Advertisement
ಕುಂದಾಪುರ/ಶಿರೂರು : ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಕಾಮಗಾರಿಗಳು ಅವ್ಯವಸ್ಥಿತವಾಗಿ ನಡೆಯುತ್ತವೆ, ಸ್ಥಳೀಯರ ಅಭಿಪ್ರಾಯಕ್ಕಾಗಲೀ, ಅಗತ್ಯಕ್ಕಾಗಲೀ ಮನ್ನಣೆ ಇರುವುದೇ ಇಲ್ಲ. ಜನರಿಗೆ ತೀರಾ ಅಗತ್ಯವಿರುವಲ್ಲಿ ಕೆಳಸೇತುವೆಗಳೂ ಬರುವುದಿಲ್ಲ, ಮೇಲ್ಸೇತುವೆಗಳೂ ಇರುವುದಿಲ್ಲ. ಸರ್ವೀಸ್ ರಸ್ತೆ ಇಲ್ಲಿಗಂತೂ ಬೇಕೇಬೇಕು ಎಂದು ಜನರು ಒತ್ತಾಯಿಸುತ್ತಾರೆ. ಅಲ್ಲಿಗೆ ಸರ್ವೀಸ್ ರೋಡ್ ಸಹ ಬರುವುದಿಲ್ಲ. ಹೀಗೆಲ್ಲಾ ಜನರ ವಿರೋಧದ ಮಧ್ಯೆ ಅಥವಾ ಅಸಮಾಧಾನದ ಮಧ್ಯೆ ಕಾಮಗಾರಿಗಳು ನಡೆಯುತ್ತಿರುವ ಆರೋಪಕ್ಕೆ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯೂ ತುತ್ತಾಗಿದೆ.
Related Articles
ಹೆದ್ದಾರಿಯುದಕ್ಕೂ ಆಗಿರುವ ಅವೈಜ್ಞಾನಿಕ ಕಾಮಗಾರಿ, ಅಂಡರ್‌ಪಾಸ್ ಗೊಂದಲ, ಸರ್ವಿಸ್ ರಸ್ತೆ ಅಪೂರ್ಣ, ಚರಂಡಿ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಸ್ಥಳೀಯಾಡಳಿತ, ಗ್ರಾ.ಪಂ., ತಾ.ಪಂ.ಗಳು ಕರೆಯುವ ಸಭೆಗೆ ಬರುವುದೇ ಇಲ್ಲ.
ಜಿಲ್ಲಾಡಳಿತ ಕರೆಯುವ ಸಭೆಗಳಿಗೂ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಬಾರದೇ, ಅಧೀನ ಅಧಿಕಾರಿಗಳನ್ನು ಕಳುಹಿಸಿ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಇನ್ನು ಗ್ರಾ.ಪಂ, ಪಟ್ಟಣ ಪಂಚಾಯತ್‌ಗಳ ಸಭೆಗೆ ತಿರುಗಿ ಸಹ ನೋಡುವುದಿಲ್ಲ. ಲಭ್ಯ ಮಾಹಿತಿ ಪ್ರಕಾರ, “ಈ ಸಭೆಗಳಿಗೆಲ್ಲಾ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬರಬೇಕೆಂದಿಲ್ಲವಂತೆ.
Advertisement
ಸ್ಥಳೀಯಾಡಳಿತದ ಸಭೆಯನ್ನೇ ಕರೆದಿಲ್ಲಈ ಹೆದ್ದಾರಿಯು ಕುಂದಾಪುರ ಪುರಸಭೆ, ಬೈಂದೂರು ಪಟ್ಟಣ ಪಂಚಾಯತ್ ಸೇರಿದಂತೆ 13 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಹಾದು ಹೋಗುತ್ತದೆ. ಈ ಎಲ್ಲ ಸ್ಥಳೀಯಾಡಳಿತದ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಕೇಳಿದಾಗ ನಮ್ಮ ಯಾವ ಪಂಚಾಯತ್‌ನಲ್ಲೂ ಹೆದ್ದಾರಿ ಕಾಮಗಾರಿ ಆರಂಭವಾಗುವ ವೇಳೆ ಜನಸಂಪರ್ಕ ಸಭೆಯನ್ನಾಗಿ, ವಿಶೇಷ ಗ್ರಾಮಸಭೆಯನ್ನಾಗಲಿ ಕರೆದೇ ಇಲ್ಲ ಎನ್ನುತ್ತಾರೆ. ಸಾಮಾನ್ಯವಾಗಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸುವಾಗಲೂ ಸ್ಥಳೀಯಾಡಳಿತದ ವಿಶ್ವಾಸವನ್ನು ತೆಗೆದುಕೊಳ್ಳಬೇಕಾದುದು ಕಡ್ಡಾಯ. ಏನೆಲ್ಲ ಕಾಮಗಾರಿ ನಡೆಯುತ್ತದೆ, ಅದರಿಂದಾಗುವ ಅನುಕೂಲಗಳೇನು? ಎಷ್ಟು ಭೂ ಸ್ವಾಧೀನವಾಗಬೇಕು ಇತ್ಯಾದಿ ಮಾಹಿತಿಯನ್ನು ಸ್ಥಳೀಯಾಡಳಿತದೊಂದಿಗೆ ಹಂಚಿಕೊಳ್ಳಬೇಕು. ಆದರೆ ಈ ಕಾಮಗಾರಿಯಲ್ಲಿ ಅಂಥ ಆದರ್ಶ ನಡೆಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೋರದಿರುವುದು ಸ್ಥಳೀಯಾ ಡಳಿತದ ಆಕ್ರೋಶಕ್ಕೂ ಕಾರಣವಾಗಿದೆ. ಯಾರಲ್ಲೂ ಮಾಹಿತಿ ಇಲ್ಲ
ಈ ಚತುಷ್ಪಥ ಹೆದ್ದಾರಿಯಲ್ಲಿ ಎಲ್ಲಿ ಯಾವ ಅಭಿವೃದ್ಧಿ ಕಾಮಗಾರಿ ಆಗುತ್ತದೆ, ಎಲ್ಲಿ ಸರ್ವಿಸ್ ರಸ್ತೆ ಬರುತ್ತದೆ, ಎಲ್ಲಿ ಜಂಕ್ಷನ್, ಎಲ್ಲೆಲ್ಲ ಬಸ್ ನಿಲ್ದಾಣಗಳು ಆಗುತ್ತವೆ, ಎಲ್ಲಿ ಡಿವೈಡರ್ ಕ್ರಾಸಿಂಗ್ ಕೊಡಲಾಗುತ್ತದೆ ಎನ್ನುವ ಬಗ್ಗೆ ಐಆರ್‌ಬಿಯವರು ಹಾಗೂ ಪ್ರಾಧಿಕಾರದ ಅಧಿಕಾರಿಗಳಿಗೆ ಬಿಟ್ಟರೆ ಬೇರೆ ಯಾವ ಅಧಿಕಾರಿಗಳಿಗೂ ಮಾಹಿತಿಯಿಲ್ಲ. ಅಚ್ಚರಿಯೆಂದರೆ ತಮ್ಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಏನೆಲ್ಲ ಆಗುತ್ತದೆ ಎನ್ನುವ ಮಾಹಿತಿ ಆ ಪಂಚಾಯತ್‌ನಲ್ಲೇ ಇಲ್ಲ. ಕಾರಣ ಪ್ರಾಧಿಕಾರದ ಅಧಿಕಾರಿಗಳು ಯಾವತ್ತೂ ಆ ಮಾಹಿತಿಯನ್ನೇ ಹಂಚಿಕೊಂಡಿಲ್ಲ. ಎಂಪಿ, ಡಿಸಿ ಸಭೆಗೆ ಮಾತ್ರ
ಸಂಸದರು, ಜಿಲ್ಲಾಧಿಕಾರಿಗಳು ಹೆದ್ದಾರಿ ಸ್ಥಿತಿಗತಿ ಕುರಿತು ಏನಾದರೂ ಸಭೆಯನ್ನು ಕರೆದರೆ ಮಾತ್ರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬರುತ್ತಾರೆ. ತಮ್ಮಲ್ಲಿರುವ ಅರೆಬರೆ ಮಾಹಿತಿ ಕೊಟ್ಟು ಸಾಗುತ್ತಾರೆ. ಸಾಮಾನ್ಯವಾಗಿ ಇಂಥ ಕಾಮಗಾರಿಗಳಲ್ಲಿ ಆಗಾಗ್ಗೆ ಸಭೆಗಳನ್ನು ತಮ್ಮ ಕಾರ್ಯಭಾರದ ಮಧ್ಯೆ ಸಂಸದರು ನಡೆಸುವುದು ಕಡಿಮೆ. ಈಗಿನ ಸಂಸದರು ಇದುವರೆಗೆ ಎರಡು ಸಭೆ ನಡೆಸಿದ್ದಾರೆ. ಜಿಲ್ಲಾಡಳಿತವೂ ಸಭೆ ನಡೆಸುವುದು ಕಡಿಮೆ. ಹೀಗಿರುವಾಗ ನಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳುವುದು ಎಂಬ ಪ್ರಶ್ನೆ ಜನರದ್ದು. ನಾವು ಅನೇಕ ಬಾರಿ ನಮ್ಮ ಗ್ರಾ.ಪಂ. ವ್ಯಾಪ್ತಿಯ ಮನವಿಗಳನ್ನು ಕೊಡಲೆಂದು ನಮ್ಮಲ್ಲಿಗೆ ಕರೆದಿದ್ದೇವೆ. ಮನವಿಯೂ ಕೊಟ್ಟು ಬಂದಿದ್ದೇವೆ. ಆದರೆ ಈವರೆಗೆ ಅದಕ್ಕೆ ಯಾವುದೇ ಮನ್ನಣೆಯೇ ಸಿಕ್ಕಿಲ್ಲ ಎನ್ನುತ್ತಾರೆ ಗ್ರಾ.ಪಂ. ವೊಂದರ ಮಾಜಿ ಅಧ್ಯಕ್ಷರು. ಪ್ರತಿಭಟನೆಗೂ ಕಿಮ್ಮತ್ತಿಲ್ಲ
ಹೆಮ್ಮಾಡಿ ಹಾಗೂ ಕಟ್‌ಬೆಲೂ¤ರು ಗ್ರಾ.ಪಂ. ವ್ಯಾಪ್ತಿಯ ಜಾಲಾಡಿಯಲ್ಲಿ ಡಿವೈಡರ್ ಕ್ರಾಸಿಂಗ್ ಕೊಡಬೇಕು ಎಂದು ಕಳೆದ ವರ್ಷ ಬೃಹತ್ ಪ್ರತಿಭಟನೆ ನಡೆದಿತ್ತು. ಆಗಲೂ ಪ್ರಾಧಿಕಾರದಿಂದ ಯಾವುದೇ ಅಧಿಕಾರಿಗಳು ಬರಲಿಲ್ಲ. ಪ್ರತಿಭಟನಾಕಾರರು ಪ್ರಾಧಿಕಾರದ ಅಧಿಕಾರಿಗಳೇ ಬರಬೇಕು ಎಂದು ಪಟ್ಟು ಹಿಡಿದಾಗ, ಪ್ರಾಧಿಕಾರದವರು ಕಾಮಗಾರಿ ನಿರ್ವಹಿಸುತ್ತಿದ್ದ ಐಆರ್‌ಬಿಯ ಅಧಿಕಾರಿಗಳನ್ನು ಕಳುಹಿಸಿ ಜಾರಿಕೊಂಡರು. ತ್ರಾಸಿಯಲ್ಲಿಯೂ ಇದೇ ರೀತಿ ಸ್ಥಳೀಯರೆಲ್ಲ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸಲು ಆಗ್ರಹಿಸಿದಾಗಲೂ ಅಧಿಕಾರಿಗಳು ಗಮನಿಸಲೇ ಇಲ್ಲ. ಯಾವೆಲ್ಲ ಸ್ಥಳೀಯಾಡಳಿತದ ವ್ಯಾಪ್ತಿಯಲ್ಲಿ ಹೆದ್ದಾರಿ ಹಾದುಹೋಗುತ್ತದೆ
– ಕುಂದಾಪುರ ಪುರಸಭೆ – ಬೈಂದೂರು ಪಟ್ಟಣ ಪಂಚಾಯತ್ – ತಲ್ಲೂರು – ಹೆಮ್ಮಾಡಿ – ಕಟ್‌ಬೆಲೂ¤ರು – ಹೊಸಾಡು – ತ್ರಾಸಿ – ಮರವಂತೆ – ನಾವುಂದ – ಕಿರಿಮಂಜೇಶ್ವರ – ಕಂಬದಕೋಣೆ – ಕೆರ್ಗಾಲು – ಉಪ್ಪುಂದ – ಬಿಜೂರು – ಶಿರೂರು ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಿ
ಕಾಮಗಾರಿ ಕೈಗೊಳ್ಳುವ ವ್ಯಾಪ್ತಿಯ ಎಲ್ಲ ಸ್ಥಳೀಯಾಡಳಿತ ಸಭೆಗಳಲ್ಲಿ ರಾ. ಹೆ. ಪ್ರಾಧಿಕಾರದ ಪ್ರತಿನಿಧಿಗಳು ಪಾಲ್ಗೊಳ್ಳುವುದು ಕಡ್ಡಾಯವಾಗಬೇಕು. ಜತೆಗೆ ಕಾಮಗಾರಿ ಆರಂಭಿಸುವ ಮುನ್ನ ಸಂಬಂಧಪಟ್ಟ ಸ್ಥಳೀಯಾಡಳಿತಗಳ ನೆಲೆಯಲ್ಲಿ ಸಭೆ ನಡೆಸಬೇಕಾದುದೂ ಕಡ್ಡಾಯ. ಈ ನಿಟ್ಟಿನಲ್ಲಿ ನಿಯಮವಿದ್ದರೆ ಅದರ ಸರಿಯಾದ ಪಾಲನೆಯತ್ತ, ಒಂದುವೇಳೆ ಇಲ್ಲದಿದ್ದರೆ ನಿಯಮ ತರುವಂತೆ – ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಲ್ಲಿ ಸಂಸದರು ಹಾಗೂ ಜಿಲ್ಲಾಡಳಿತ ಕಾರ್ಯೋನ್ಮುಖ ವಾಗಬೇಕು. ಇದರಿಂದ ಹಲವು ಸಂಕಷ್ಟಗಳು ಬಗೆಹರಿಯಲಿವೆ ಎಂಬುದು ಜನರ ಅಭಿಪ್ರಾಯ. -ಕಿರಿಮಂಜೇಶ್ವರದಲ್ಲಿಯೂ ಅವೈಜ್ಞಾನಿಕ ಅಂಡರ್‌ಪಾಸ್ ಕಾಮಗಾರಿ ವಿರುದ್ಧ ಪ್ರತಿಭಟನೆ ನಡೆದಾಗಲೂ ಯಾವ ಅಧಿಕಾರಿಯೂ ಬಂದಿರಲಿಲ್ಲ. ಉಪ್ಪುಂದ – ಶಾಲೆಬಾಗಿಲು ಬಳಿ ಯೂಟರ್ನ್ಗಾಗಿ ಪ್ರತಿಭಟನೆ ನಡೆದಿತ್ತು. ಆ ವೇಳೆ ಅಲ್ಲಿಗೆ ಶಾಸಕರು ಬಂದು ಮನವಿ ಸ್ವೀಕರಿಸಿದರೂ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಸಿ ಕಚೇರಿಯಲ್ಲಿ ತಣ್ಣಗೆ ಕುಳಿತಿದ್ದರು !