Advertisement

ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ನಿತ್ಯ ಅಪಘಾತ

01:03 AM Feb 21, 2020 | Sriram |

ಕುಂದಾಪುರ: ನಗರದಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ವಾಹನಗಳ ಅಪಘಾತ ತಾಣವಾಗುತ್ತಿದೆ. ಗುರುವಾರ ಮುಂಜಾನೆ ಗೋವಾ ನೋಂದಣಿಯ ಕಾರೊಂದು ಅಪಘಾತಕ್ಕೀಡಾಗಿದೆ.

Advertisement

ದಿಢೀರ್‌ ತಿರುವು
ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬರುವಾಗ ವಿನಾಯಕ ಥಿಯೇಟರ್‌ ಬಳಿ ಹೆದ್ದಾರಿ ಮುಗಿದು ದಿಢೀರ್‌ ಸರ್ವಿಸ್‌ ರಸ್ತೆಗೆ ಪ್ರವೇಶ ಪಡೆಯಬೇಕಾಗುತ್ತದೆ. ಸೂಚನಾ ಫ‌ಲಕ ಸರಿ ಇಲ್ಲದ ಕಾರಣ, ಹೆದ್ದಾರಿ ಮುಗಿದು ಸರ್ವಿಸ್‌ ರಸ್ತೆಗೆ ಹೋಗಲು ಗೊಂದಲ ಉಂಟಾಗುವ ಕಾರಣ, ದಿಢೀರ್‌ ತಿರುವು ಆರಂಭವಾಗುವ ಕಾರಣ ವಾಹನಗಳು ನೇರ ಚಲಿಸುತ್ತವೆ. ಪರಿಣಾಮ ಅಲ್ಲಿ ಹಾಕಿದ ಮಣ್ಣಿನ ರಾಶಿ, ಹೆದ್ದಾರಿ ಕಾಮಗಾರಿಗೆ ತಂದು ಹಾಕಿದ ಸಿಮೆಂಟ್‌ ವಸ್ತುಗಳಿಗೆ ಢಿಕ್ಕಿ ಹೊಡೆಯುತ್ತಿವೆ. ಕೆಲವೊಮ್ಮೆ ಇಲ್ಲಿ ಲಾರಿಗಳೂ ನಿಂತಿರುತ್ತವೆ.

ಕತ್ತಲು

ಹೆದ್ದಾರಿಯಲ್ಲಿ ಹಂಗಳೂರಿನ ದುರ್ಗಾಂಬಾ ಗ್ಯಾರೇಜ್‌ನಿಂದ ಕುಂದಾಪುರ ಕಡೆಗೆ ಬರುವಾಗ ಯಾವುದೇ ಬೀದಿದೀಪಗಳು ಬೆಳಗುವುದಿಲ್ಲ. ಇದರಿಂದಾಗಿಯೂ ಗೊಂದಲ ಉಂಟಾಗುತ್ತದೆ. ರಾತ್ರಿ ವೇಳೆ ವಾಹನಗಳಿಗೆ ಈ ಕತ್ತಲಿನಿಂದಾಗಿಯೂ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಹೆದ್ದಾರಿ ಬೀದಿ ದೀಪಗಳನ್ನು ಆದಷ್ಟು ಶೀಘ್ರ ಬೆಳಗಿಸಬೇಕೆಂದು ಸಾರ್ವಜನಿಕರ ಬೇಡಿಕೆ ಇದೆ. ಅಷ್ಟಲ್ಲದೇ ಇಲ್ಲಿ ಯೂ ಟರ್ನ್ ಮಾಡುವುದಿದ್ದರೆ ಹೈ ಮಾಸ್ಟ್‌ ದೀಪ ಅಳವಡಿಸಬೇಕೆಂದು ಕೂಡಾ ಜನ ಆಗ್ರಹಿಸುತ್ತಾರೆ.

ಭರದ ಕಾಮಗಾರಿ
ಕಳೆದ ತಿಂಗಳಿನಿಂದ ಫ್ಲೈಓವರ್‌ ಸಂಪರ್ಕ ರಸ್ತೆಯ ಕಾಮಗಾರಿ ಭರದಿಂದ ನಡೆಯುತ್ತಿದೆ. ಫ್ಲೈಓವರ್‌ಗೆ ಹೋಗುವ ರಸ್ತೆಯ ಕಾಮಗಾರಿ ಪೂರ್ಣವಾಗುವ ಹಂತ ತಲುಪುತ್ತಿದ್ದು ಫ್ಲೈಓವರ್‌ಗೆ ಸ್ಪರ್ಶ ಮಾಡುವ ಕಾಮಗಾರಿ ನಡೆದಿಲ್ಲ. ವಿನಾಯಕ ಬಳಿ ಪಾದಚಾರಿ ಅಂಡರ್‌ಪಾಸ್‌ ನಡೆದಿದ್ದು, ಕೆಎಸ್‌ಆರ್‌ಟಿಸಿ ಬಳಿ ಕ್ಯಾಟಲ್‌ ಅಂಡರ್‌ಪಾಸ್‌ ಕಾಮಗಾರಿ ನಡೆದಿದೆ. ಇಲ್ಲಿ ಕೂಡಾ ಮಣ್ಣು ಹಾಕಿ ಫ್ಲೈಓವರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಎತ್ತರಿಸುವ ಕಾರ್ಯ ನಡೆದಿದೆ. ಒಟ್ಟಿನಲ್ಲಿ ಫ್ಲೈಓವರ್‌ ಕಾಮಗಾರಿ ವೇಗದಿಂದ ನಡೆಯುತ್ತಿದೆ ಎನ್ನುವುದು ನೋಡಿದಾಗಲೇ ಸ್ಪಷ್ಟವಾಗುವಂತಿದೆ.

ದೂರವಾಣಿ ಸ್ತಬ್ಧ
ಫ್ಲೈಓವರ್‌ ಕಾಮಗಾರಿಯ ನೆಪದಲ್ಲಿ ಆಗಾಗ ಬಿಎಸ್‌ಎನ್‌ಎಲ್‌ ದೂರವಾಣಿ ಕೇಬಲ್‌ಗ‌ಳನ್ನು ಹಾಳುಗೆಡವುತ್ತಿರುವ ಕಾರಣ ತೊಂದರೆಯಾಗುತ್ತಿದೆ. ಪ್ರತಿನಿತ್ಯ ಎಂಬಂತೆ ದೂರವಾಣಿಗಳು ಸ್ತಬ್ಧವಾಗುವ ಸಮಸ್ಯೆ ಉಂಟಾಗುತ್ತಿದೆ. ಬಿಎಸ್‌ಎನ್‌ಎಲ್‌ನಲ್ಲಿ ಸಿಬಂದಿ ಕೊರತೆ ಇರುವ ಕಾರಣ ಸರಿಪಡಿಸಲು ಸಿಬಂದಿ ಒದ್ದಾಡುವುದು ಕಂಡು ಬರುತ್ತಿದೆ. ಬಿಎಸ್‌ಎನ್‌ಎಲ್‌ ಸಮಸ್ಯೆಯಾದ ಕೂಡಲೇ ಬ್ಯಾಂಕಿಂಗ್‌ ವ್ಯವಹಾರಗಳಿಗೂ ತೊಂದರೆಯಾಗುತ್ತಿದೆ.

ಲೈಟ್‌ ಹಾಕಲಿ
ವಿನಾಯಕ ಬಳಿ ಹೈ ಮಾಸ್ಟ್‌ ದೀಪ ಹಾಕಲಿ. ಕತ್ತಲೆಯಿಂದಾಗಿಯೇ ಅನೇಕ ಅಪಘಾತಗಳು ಸಂಭವಿಸುತ್ತಿವೆ.
-ಮಹೇಶ್‌ ಶೆಣೈ,ರಿಕ್ಷಾ ಚಾಲಕ,ವಿನಾಯಕ ಬಳಿ ಸ್ಟಾಂಡ್‌

Advertisement

ಇಂದು ಸಂಸದೆ ಭೇಟಿ
ಸಂಸದೆ ಶೊಭಾ ಕರಂದ್ಲಾಜೆ ಅವರು ಫೆ. 21ಂದು ಬೆಳಗ್ಗೆ 11 ಗಂಟೆಗೆ ಕುಂದಾಪುರಕ್ಕೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next