Advertisement

ಚಿಗರಳ್ಳಿ ಕ್ರಾಸ್‌ನಲ್ಲಿ ಹೆದ್ದಾರಿ ಬಂದ್‌

09:36 AM Jun 11, 2019 | Team Udayavani |

ಕಲಬುರಗಿ: ರಾಜ್ಯ ಸಮ್ಮಿಶ್ರ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲೆಯ ಜೇವರ್ಗಿ ತಾಲೂಕು ಚಿಗರಳ್ಳಿ ಕ್ರಾಸ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ನೇತೃತ್ವದಲ್ಲಿ ರೈತರು ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ರದ್ದತಿ ಒತ್ತಾಯಿಸಿ ಸೋಮವಾರ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಹೆದ್ದಾರಿ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬೀದರ-ಶ್ರೀರಂಗ ಪಟ್ಟಣ ರಾಜ್ಯ ಹೆದ್ದಾರಿ-218 ಚಿಗರಳ್ಳಿ ಕ್ರಾಸ್‌ ಹತ್ತಿರ ವಾಹನ ಸಂಚಾರ ತಡೆದರು.

ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್‌ ಸ್ಥಳಕ್ಕೆ ಬರಬೇಕೆಂದು ರೈತ ಮುಖಂಡರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಎರಡು ಗಂಟೆಗಳ ಕಾಲ ನಿರಂತರ ಪ್ರತಿಭಟನೆಯಿಂದಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆಂಬ್ಯುಲೆನ್ಸ್‌ ಸೇರಿದಂತೆ ತುರ್ತು ವಾಹನಗಳಿಗೆ ಪೊಲೀಸರು ಪರ್ಯಾಯ ರಸ್ತೆ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ದೇಶದಲ್ಲಿ 2004ನೇ ಸಾಲಿಗಿಂತ ಮೊದಲು ಇದ್ದ ಭೂಸ್ವಾಧೀನ ಕಾಯ್ದೆ ರಿಯಲ್ ಎಸ್ಟೇಟ್ ಕುಳಗಳು ರೈತರ ಜಮೀನು ಅಕ್ರಮವಾಗಿ ಪಡೆಯಲು ಅನುಕೂಲವಾಗಿತ್ತು. ಇದೇ ಸಂದರ್ಭದಲ್ಲಿ ಎಸ್‌ಇಝಡ್‌, ಕೈಗಾರಿಕೆಗಳು ಹಾಗೂ ನಗರೀಕರಣದ ಹೆಸರಿನಲ್ಲಿ ದೇಶಾದ್ಯಂತ ರೈತರ ಭೂಮಿಯನ್ನು ಸ್ವಾಧಿಧೀನಪಡಿಸಿಕೊಳ್ಳಲಾಗಿದೆ. ರೈತರ ಜಮೀನನ್ನು ಮೂರು ಕಾಸಿಗೆ ಕಸಿದುಕೊಳ್ಳುವುದು ದಂಧೆಯಾಗಿದೆ. ಜಿಲ್ಲೆಯಲ್ಲಿ 500 ಎಕರೆ ರೈತರ ಭೂ ಸ್ವಾಧೀನ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರೈತರ ಒಪ್ಪಿಗೆ, ಮಾರುಕಟ್ಟೆ ದರದ ನಾಲ್ಕು ಪಟ್ಟು ಪರಿಹಾರ, ನಗರ ಪ್ರದೇಶಕ್ಕೆ ಹೊಂದಿಕೊಂಡಿದ್ದರೆ ಮಾರಾಟ ದರದ ಎರಡು ಪಟ್ಟು ಪರಿಹಾರ, ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಭೂ ಸ್ವಾಧೀನ, ಭೂಸ್ವಾಧೀನ ಮಾಡಿಕೊಂಡು ಐದು ವರ್ಷದೊಳಗೆ ಯೋಜನೆಗೆ ಬಳಕೆ ಮಾಡುವುದು ಇಲ್ಲದೇ ಹೋದಲ್ಲಿ ಭೂಮಿಯನ್ನು ರೈತರಿಗೆ ಮರಳಿಸುವುದು ಹಾಗೂ ಪುನರ್ವಸತಿ ಪರಿಹಾರವು ಹಣದ ರೂಪದಲ್ಲಿ ಇರುವುದು ಮುಂತಾದ ಷರತ್ತುಗಳ ಕಾಯ್ದೆಯನ್ನು ರಾಜ್ಯ ಸಮ್ಮಿಶ್ರ ಸರ್ಕಾರವು ತಿದ್ದುಪಡಿ ತಂದಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

Advertisement

ಭೂಸ್ವಾಧೀನದಲ್ಲಿ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿರುವುದು, ಹಿಡಿಗಂಟು ನೀಡಲು ಆದೇಶಿಸಿದ್ದು ರೈತರಿಗೆ ಮಾರಕವಾಗಿದೆ. ಕೂಡಲೇ ರಾಜ್ಯ ಸರ್ಕಾರ ತಿದ್ದುಪಡಿಯನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾನಿತರ ರೈತರು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ದೇಶದ ಬರಪೀಡಿತ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೇವು ಹಾಗೂ ನೀರಿನ ಸಮಸ್ಯೆಯಿಂದ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲಸಕ್ಕಾಗಿ ಕೃಷಿ ಕೂಲಿಕಾರರು ವಲಸೆ ಹೋಗುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು. ಜೇವರ್ಗಿ ಇನ್ಸ್‌ಪೆಕ್ಟರ್‌ ಮತ್ತು ಯಡ್ರಾಮಿ ಪೊಲೀಸ್‌ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ರೈತ ಮನವೊಲಿಸುವ ಕಾರ್ಯ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ಬಸುಗೌಡ ಗಂವಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ಲಾ ಪಟೇಲ್ ಮಾಲಿಬಿರಾದಾರ, ಜಿಲ್ಲಾ ಗೌರವಾಧ್ಯಕ್ಷ ಸೈಯದ್‌ ಗೌಸ್‌ ಮೈನುದ್ದೀನ್‌, ಶರಣಪ್ಪ ಜಂಬಾಳಿ ಬಿದನೂರ, ಬಾಬುರಾವ ಚವ್ಹಾಣ, ಮಲ್ಲಿಕಾರ್ಜುನ ಹೇರುಂಡಿ ಗಂವಾರ, ಬಾಬುರಾವ ಚಿಂಚೋಳಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next