ಸುಳ್ಯ : ನಗರದ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದ ಬಳಿ ನ.ಪಂ. ಹೈಮಾಸ್ಟ್ ದೀಪ ಕಂಬ ಕಿತ್ತೆಗೆದು ಮರು ಜೋಡಿಸದ ಕಾರಣ ಅನಾಥ ಸ್ಥಿತಿಯಲ್ಲಿ ಬಿದ್ದಿದೆ..!
ನಗರ ಪಂಚಾಯತ್ ವ್ಯಾಪ್ತಿಗೆ ಸೇರಿರುವ ಹೈಮಾಸ್ಟ್ ದೀಪವನ್ನು ಹಲವು ತಿಂಗಳ ಹಿಂದೆ ಕಾಮಗಾರಿ ನೆಪದಲ್ಲಿ ತೆರವುಗೊಳಿಸಿ, ಸನಿಹದ ಕಂಪೌಂಡ್ ಬಳಿ ಇಡಲಾಗಿತ್ತು. ಅದಾದ ಕೆಲ ದಿನಗಳಲ್ಲಿ ಅಲ್ಲಿ ನಡೆಸಲು ಉದ್ದೇಶಿಸಿದ ಪ್ರತಿಮೆ ನಿರ್ಮಾಣವನ್ನು ಖಾಸಗಿ ಬಸ್ ನಿಲ್ದಾಣ ಬಳಿಗೆ ಸ್ಥಳಾಂತರಿಸಲಾಯಿತು. ಕಾರಣ ಹೈಮಾಸ್ಟ್ ದೀಪ ಮತ್ತೆ ಅಳವಡಿಸಲು ಅವಕಾಶ ಒದಗಿತ್ತು.
ಆದರೆ ಏಳೆಂಟು ತಿಂಗಳು ಕಳೆದರೂ, ಅನಾಥ ಸ್ಥಿತಿಯಲ್ಲಿರುವ ಕಂಬಕ್ಕೆ ಮರು ಜನ್ಮ ಸಿಕ್ಕಿಲ್ಲ. ಬೆಂಗಳೂರು, ಪುತ್ತೂರು ಸೇರಿದಂತೆ ನಾನಾ ಭಾಗಕ್ಕೆ ಬಸ್‌ನಲ್ಲಿ ತೆರಳುವ ಜನರು ಬಸ್ ನಿಲ್ದಾಣದ ಪ್ರವೇಶ ದ್ವಾರದ ಬಳಿಯಲ್ಲಿನ ಈ ಹೈಮಾಸ್ಟ್ ದೀಪ ಕಂಬ ಬಳಿ ನಿಲ್ಲುತ್ತಾರೆ. ಅವರಿಗೆ ಬೆಳಕಿನ ವ್ಯವಸ್ಥೆಗೆ ಇದು ಸಹಕಾರಿ ಆಗಿತ್ತು.
ದೀಪ ತೆರವುಗೊಳಿಸಿದ ಮೇಲೆ ಇಲ್ಲಿ ಬಸ್‌ಗಾಗಿ ಕಾಯಲು ಅಸಾಧ್ಯವಾಗಿದೆ. ಬ್ಯಾಗ್ ಇನ್ನಿತ್ತರ ಬೆಲೆ ಸಾಮಗ್ರಿಗಳನ್ನು ಹಿಡಿದುಕೊಂಡು ಕತ್ತಲಲ್ಲಿ ನಿಲ್ಲಬೇಕಿದೆ. ಈ ಬಗ್ಗೆ ನ.ಪಂ. ಗಮನಕ್ಕೆ ತಂದರು ಏನು ಪ್ರಯೋಜನ ಆಗಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ನ.ಪಂ. ಸಾಮಾನ್ಯ ಸಭೆಗಳಲ್ಲಿ ಈ ವಿಚಾರ ಪ್ರಸ್ತಾಪಗೊಂಡಿದ್ದರೂ, ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ತೆರವುಗೊಳಿಸುವಾಗ ತೋರಿದ ಉತ್ಸಾಹ ಮರು ಜೋಡಣೆಗೆ ಕಂಡು ಬಂದಿಲ್ಲ. ಹೀಗಾಗಿ ಸಾವಿರಾರು ಮೌಲ್ಯದ ಕಂಬ ತುಕ್ಕು ಹಿಡಿಯುತ್ತಿದೆ. ಜತೆಗೆ ಪ್ರಯಾಣಿಕರು ಕತ್ತಲಲ್ಲಿ ನಿಲ್ಲುವಂತಾಗಿದೆ.
ಮರಣ ಗುಂಡಿ..!
ಸುಳ್ಯ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಪ್ರವೇಶ ದ್ವಾರದ ಬಳಿಯಲ್ಲಿನ ಚರಂಡಿ ಬಾಯ್ದೆರೆದು ಅಪಾಯ ಆಹ್ವಾನಿಸುತ್ತಿದೆ. ಬಸ್ ನಿಲ್ದಾಣದಿಂದ ನಗರದ ಮುಖ್ಯ ರಸ್ತೆಗೆ ಸಂಪರ್ಕ ಇರುವ ಚರಂಡಿಯ ಸ್ಲಾಬ್ ತೆರೆದಿದ್ದು, ರಾತ್ರಿ ವೇಳೆ ಕೊಂಚ ಯಾಮಾರಿದೂ ಪ್ರಾಣಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ.ಪಾದಚಾರಿಗಳು ಸ್ಲಾಬ್ ಮೇಲೆ ನಡೆದು ನಿಲ್ದಾಣ ಪ್ರವೇಶಿವುದುಂಟು. ನೂರಾರು ವಿದ್ಯಾರ್ಥಿಗಳು, ವಯಸ್ಕರು ಇಲ್ಲಿ ಓಡಾಡುತ್ತಾರೆ. ಅದಾಗ್ಯೂ ಸಂಬಂಧಪಟ್ಟವರು ಗಮನಕ್ಕೆ ಬಾರದಿರುವುದು ಅಚ್ಚರಿಯ ಸಂಗತಿ.