Advertisement

26ಕ್ಕೆ ಕಬ್ಬು ಬೆಳೆಗಾರರಿಂದ ಹೆದ್ದಾರಿ ಬಂದ್‌

11:54 AM Nov 23, 2021 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಕಬ್ಬಿನ ದರ ನಿಗದಿ ಮಾಡುವುದು ಮತ್ತು ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿಗಳು ಇದುವರೆಗೂ ಸಭೆ ನಡೆಸದೇ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡಿಸಿ ಮತ್ತು ರೈತರ ವಿವಿಧ ಬೇಡಿಕೆಗಳ ಮುಂದಿಟ್ಟುಕೊಂಡ ನ.26ರಂದು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿ ಸಂಬಂಧ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಕಬ್ಬು ಬೆಳೆಗಾರರ ಸಭೆ ಕರೆಯಬೇಕಿತ್ತು. ಆದರೆ, ಸಕ್ಕರೆ ಕಾರ್ಖಾನೆಗಳ ಕಬ್ಬು ಅರಿಯುವುದು ಆರಂಭ ಮಾಡಿದ್ದರೂ ಸಹ ಇಲ್ಲಿಯವರೆಗೂ ಜಿಲ್ಲಾಧಿಕಾರಿಗಳು ಸಭೆ ಕರೆದಿಲ್ಲ. ಈ ಸಂಬಂಧ ಕಳೆದ ವಾರ ಹೋರಾಟ ನಡೆಸಿದ ಕಬ್ಬು ಬೆಳೆಗಾರರನ್ನು ಬಂಧಿಸಿದ್ದು ಅತಂತ್ಯ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ನಿತರ ರೈತರ ಮನವಿಯನ್ನಾದರೂ ಜಿಲ್ಲಾಧಿಕಾರಿ ಸ್ವೀಕರಿಸಬೇಕಿತ್ತು. ಇದನ್ನೂ ಮಾಡದೆ ರೈತರನ್ನು ಬಂಧಿಸುವ ಮೂಲಕ ಸರ್ವಾಧಿಕಾರಿ ವರ್ತನೆ ತೋರಿದ್ದಾರೆ. ಜಿಲ್ಲಾಧಿಕಾರಿ ತಾವು ಜನಸೇವಕರು ಎಂಬುದನ್ನು ಮರೆತಿದ್ದಾರೆ. ಜನರ ತೆರಿಗೆ ಹಣದಿಂದ ಜೀವನ ನಡೆಯುತ್ತಿದೆ ಎಂಬುದನ್ನು ಮರೆಯಬಾರದು ಎಂದು ಕಿಡಿಕಾರಿದರು.

ಕಬ್ಬಿನ ದರ ನಿಗದಿ ಕುರಿತಂತೆ ಜಿಲ್ಲಾಧಿಕಾರಿಗಳ ತಕ್ಷಣವೇ ಸಭೆ ಕರೆಯಬೇಕು. ಕಬ್ಬಿನ ಎಫ್‌ ಆರ್‌ಪಿ ದರ ಪುನರ್‌ ಪರಿಶೀಲನೆ ಮಾಡಬೇಕು. ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರೇ ಭರಿಸಬೇಕು. ಉಪ ಉತ್ಪನ್ನಗಳ ಲಾಭ ಹಂಚಿಕೆ ಮತ್ತು ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.

2022ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ. ಈಗ ರೈತರು ಹೆಚ್ಚಿನ ಹಣವನ್ನು ಕೂಲಿಕಾರರಿಗಾಗಿಯೇ ವ್ಯಯ ಮಾಡುತ್ತಿದ್ದಾರೆ. ಆದ್ದರಿಂದ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಪಡಿಸಬೇಕು. ಇದಕ್ಕಾಗಿ ಕಾಯ್ದೆಯನ್ನು ಜಾರಿಗೊಳಿಸಬೇಕು. ರಾಜ್ಯದಲ್ಲಿ 7 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಭತ್ತ, ಮೆಕ್ಕೆಜೋಳ, ತೋಟಗಾರಿಕೆ ಬೆಳೆಗಳು ಹಾಳಾಗಿವೆ ಎಂದು ಅಂದಾಜಿಸಲಾಗಿದೆ. ಮಳೆಹಾನಿ, ಬೆಳೆನಷ್ಟ ಪರಿಹಾರವನ್ನು ವೈಜ್ಞಾನಿಕವಾಗಿ ನಿಗದಿಪಡಿಸಬೇಕು. ಸಂಕಷ್ಟಕ್ಕೆ ಸಿಲಿಕಿರುವ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

Advertisement

25 ಲಕ್ಷ ಪರಿಹಾರ ನೀಡಿ

ಕೇಂದ್ರ ಸರ್ಕಾರ ಜಾರಿ ತರಲು ಹೊರಟಿದ್ದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕೆಂದು ದೇಶದಲ್ಲಿ ನಡೆದ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದಲೇ ರೈತರು ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ ಎಂದು ಶಾಂತಕುಮಾರ ಹೇಳಿದರು.

ಹುತಾತ್ಮರಾದ ಎಲ್ಲ ರೈತರ ಕುಟುಂಬಗಳಿಗೆ ಕೇಂದ್ರ ಸರ್ಕಾರ 25 ಲಕ್ಷ ಪರಿಹಾರ ರೂ. ನೀಡಬೇಕು. ತೆಲಂಗಾಣ ಸರ್ಕಾರ 700 ರೈತ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಹೀಗಾಗಿ ತಕ್ಷಣವೇ ಎಚ್ಚೆತ್ತುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮರಾಜ ಸಾಹು, ಮುಖಂಡರಾದ ಶಾಂತವೀರಪ್ಪ ಕಲಬುರಗಿ, ನರಹರಿ ಪಾಟೀಲ, ಸತೀಶ ಹುಡಗಿ, ಬಸವರಾಜ ಪಾಟೀಲ, ಶಾಂತವೀರ ಪಾಟೀಲ, ನಾಗೇಂದ್ರರಾವ ದೇಶಮುಖ ಇದ್ದರು.

ಕಬ್ಬಿನ ಎಫ್‌ಆರ್‌ಪಿ ದರ ಪುನರ್‌ ಪರಿಶೀಲನೆ ಮಾಡಬೇಕು. ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರೇ ಭರಿಸಬೇಕೆಂದು ಒತ್ತಾಯಿಸಿ ನ.26ರಂದು ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡಿ ಹೋರಾಟ ನಡೆಸಲಾಗುತ್ತದೆ. ಮೈಸೂರಿನಲ್ಲಿ ಡಿಸೆಂಬರ್‌ 26ರಂದು ವಿಶ್ವ ರೈತರ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಗುತ್ತದೆ. -ಕುರಬೂರು ಶಾಂತಕುಮಾರ, ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next