ಯಾದಗಿರಿ: ಎಕರೆಗೆ ಟನ್‌ಗಳಷ್ಟು ಇಳುವರಿ ಕೊಡುವ ಏಕೈಕ ಬೆಳೆ ಪಪ್ಪಾಯಿಯಾಗಿದ್ದು, ಇದನ್ನು ಸಕಾಲಕ್ಕೆ ಫಲ ನೀಡುವಂತೆ ನಾಟಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದು. ಈ ನಿಟ್ಟಿನಲ್ಲಿ ರೈತರು ಕಾಳಜಿ ವಹಿಸಬೇಕು ಎಂದು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ| ರೇವಣಪ್ಪ ಹೇಳಿದರು.
ಶಹಾಪೂರ ತಾಲೂಕಿನ ದೋರನಹಳ್ಳಿ ತಾಂಡದಲ್ಲಿ ದೇವರಾಜ ನಾಯಕ ತೋಟದಲ್ಲಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ವತಿಯಿಂದ ಹಮ್ಮಿಕೊಳ್ಳಲಾದ ಪಪ್ಪಾಯಿ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಸುರೇಶ ಮಾತನಾಡಿ, ತಮ್ಮ ಇಲಾಖೆಯಿಂದ ನೀಡುವ ಸೌಲತ್ತುಗಳ ಬಗ್ಗೆ ರೈತರಿಗೆ ತಿಳಿಸಿದರು.
ಪ್ರಗತಿಪರ ರೈತ ಶಾಂತಿಲಾಲ್ ರಾಠೊಡ ಮಾತನಾಡಿ, ಪಪಾಯ ಬೆಳೆಯಲು ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿ, ತೋಟಗಾರಿಕೆ ಬೆಳೆ ಬೆಳೆಯಲು ರೈತರು ಮುಂದಾಗಬೇಕೆಂದು ವಿನಂತಿಸಿದರು.
ಸೂಗಪ್ಪ ಪಾಟೀಲ ಮಾತನಾಡಿ, ವಿಜ್ಞಾನಿಗಳ ಸಂಪರ್ಕ ಇಟ್ಟುಕೊಂಡು ನಾವು ಬೆಳೆ ಬೆಳೆದರೆ ಹೆಚ್ಚಿನ ಇಳುವರಿ ಹಾಗೂ ಮಾರುಕಟ್ಟೆ ಬೆಲೆ ಪಡೆಯಬಹುದೆಂದರು.
ತೋಟದ ಮಾಲೀಕ ದೇವರಾಜ ತನ್ನ ಅನುಭವ ವಿವರಿಸಿ, ಒಂದು ಎಕರೆಗೆ ಕನಿಷ್ಠ 1 ಲಕ್ಷವಾದರು ಲಾಭವಾಗುತ್ತದೆಂದು ಹೇಳಿದರು.
ತೋ.ವಿ.ಶಿ. ಘಟಕದ ಪ್ರಾಧ್ಯಾಪಕ ಡಾ| ಪ್ರಶಾಂತ ಮಾತನಾಡಿದರು. ಕೊನೆಯಲ್ಲಿ ರೈತರೊಂದಿಗೆ ಸಂವಾದ ನಡೆಸಲಾಯಿತು. ಸಂವಾದದಲ್ಲಿ ಆಸಕ್ತ ರೈತರು ತಮಗೆ ಅಗತ್ಯವಾದ ಮಾಹಿತಿ ಪಡೆದುಕೊಂಡರು.