ಸಕಲೇಶಪುರ: ರಾಜಕಾರಣಿಗಳ, ಅಧಿಕಾರಿಗಳ ಹಾಗೂ ಗುತ್ತಿಗೆದಾರ ಜೇಬು ತುಂಬಿಸುವ ರಾಷ್ಟ್ರೀಯ ಹೆದ್ದಾರಿ 75 ದುರಸ್ತಿ ಕಾಮಗಾರಿ ಹೆಸರಿನಲ್ಲಿ ದುಂದು ವೆಚ್ಚ ಮಾಡುವ ಬದಲು ಸಂಪೂರ್ಣವಾಗಿ ಮರು ಡಾಂಬರೀಕರಣ ಕಾಮಗಾರಿ ಆರಂಭಿಸುವುದೇ ಸೂಕ್ತ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಸಂಪೂರ್ಣ ಹಾಳಾಗಿರುವ ರಸ್ತೆ: ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಕರಾವಳಿಯ ಪ್ರಮುಖ ನಗರಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ಹಾಸನ ದಿಂದ ಮಾರನಹಳ್ಳಿವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿ ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ನಿರಂತರವಾಗಿ 3 ದಿನಗಳ ಕಾಲ ಪ್ರತಿಭಟನೆ ಮಾಡಲಾಗಿತ್ತು.
ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಈ ಕುರಿತು ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸೌಧ ದಲ್ಲಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
7 ಕೋಟಿ ರೂ. ಅನುದಾನ ಬಿಡುಗಡೆ: ರಸ್ತೆ ದುರಸ್ತಿ ಕಾಮಗಾರಿಗೆ ಬಿಡುಗಡೆಯಾಗಿರುವ 7 ಕೋಟಿ ರೂ.ಅನುದಾನದಲ್ಲಿ ಶೀಘ್ರಕಾಮಗಾರಿ ಆರಂಭಿಸದಿದ್ದಲ್ಲಿ ಹಣವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿನಾವೇ ಕಾಮಗಾರಿ ಮಾಡಿಸುತ್ತೇವೆ ಎಂದಿದ್ದಾರೆ. ರಸ್ತೆ ದುರಸ್ತಿಗೆ ಹಣ ಸಾಕಾಗದಿದ್ದಲ್ಲಿ ಇನ್ನೂ ಹೆಚ್ಚು ಹಣ ಬಿಡುಗಡೆ ಮಾಡುವ ಭರವಸೆ ಯನ್ನು ಸಚಿವರು ನೀಡಿದ್ದಾರೆ. ಹಾಸನದಿಂದ ಮಾರನಹಳ್ಳಿವರೆಗಿನ ಸುಮಾರು 55 ಕಿ.ಮೀ. ರಸ್ತೆ ಮರು ಡಾಂಬರೀಕರಣ ಮಾಡಲು ಸುಮಾರು 30ಕೋಟಿ ರೂ. ಬೇಕಾಗಬಹುದೆಂದು ಈ ಹಿಂದೆ ಅಂದಾಜಿಸಲಾಗಿತ್ತು. 7 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಕಾಮಗಾರಿಗಾಗಿ ಈ ರೀತಿಕೋಟ್ಯಂತರ ರೂ. ಬಿಡುಗಡೆ ಮಾಡುವ ಬದಲು ಶಾಶ್ವತವಾಗಿ ಮರು ಡಾಂಬರೀಕರಣ ಮಾಡುಬಹುದಿತ್ತು. ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಈಗಾಗಲೇ ತಾಲೂಕಿನಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ಮರು ಡಾಂಬರೀಕರಣ ಕಾರ್ಯಕ್ಕೆ ಟೆಂಡರ್ ಕರೆದು ಪ್ರಕ್ರಿಯೆ ನಡೆಸಲು 15ರಿಂದ 20 ದಿನಗಳು ಬೇಕಾಗಿದ್ದು ಇನ್ನು 20 ದಿನಗಳ ನಂತರ ಅಗತ್ಯಅನುದಾನ ಪಡೆದು ಮರುಡಾಂಬರೀಕರಣಮಾಡಬಹುದಿತ್ತು.
ಟೆಂಡರ್ ಮುಗಿದ ನಂತರ ಎರಡೂ ಭಾಗಗಳಿಂದ ಕಾಮಗಾರಿ ಆರಂಭಿಸಿದ್ದಲ್ಲಿ ವೇಗವಾಗಿ ಕಾಮಗಾರಿ ಮುಗಿಸಬಹುದು. ಕಳೆದ ಒಂದು ವರ್ಷಗಳಿಂದ ನರಕ ಅನುಭವಿಸಿರುವ ಸಾರ್ವಜನಿಕರು ಇನ್ನು ಒಂದು ತಿಂಗಳು ಕಾಮಗಾರಿ ವಿಳಂಬವಾಗಿದಲ್ಲಿ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಕೋಟ್ಯಂತರ ರೂ. ವೆಚ್ಚ: ಈಗಾಗಲೇ ಹೆದ್ದಾರಿ ದುರಸ್ತಿ ಹೆಸರಿನಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡಿದ್ದರೂ ರಸ್ತೆ ಅಭಿವೃದ್ಧಿಯಾಗದೇ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸರ್ಕಾರ ಮತ್ತೂಮ್ಮೆ ರಾಷ್ಟ್ರೀಯ ಹೆದ್ದಾರಿದುರಸ್ತಿ ಕಾರ್ಯಕ್ಕೆ ಅಧಿಕೃತವಾಗಿ ಹಣ ಬಿಡುಗಡೆ ಮಾಡುತ್ತಿರುವುದು ಅಧಿಕಾರಿಗಳು, ಗುತ್ತಿಗೆದಾರ ರಿಗೆ ಹಬ್ಬವಾಗುವುದರಲ್ಲಿ ಅನುಮಾನವಿಲ್ಲ.
-ಸುಧೀರ್ ಎಸ್.ಎಲ್