ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಅಖೀಲ ಭಾರತ ಕಿಸಾನ್ ಸಂಘರ್ಷ ಸಮಿತಿ ಕರೆಯ ಮೇರೆಗೆ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಸಮೀಪದ ಅಸ್ಕಿಹಾಳ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಗಂಗಾವತಿ, ಬಳ್ಳಾರಿ, ಕಲಬುರಗಿ, ಲಿಂಗಸೂಗೂರು ಸೇರಿದಂತೆ ವಿವಿಧೆಡೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾದ ಕಾರಣ ಕೆಲ ಕಾಲ ಸಂಚಾರದಲ್ಲಿ ತುಸು ವ್ಯತ್ಯಯ ಕಂಡು ಬಂದರೂ ಪ್ರಯಾಣಿಕರಿಗೆ ಹೆಚ್ಚೇನು ತೊಂದರೆ ಆಗಲಿಲ್ಲ. ಭಾರೀ ವಾಹನಗಳನ್ನು ಮಾತ್ರ ನಿಷೇಧಿ ಸಿ ಬೈಪಾಸ್ ಮಾರ್ಗವಾಗಿ ಓಡಿಸಲಾಯಿತು. ಉಳಿದಂತೆ ಸಾರಿಗೆ ಬಸ್ ಸೇರಿದಂತೆ ಸಣ್ಣ ವಾಹನಗಳನ್ನು ಇದೇ ಮಾರ್ಗವಾಗಿ ಬಿಡಲಾಯಿತು. ಹೋರಾಟ ಸಾಂಕೇತಿಕವಾಗಿದ್ದು, ಹೆಚ್ಚು ಜನ ಪಾಲ್ಗೊಂಡಿರದ ಕಾರಣ ಪೊಲೀಸರ ಪರಿಸ್ಥಿತಿ ನಿರ್ವಹಿಸಿದರು.
ಮಧ್ಯಾಹ್ನ 12ರಿಂದ ಎರಡು ಗಂಟೆವರೆಗೆ ಹೋರಾಟ ನಡೆಸಲಾಯಿತು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೂಡಲೇ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಕರಾಳ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕು ಮತ್ತು ಕಾರ್ಮಿಕ ಸಂಹಿತೆಗಳ ತಿದ್ದುಪಡಿ ಕೈಬಿಡಬೇಕೆಂದು ಬೆಲೆ ಏರಿಕೆಯನ್ನು ತಡೆಗಟ್ಟಲು ಈ ರಸ್ತೆತಡೆ ಚಳವಳಿ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ:ರೈತರ ಸಮಸ್ಯೆ ಬಗೆಹರಿಸಲು ಮೋದಿ ಮಧ್ಯ ಪ್ರವೇಶಿಸಲೇ ಬೇಕು : ಪವಾರ್
ಸಮಿತಿ ರಾಜ್ಯ ಮುಖಂಡ ಚಾಮರಸ ಮಾಲಿಪಾಟೀಲ್, ಜಿಲ್ಲಾ ಸಂಚಾಲಕ ಕೆ.ಜಿ. ವೀರೇಶ್, ಸೂಗೂರಯ್ಯ ಆರ್.ಎಸ್. ಮಠ ಮಲ್ಲಣ್ಣ ದಿನ್ನಿ, ಕರಿಯಪ್ಪ ಹಚ್ಚೊಳ್ಳಿ, ಡಿ.ಎಸ್. ಶರಣಬಸವ, ಈ.ರಂಗನಗೌಡ, ಮಾರೆಪ್ಪ ಹರವಿ, ಖಾಜಾ ಅಸ್ಲಂಪಾಷಾ, ರಾಮಬಾಬು, ರೂಪಾ ಶ್ರೀನಿವಾಸ ನಾಯಕ, ನರಸಪ್ಪ ಶಕ್ತಿನಗರ, ಜಿಂದಪ್ಪ ವಡೂÉರು, ಶ್ರೀನಿವಾಸ ಕಲವಲದೊಡ್ಡಿ, ಎನ್.ಎಸ್. ವೀರೇಶ್, ಚನ್ನಬಸವ ಜಾನೇಕಲ್, ವಿ.ವಿ. ಭೀಮೇಶ್ವರರಾವ್, ಜಾನ್‌ವೇಸ್ಲಿ, ವಿದ್ಯಾಪಾಟೀಲ್, ಈರಣ್ಣ ಶೆಟ್ಟಿ, ಶರಣಬಸವ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ರೈತರು ಹೋರಾಟದಲ್ಲಿ ಭಾಗಿಯಾಗಿದ್ದರು