Advertisement

ಭೂ ಸ್ವಾಧೀನ ಕಾಯ್ದೆ ವಿರೋಧಿಸಿ ಹೆದ್ದಾರಿ ತಡೆ

10:02 PM Jun 10, 2019 | mahesh |

ಪುತ್ತೂರು: ರಾಜ್ಯ ಸಮ್ಮಿಶ್ರ ಸರಕಾರವು ತಿದ್ದುಪಡಿ ಮಾಡಿ ಜಾರಿಗೊಳಿಸಲು ಸಿದ್ಧತೆ ಮಾಡಿಕೊಂಡಿರುವ ಭೂ ಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ದ.ಕ. ಜಿಲ್ಲಾ ಸಮಿತಿ ವತಿಯಿಂದ ಪುತ್ತೂರಿನ ದರ್ಬೆ ಸರ್ಕಲ್‌ ಬಳಿ ಹೆದ್ದಾರಿ ತಡೆ ಚಳವಳಿ ನಡೆಯಿತು.

Advertisement

2013ರಲ್ಲಿ ಯುಪಿಎ ಸರಕಾರ ಜಾರಿಗೆ ತಂದಿದ್ದ ಭೂ ಸ್ವಾಧೀನ ಕಾಯ್ದೆ ರೈತರ ಪರವಾಗಿತ್ತು. ಆದರೆ ಇದೀಗ ರಾಜ್ಯದ ಸಮ್ಮಿಶ್ರ ಸರಕಾರ ಈ ಕಾಯ್ದೆಗೆ ತಿದ್ದುಪಡಿ ತಂದು ಭೂ ಸ್ವಾಧೀನದ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡುವ ನಿರ್ಣಯ ಕೈಗೊಂಡಿದೆ. ರೈತರ ಹಿತಕ್ಕೆ ಮಾರಕವಾಗಿರುವ ಈ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ ನೂರಾರು ರೈತರು, ಸಮ್ಮಿಶ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಹಕ್ಕಿಗಾಗಿ ಹೋರಾಟ
ರೈತ ಸಂಘದ ಕಡಬ ತಾಲೂಕು ಅಧ್ಯಕ್ಷ ವಿಕ್ಟರ್‌ ಮಾತನಾಡಿ, ರೈತರು ತಮ್ಮ ಹಕ್ಕನ್ನು ಹೋರಾಟದ ಮೂಲಕ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಜನಪ್ರತಿನಿಧಿಗಳಿಗೆ ಕುರ್ಚಿ ಬೇಕು, ಅಧಿಕಾರ ಬೇಕು. ಆದರೆ ರೈತರ ಹಿತಾಸಕ್ತಿ ಬೇಕಾಗಿಲ್ಲ. ಬಜೆಟ್‌ನಲ್ಲಿ ರೈತರ ಸಾಲ ಮನ್ನಾಕ್ಕೆ ಮಾನದಂಡ ಇಲ್ಲ ಎಂದು ಹೇಳಿ ಆಮೇಲೆ ನಿಬಂಧನೆ ಹೇರಿದ್ದಾರೆ. ಅವುಗಳನ್ನು ಕೂಡಲೇ ತೆಗೆಯಬೇಕು. ಇಲ್ಲದಿದ್ದರೆ ಎಲ್ಲ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾ.ಪಂ.ಗೆ ಮರಳು ಅನುಮತಿ ಕೊಡಿ
ನದಿ ತಟದಲ್ಲೇ ಇರುವ ಜನತೆಗೂ ಪ್ರಾಕೃತಿ ಕವಾಗಿ ಲಭ್ಯವಾಗುವ ಮರಳನ್ನು ತೆಗೆಯಲು ಅವಕಾಶವಿಲ್ಲ. ಕೂಡಲೇ ಗ್ರಾ.ಪಂ.ಗಳಿಗೆ ಮರಳನ್ನು ತೆಗೆಯುವ ಅನುಮತಿಯನ್ನು ನೀಡಬೇಕು. ಮುಖ್ಯ ಮಂತ್ರಿಗಳ ಗ್ರಾಮ ವಾಸ್ತವ್ಯದಂತೆ ಜಿಲ್ಲಾಧಿಕಾರಿಯವರೂ ಗ್ರಾಮ ವಾಸ್ತವ್ಯ ಮಾಡಿ ವಾಸ್ತವ ಸಮಸ್ಯೆಗಳನ್ನು ಅರಿಯಬೇಕು ಎಂದರು.

ಬ್ರಿಟಿಷ್‌ ಕಾನೂನು
ರೈತ ಸಂಘ ಜಿಲ್ಲಾಧ್ಯಕ್ಷ ಬಿ. ಶ್ರೀಧರ ಶೆಟ್ಟಿ ಮಾತನಾಡಿ, ರಾಜ್ಯದ ಸಮ್ಮಿಶ್ರ ಸರಕಾರ ಬ್ರಿಟಿಷ್‌ ಆಡಳಿತದಲ್ಲಿ ಇದ್ದಂತಹ ಕಾನೂನುಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ರೈತರ ಒಪ್ಪಿಗೆ ಪಡೆದು ಸೂಕ್ತ ಪರಿಹಾರ ನೀಡದ ಬಳಿಕವೇ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕು. ವಿರೋಧ ಪಕ್ಷದಲ್ಲಿರುವ ಬಿಜೆಪಿ ನಾಯಕರೂ ಈ ಕುರಿತು ಜವಾಬ್ದಾರಿ ತೋರಬೇಕು ಎಂದವರು ಹೇಳಿದರು.

Advertisement

10 ನಿಮಿಷ ಹೆದ್ದಾರಿ ತಡೆ
ರೈತ ಸಂಘ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಾಣಿ -ಮೈಸೂರು ಹೆದ್ದಾರಿಯನ್ನು ದರ್ಬೆ ಬೈಪಾಸ್‌ ವೃತ್ತದಲ್ಲಿ ತಡೆದು ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಲು ಸರಕಾರವನ್ನು ಆಗ್ರಹಿಸುವ ಚಳವಳಿಯನ್ನು ರೈತರು ನಡೆಸಿದರು. ಸುಮಾರು 10 ನಿಮಿಷಗಳ ಕಾಲ ಹೆದ್ದಾರಿ ತಡೆ ನಡೆಸಿದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಹರಿಣಿ ವಿ. ರೈ, ರೈತ ಸಂಘದ ಮುಖಂಡರಾದ ಕೇಶವ ಪೂಜಾರಿ, ಇಸುಬು, ಸುರೇಶ್‌ ಭಟ್‌ ಕನ್ಯಾನ, ವಸಂತ ಪೆರಾಬೆ ಸಹಿತ ನೂರಾರು ರೈತರು ಪಾಲ್ಗೊಂಡರು. ಪುತ್ತೂರು ಡಿವೈಎಸ್ಪಿ ಮುರಳೀಧರ ಹಾಗೂ ಇನ್‌ಸ್ಪೆಕ್ಟರ್‌ ಶಶಿಕುಮಾರ್‌ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ನಡೆಸಿದರು.

ವಿವೇಚನೆಯ ಪರಿಹಾರ
ರೈತ ಸಂಘದ ರಾಜ್ಯ ಕಾರ್ಯದರ್ಶಿ ಈಶ್ವರ ಭಟ್‌ ಬಡೆಕ್ಕಿಲ ಮಾತನಾಡಿ, ಯುಪಿಎ ಸರಕಾರ ತಂದ ಕಾಯ್ದೆಯ ಪ್ರಕಾರ ರೈತನ ಭೂ ಸ್ವಾಧೀನಕ್ಕೆ ಆತನ ಅನುಮತಿ ಮೇರೆಗೆ ಗ್ರಾಮಾಂತರದಲ್ಲಿ 4 ಪಟ್ಟು ಹಾಗೂ ನಗರದಲ್ಲಿ 2 ಪಟ್ಟು ಪರಿಹಾರ ನೀಡಲು ಸೂಚಿಸಿತ್ತು. ಈಗ ರಾಜ್ಯ ಸರಕಾರ ತಿದ್ದುಪಡಿ ಮಾಡಿರುವ ಕಾಯ್ದೆಯಂತೆ ಜಿಲ್ಲಾಧಿಕಾರಿ ತಮ್ಮ ವಿವೇಚನೆಯ ಪರಿಹಾರವನ್ನು ನೀಡುವ ಅವಕಾಶ ಕಲ್ಪಿಸಲಾಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next