ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿರುವ ಕೋವಿಡ್ ಸೋಂಕಿತ ಕೈದಿಗಳೆಷ್ಟು, ಅವರ ನಿರ್ವಹಣೆ ಮತ್ತು ಚಿಕಿತ್ಸೆಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ರಾಜ್ಯದ ಕಾರಾಗೃಹಗಳಲ್ಲಿ ಎಷ್ಟು ಕೈದಿಗಳಿಗೆ ಸೋಂಕು ದೃಢಪಟ್ಟಿದೆ, ಅವರ ಚಿಕಿತ್ಸೆಗೆ ಯಾವ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ, ಜೈಲುಗಳಲ್ಲಿ ಐಸೊಲೇಷನ್ ವ್ಯವಸ್ಥೆ ಹೇಗಿದೆ, ಶಿಕ್ಷೆಗೊಳಗಾದ ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳನ್ನು ದಾಖಲಿಕೊಳ್ಳುವ ಮುನ್ನ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆಯೇ, ಅವರನ್ನು ನಿರ್ದಿಷ್ಟ ಅವಧಿಗೆ ಕ್ವಾರಂಟೈನ್ ಮಾಡುವ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆಯೇ? ಒಟ್ಟಾರೆಯಾಗಿಜೈಲುಗಳಲ್ಲಿ ಸೋಂಕು ಹರಡಂದತೆ ತಡೆಗಟ್ಟಲು ಕೈಗೊಂಡ ನಿಲುವುಗಳ ಬಗ್ಗೆ ವಿವರವಾದ ವರದಿ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಿ ಸೆ.23ಕ್ಕೆ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ?: ಶಸ್ತ್ರ ಚಿಕಿತ್ಸೆ ಒಳಗಾಗಿರುವ ಅಮೋಲ್ ಕಾಳೆಗೆ ಸದ್ಯ ಸೂಕ್ತ ಆರೈಕೆ ಅಗತ್ಯವಿದೆ. ಆದರೆ, ಅವರ ಪಕ್ಕದಲ್ಲೇ ಐಸೊಲೇಷನ್ ಸೆಲ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಕೊರೊನಾ ಸೋಂಕಿತ ಕೈದಿಗಳನ್ನು ಇರಿಸಲಾಗಿದೆ. ಐಸೋಲೇಷನ್ ಸೆಲ್‌ನಲ್ಲಿರುವವರಿಂದ ಇತರರಿಗೆ ಸೋಂಕು ಹರಡದಿರಲು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಇದರಿಂದ ಸೋಂಕು ತಗುಲುವ ಭೀತಿಯಿಂದ ಅರ್ಜಿದಾರರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
………………………………………………………………………………………………………………………………………………………
ಚೇತರಿಕೆ : 97 ಸಾವಿರದತ್ತ : ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ ಕಂಡು ಬಂದಿದೆ. ಗುರುವಾರ 3,189 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು ಈ ಮೂಲಕ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 1,38,701ಕ್ಕೆ ಏರಿಕೆ ಕಂಡಿದೆ. ಕೋವಿಡ್ ನಿಂದ 2,631 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 96,194 ಮಂದಿ ಕೋವಿಡ್ ದಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟುಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ತೊಂಭತ್ತೇಳು ಸಾವಿರದತ್ತ ದಾಪುಗಾಲಿರಿಸಿದೆ. ಚೇತರಿಕೆ ಪ್ರಮಾಣ ಶೇ.69.35 ರಷ್ಟಿದೆ. ಹಾಗೆಯೇ ನಗರದಲ್ಲೀಗ 40,440 ಸಕ್ರಿಯ ಪ್ರಕರಣಗಳಿದ್ದು, ಇವರೆಲ್ಲರೂ ವಿವಿಧ ಆಸ್ಪತ್ರೆಗಳಲ್ಲಿ ಆರೈಕೆ ಪಡೆಯುತ್ತಿದ್ದಾರೆ.ಅಲ್ಲದೆ 276 ಮಂದಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24ಗಂಟೆಗಳಲ್ಲಿ ಸುಮಾರು 29 ಜನರು ಸಾವನ್ನಪ್ಪಿದ್ದಾರೆ. ಸಿಲಿಕಾನ್ ಸಿಟಿಯಲ್ಲೀಗ ಒಟ್ಟು ಪಾಸಿಟಿವ್ ಪ್ರಮಾಣ ಶೇ.14.64ರಷ್ಟಿದ್ದು, ಆಕ್ಟೀವ್ ಪ್ರಮಾಣ ಶೇ.29.16ರಷ್ಟಿದೆ. ಗುರುವಾರ 28,311 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಇದುವರೆಗೂ 9,47,518 ಮಂದಿಯ ತಪಾಸಣೆ ಮಾಡಲಾಗಿದೆ.