ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪೇಟೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣದ ವಿಚಾರದಲ್ಲಿ ಸ್ಥಳೀಯರು ಮತ್ತು ಹೈವೇ ಗುತ್ತಿಗೆದಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಗುರುವಾರ ಬೆಳಿಗ್ಗೆ ಉಚ್ಚಿಲ ಪೇಟೆಯಲ್ಲಿ ಸರ್ವಿಸ್ ರಸ್ತೆ ರಚನೆಗಾಗಿ ಅನಧಿಕೃತ ಗೂಡಂಗಡಿ ಮತ್ತು ಕಟ್ಟಡಗಳ ತೆರವಿಗೆ ಜೆಸಿಬಿ ಸಹಿತವಾಗಿ ಹೆದ್ದಾರಿ ಗುತ್ತಿಗೆದಾರ ಕಂಪನಿಯು ಆಗಮಿಸಿದ್ದು ಅಂಗಡಿಗಳ ಮಾಲಕರು ಕಾಮಗಾರಿಗೆ ತಡೆಯೊಡ್ಡುವ ಪ್ರಯತ್ನ ನಡೆಸಿದರು.
ಇದನ್ನೂ ಓದಿ:ಕೆಲಸಕ್ಕಿದ್ದ ಮನೆಯಲ್ಲೇ 60 ಲಕ್ಷ ರೂ. ಮೌಲ್ಯದ ಚಿನ್ನ ದರೋಡೆ: ನೇಪಾಳಿ ಗ್ಯಾಂಗ್ ಬಂಧನ
ಈ ಸಂದರ್ಭದಲ್ಲಿ ಗೂಡಂಗಡಿ ಮಾಲಕರ ಜೊತೆಗೆ ಸ್ಥಳೀಯರು ಕೂಡ ಕೈ ಜೋಡಿಸಿದ್ದು ಘರ್ಷಣೆಯ ವಾತಾವರಣ ಉಂಟಾಗಿತ್ತು. ಗುತ್ತಿಗೆದಾರ ಕಂಪನಿಯು ಪೊಲೀಸ್ ಬಲದೊಂದಿಗೆ ಕಾಮಗಾರಿ ಆರಂಭಿಸಲು ಮುಂದಾಗಿದ್ದು ಸ್ಥಳೀಯರ ಒತ್ತಡದ ಹಿನ್ನೆಲೆಯಲ್ಲಿ ಅಕ್ರಮ ತೆರವು ಕಾರ್ಯಾಚರಣೆ ಒಂದೂವರೆ ಗಂಟೆ ವಿಳಂಭವಾಗಿದೆ.
ಕೆಲವು ಅಂಗಡಿಯವರು ಪೊಲೀಸರು, ಸ್ಥಳೀಯಾಡಳಿತ ಮತ್ತು ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರ ಮನವೊಲಿಕೆಗೆ ಸ್ಪಂದಿಸಿ, ಗೂಡಂಗಡಿಗಳ ತೆರವಿಗೆ ಸಮ್ಮತಿ ಸೂಚಿಸಿದ ಬಳಿಕ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಅಂಗಡಿಗಳನ್ನು ತೆರವುಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ಇದನ್ನೂ ಓದಿ: ಶಿರೂರು: ಅತೀ ವೇಗದಿಂದ ಬೈಕ್ ಚಲಾಯಿಸಿದ 15ರ ಬಾಲಕ; ಡಿವೈಡರ್ ಗೆ ಢಿಕ್ಕಿ, ಸ್ಥಳದಲ್ಲೇ ಸಾವು!
ಈ ಸಂದರ್ಭದಲ್ಲಿ ನವಯುಗ್ ಕಂಪೆನಿಯ ಟೋಲ್ ವ್ಯವಸ್ಥಾಪಕ ಶಿವಪ್ರಸಾದ್ ರೈ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಉಚ್ಚಿಲದಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಎರಡೂ ಬದಿಯಲ್ಲಿ 30 ಮೀಟರ್ ಅಗಲದವರೆಗೆ ಹೆದ್ದಾರಿ ಇಲಾಖೆಯು ಸ್ವಾಧೀನ ಪಡಿಸಿಕೊಂಡಿರುವ ಪ್ರದೇಶದಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಪಡುಬಿದ್ರಿ ಎಸ್ಸೈ ದಿಲೀಪ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು