತಿಸಿರುವ ಮರಗಳ ಕಟಾವು ಸಲುವಾಗಿ ಅಹವಾಲು ಸ್ವೀಕಾರ ಸಭೆ ನಿಶ್ಚಯವಾಗಿದೆ.
ಬೆಳ್ತಂಗಡಿ ಅರಣ್ಯ ಇಲಾಖೆಯ ಮಡಂತ್ಯಾರು, ಬೆಳ್ತಂಗಡಿ, ಉಜಿರೆ, ಚಿಬಿದ್ರೆ, ಚಾರ್ಮಾಡಿ ಉಪ ವಲಯಗಳಲ್ಲಿ 2,412ರಷ್ಟು ಮರಗಳನ್ನು ಕಡಿಯಲು ಗುರುತಿಸಲಾಗಿದೆ.
ಕರ್ನಾಟಕ ವೃಕ್ಷ ಸಂರಕ್ಷಣ ಕಾಯ್ದೆಯ ಪ್ರಕಾರ 50 ಕ್ಕಿಂತ ಹೆಚ್ಚು ಮರಗಳನ್ನು ತೆರವುಗೊಳಿಸಬೇಕಾದರೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಕ್ರಮಕೈಗೊಳ್ಳಬೇಕು. ಇದೀಗ ಈ ಪ್ರದೇಶದಲ್ಲಿ ಸಾವಿರಾರು ಮರಗಳನ್ನು ತೆರವುಗೊಳಿಸುವ ಅಗತ್ಯ ವಿದ್ದು ಈ ಬಗ್ಗೆ ಮಂಗಳೂರು ಡಿಎಫ್ಒ ಮೇ 31ರ 11.30ಕ್ಕೆ ಬೆಳ್ತಂಗಡಿ ಅರಣ್ಯಾಧಿಕಾರಿ ಕಚೇರಿಯಲ್ಲಿ ಅಹವಾಲು ಸ್ವೀಕಾರ ಸಭೆ ಕರೆ ದಿದ್ದಾರೆ.
ಒಂದು ಮರಕ್ಕೆ ಹತ್ತು ಗಿಡ
ತೆರವುಗೊಳಿಸುವ ಪ್ರತೀ ಮರಕ್ಕೆ 10 ಗಿಡಗಳನ್ನು ನೆಟ್ಟು ಅಭಿವೃದ್ಧಿಪಡಿಸಬೇಕು ಎಂಬ ನಿಯಮದ ಪ್ರಕಾರ ಇಲಾಖೆಗಳು ನಡೆದುಕೊಳ್ಳಬೇಕು. ಹೊಸದಾಗಿ ನೆಡುವ ಗಿಡಗಳನ್ನು ಸಾಕಿ ಸಲಹುವ ಜವಾಬ್ದಾರಿ ಅರಣ್ಯ ಇಲಾಖೆಗೆ ಒಳಪಡುತ್ತದೆ. ಮರಗಳು ತೆರವುಗೊಳ್ಳುವ ಪ್ರಕ್ರಿಯೆಗೆ ಮೊದಲು ರಾ.ಹೆ. ಇಲಾಖೆಯು ಅರಣ್ಯ ಇಲಾಖೆಗೆ ಮೊತ್ತವನ್ನು ಪಾವತಿಸ ಬೇಕಾಗುತ್ತದೆ. ಇದೀಗ ಈ ರಸ್ತೆ ವ್ಯಾಪ್ತಿಯಲ್ಲಿ ತೆರವುಗೊಳಿಸಲು ಗುರುತಿಸಲಾಗಿರುವ ಮರಗಳ ಮೌಲ್ಯ ನಿರ್ಧಾರ ಅಂತಿಮ ಹಂತದಲ್ಲಿದೆ.
ಉದ್ದೇಶದಂತೆ ಕಾಮಗಾರಿ ನಡೆದಾಗ ಈಗಿರುವ ಅಪಾಯಕಾರಿ ಮರಗಳಿಂದಲೂ ಮುಕ್ತಿ ಸಿಗಲಿದ್ದು, ಸುಗಮ ಸಂಚಾರ, ಮೆಸ್ಕಾಂಗೆ ಅನುಕೂಲವಾಗಲಿದೆ.
ಚರ್ಚಿಸಿ ನಿರ್ಧಾರ
ಸಾರ್ವಜನಿಕರ ಅಹವಾಲುಗಳ ಆಧಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಕಂದಾಯ ಇಲಾಖೆಗಳ ಜತೆ ಚರ್ಚಿಸಿ ಗುರುತಿಸಲಾಗಿರುವ ಮರಗಳ ತೆರವಿನ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
–ಡಾ| ದಿನೇಶ್ ಕುಮಾರ್, ಡಿ.ಎಫ್.ಒ., ದ.ಕ.