Advertisement

4 ತಂಡಗಳು 12 ಅಂಕಗಳು!

06:00 AM May 19, 2018 | |

ಬೆಂಗಳೂರು: ಐಪಿಎಲ್‌ನ ಪ್ಲೇ-ಆಫ್ ಪ್ರವೇಶದ ಲೆಕ್ಕಾಚಾರ ಪಂದ್ಯದಿಂದ ಪಂದ್ಯಕ್ಕೆ ಜಟಿಲವಾಗುತ್ತಲೇ ಹೋಗು ತ್ತಿದೆ. ಗುರುವಾರ ರಾತ್ರಿ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು 14 ರನ್ನುಗಳಿಂದ ಸನ್‌ರೈಸರ್ ಹೈದರಾಬಾದ್‌ಗೆ ಸೋಲುಣಿಸುವ ಮೂಲಕ ಇಂಥದೊಂದು ಸ್ಥಿತಿ ನಿರ್ಮಾಣವಾಗಿದೆ. 

Advertisement

ಸದ್ಯ ಪ್ಲೇ-ಆಫ್ಗೆ ಅಧಿಕೃತ ಪ್ರವೇಶ ಪಡೆದ ತಂಡಗಳು 2 ಮಾತ್ರ-ಹೈದರಾಬಾದ್‌ ಮತ್ತು ಚೆನ್ನೈ. 14 ಅಂಕದೊಂದಿಗೆ 3ನೇ ಸ್ಥಾನದಲ್ಲಿರುವ ಕೋಲ್ಕತಾ ಸ್ಥಿತಿಯೂ ಅನುಕೂಲಕರವೇನಲ್ಲ. ಅಂತಿಮ ಪಂದ್ಯ ಸೋತರೆ ಅದಕ್ಕೂ ಗಂಡಾಂತರ ಕಾದಿದೆ. ಮುಂಬೈ, ಆರ್‌ಸಿಬಿ, ರಾಜಸ್ಥಾನ್‌, ಪಂಜಾಬ್‌ ತಲಾ 12 ಅಂಕಗಳನ್ನು ಹೊಂದಿದ 4 ತಂಡಗಳು. ತಮ್ಮ ಅಂತಿಮ ಲೀಗ್‌ ಪಂದ್ಯ ಗೆದ್ದರೆ ಪ್ಲೇ-ಆಫ್ ಅವಕಾಶ ಈ ಎಲ್ಲ ತಂಡಗಳಿಗೂ ಇದೆ ಎಂಬುದು ಈ ಐಪಿಎಲ್‌ನ ಸ್ವಾರಸ್ಯಕರ ವಿದ್ಯಮಾನ. ಇಲ್ಲಿ “ಪ್ಲಸ್‌’ ರನ್‌ರೇಟ್‌ ಕಾಯ್ದುಕೊಂಡಿರುವ ಮುಂಬೈ ಮತ್ತು ಆರ್‌ಸಿಬಿ ರೇಸ್‌ನಲ್ಲಿ ಮುಂದಿವೆ ಎನ್ನಲಡ್ಡಿಯಿಲ್ಲ.

ಹೈದರಾಬಾದ್‌ ವಿರುದ್ಧ ಗುರುವಾರ ರಾತ್ರಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 6ಕ್ಕೆ 218 ರನ್‌ ಪೇರಿಸಿ ಉತ್ತಮ ರನ್‌ಧಾರಣೆಯನ್ನು ಕಾಯ್ದುಕೊಂಡಿತು. ಜವಾಬಿತ್ತ ಹೈದರಾಬಾದ್‌ಗೆ 3 ವಿಕೆಟಿಗೆ 204 ರನ್‌ ಮಾತ್ರ ಗಳಿಸಲು ಸಾಧ್ಯವಾಯಿತು. ಈ ಸೋಲಿನ ಹೊರತಾಗಿಯೂ ಹೈದರಾಬಾದ್‌ ಅಗ್ರಸ್ಥಾನ ಕಾಯ್ದುಕೊಂಡಿದೆ. ಶುಕ್ರವಾರ ಚೆನ್ನೈ ಜಯ ಸಾಧಿಸಿದರೆ ಆಗ ಸ್ಥಾನ ಪಲ್ಲಟವಾಗಬಹುದು.

ಬೌಲರ್‌ಗಳಿಗೆ ಕೊಹ್ಲಿ ಮೆಚ್ಚುಗೆ
ಕೊನೆಯ ಹಂತದಲ್ಲಿ ಕಮಾಲ್‌ ಮಾಡುತ್ತಿರುವ ಆರ್‌ಸಿಬಿ ಬೊಂಬಾಟ್‌ ಬ್ಯಾಟಿಂಗ್‌ ಮೂಲಕ ತನ್ನ 6ನೇ ಜಯ ಸಾಧಿಸಿತು. ಈ ಕುರಿತು ಪ್ರತಿಕ್ರಿಯಿಸಿದ ನಾಯಕ ವಿರಾಟ್‌ ಕೊಹ್ಲಿ, ಬೌಲರ್‌ಗಳು ನಿಯಂತ್ರಣ ಸಾಧಿಸಿದ್ದರಿಂದಲೇ ಗೆಲುವು ಸಾಧ್ಯವಾಯಿತು ಎಂದರು.

“ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತವಿತ್ತು ನಿಜ, ಆದರೆ ಬೌಲರ್‌ಗಳು ನಿಯಂತ್ರಿತ ದಾಳಿ ಸಂಘಟಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಸಿದರು. ಮಂಜಿನ ನಡುವೆಯೂ ಬೌಲರ್‌ಗಳು ಚೆಂಡಿನ ಮೇಲೆ ಹಿಡಿತ ಸಾಧಿಸಿದರು. ಇದು ಸಾಮಾನ್ಯ ಕೆಲಸ ಆಗಿರಲಿಲ್ಲ. ರಾಜಸ್ಥಾನ್‌ ವಿರುದ್ಧ ಇದೇ ಲಯದಲ್ಲಿ ಮುಂದುವರಿಯಬೇಕಿದೆ. ಮೊಯಿನ್‌, ಎಬಿಡಿ ಮತ್ತು ಕಾಲಿನ್‌ ಶ್ರೇಷ್ಠ ಮಟ್ಟದ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ನಾವೀಗ ಪರಿಪೂರ್ಣ ಪ್ಲೇಯಿಂಗ್‌ ಇಲೆವೆನ್‌ ಹೊಂದಿದ್ದೇವೆ…’ ಎಂದು ಕೊಹ್ಲಿ ಹೇಳಿದರು.

Advertisement

39 ಎಸೆತಗಳಿಂದ 69 ರನ್‌ ಬಾರಿಸಿದ ಎಬಿ ಡಿ ವಿಲಿಯರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಆದರೆ ಇವರಿಗಿಂತ ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿ 34 ಎಸೆತಗಳಿಂದ 65 ರನ್‌ (6 ಸಿಕ್ಸರ್‌) ಬಾರಿಸುವ ಜತೆಗೆ ಒಂದು ವಿಕೆಟ್‌ ಕೂಡ ಕಿತ್ತ ಮೊಯಿನ್‌ ಅಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ತಪ್ಪಿದ್ದು ಅಚ್ಚರಿಯಾಗಿ ಕಂಡಿತು.

ಬೌಲಿಂಗ್‌ ಯೋಜನೆ ಕೈಕೊಟ್ಟಿತು
ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ತವರಿನ ಕ್ರಿಕೆಟಿಗ ಮನೀಷ್‌ ಪಾಂಡೆ ಅಮೋಘ ಜತೆಯಾಟ ನಡೆಸುತ್ತಿದ್ದುದನ್ನು ಕಂಡಾಗ ಹೈದರಾಬಾದ್‌ಗೆ ಗೆಲುವಿನ ಸಾಧ್ಯತೆ ಹೆಚ್ಚಿತ್ತು. ಆದರೂ ಕೊನೆಯ ಕ್ಷಣದ ಒತ್ತಡವನ್ನು ಇವರಿಂದ ನಿಭಾಯಿಸಲಾಗಲಿಲ್ಲ. 

ವಿಲಿಯಮ್ಸನ್‌-ಪಾಂಡೆ ಜೋಡಿಯಿಂದ 3ನೇ ವಿಕೆಟಿಗೆ 11.1 ಓವರ್‌ಗಳಿಂದ 135 ರನ್‌ ಹರಿದು ಬಂತು. ಆದರೆ 20ನೇ ಓವರಿನಲ್ಲಿ 20 ರನ್‌ ತೆಗೆಯುವ ಕಠಿನ ಸವಾಲು ಎದುರಾಯಿತು. ಸಿರಾಜ್‌ ಅವರ ಮೊದಲ ಎಸೆತದಲ್ಲೇ ವಿಲಿಯಮ್ಸನ್‌ ಔಟಾದರು. ಪಾಂಡೆ-ಹೂಡಾ ಜೋಡಿಗೆ ಒತ್ತಡವನ್ನು ನಿಭಾಯಿಸಲಾಗಲಿಲ್ಲ.

ಕೇನ್‌ ವಿಲಿಯಮ್ಸನ್‌ ಗಳಿಕೆ 42 ಎಸೆತಗಳಿಂದ 81 ರನ್‌ (7 ಬೌಂಡರಿ, 5 ಸಿಕ್ಸರ್‌). ಮನೀಷ್‌ ಪಾಂಡೆ 38 ಎಸೆತ ಎದುರಿಸಿ ಅಜೇಯ 62 ರನ್‌ ಹೊಡೆದರು (7 ಬೌಂಡರಿ, 2 ಸಿಕ್ಸರ್‌). ಆರಂಭಕಾರ ಅಲೆಕ್ಸ್‌ ಹೇಲ್ಸ್‌ 24 ಎಸೆತಗಳಿಂದ 37 ರನ್‌ ಹೊಡೆದರೆ, ಶಿಖರ್‌ ಧವನ್‌ 18 ರನ್‌ ಮಾಡಿ ನಿರ್ಗಮಿಸಿದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಕೇನ್‌ ವಿಲಿಯಮ್ಸನ್‌ ಐಪಿಎಲ್‌ನಲ್ಲಿ ಸತತ 4 ಅರ್ಧ ಶತಕ ಹೊಡೆದ 4ನೇ ಬ್ಯಾಟ್ಸ್‌ಮನ್‌ ಎನಿಸಿದರು. ಉಳಿದವರೆಂದರೆ ವೀರೇಂದ್ರ ಸೆಹವಾಗ್‌, ಜಾಸ್‌ ಬಟ್ಲರ್‌ (ತಲಾ 5) ಮತ್ತು ವಿರಾಟ್‌ ಕೊಹ್ಲಿ (4).

ವಿಲಿಯಮ್ಸನ್‌-ಮನೀಷ್‌ ಪಾಂಡೆ 135 ರನ್‌ ಜತೆಯಾಟ ನಡೆಸಿದರು. ಇದು ಐಪಿಎಲ್‌ ಚೇಸಿಂಗ್‌ ವೇಳೆ ಪರಾಜಯಗೊಂಡ ತಂಡದ ಪರ ದಾಖಲಾದ ಅತೀ ದೊಡ್ಡ ಜತೆಯಾಟ. 2014ರಲ್ಲಿ ರಾಜಸ್ಥಾನ್‌ ವಿರುದ್ಧ ಕೆಕೆಆರ್‌ನ ಗೌತಮ್‌ ಗಂಭೀರ್‌-ರಾಬಿನ್‌ ಉತ್ತಪ್ಪ 121 ರನ್‌ ಗಳಿಸಿದ್ದು ಹಿಂದಿನ ದೊಡ್ಡ ಜತೆಯಾಟವಾಗಿತ್ತು.

ರಶೀದ್‌ ಖಾನ್‌ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ ಪೂರ್ತಿಗೊಳಿಸಿದರು. ಇದು 104ನೇ ಪಂದ್ಯದಲ್ಲಿ ದಾಖಲಾಯಿತು. ಕೃಶ್ಮರ್‌ ಸ್ಯಾಂಟೋಕಿ 94 ಪಂದ್ಯಗಳಲ್ಲಿ 150 ವಿಕೆಟ್‌ ಉರುಳಿಸಿದ್ದು ದಾಖಲೆ. ಸಯೀದ್‌ ಅಜ್ಮಲ್‌ ಕೂಡ 104 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ಐಪಿಎಲ್‌ ಪಂದ್ಯದಲ್ಲಿ ಅತ್ಯಧಿಕ 422 ರನ್‌ ಪೇರಿಸಲ್ಪಟ್ಟಿತು. ಇದೇ ಋತುವಿನ ಆರ್‌ಸಿಬಿ-ರಾಜಸ್ಥಾನ್‌ ನಡುವಿನ ಪಂದ್ಯದಲ್ಲಿ 415 ರನ್‌ ಒಟ್ಟುಗೂಡಿದ ದಾಖಲೆ ಪತನಗೊಂಡಿತು.

ಕೇನ್‌ ವಿಲಿಯಮ್ಸನ್‌ 625 ರನ್‌ ಪೇರಿಸಿದರು. ಇದು ಟಿ20 ಸರಣಿ/ಪಂದ್ಯಾವಳಿಯೊಂದರಲ್ಲಿ ನ್ಯೂಜಿಲ್ಯಾಂಡ್‌ ಕ್ರಿಕೆಟಿಗನ ಅತ್ಯಧಿಕ ಗಳಿಕೆಯಾಗಿದೆ. ಅಲ್ಲದೇ ಟಿ20 ಪಂದ್ಯಾವಳಿಯಲ್ಲಿ 600 ರನ್‌ ಪೇರಿಸಿದ ಮೊದಲ ಕಿವೀಸ್‌ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 2012-13ರ ಎಚ್‌ಆರ್‌ವಿ ಕಪ್‌ ಟೂರ್ನಿಯಲ್ಲಿ ವೆಲ್ಲಿಂಗ್ಟನ್‌ ತಂಡದ ಜೆಸ್ಸಿ ರೈಡರ್‌ 584 ರನ್‌ ಗಳಿಸಿದ್ದು ಕಿವೀಸ್‌ ದಾಖಲೆಯಾಗಿತ್ತು (12 ಇನ್ನಿಂಗ್ಸ್‌).

ವಿಲಿಯಮ್ಸನ್‌ ಐಪಿಎಲ್‌ನಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದರು (28 ಇನ್ನಿಂಗ್ಸ್‌, 1,036 ರನ್‌). ಅವರು ಹೈದರಾಬಾದ್‌ ಪರ ಈ ಸಾಧನೆ ಮಾಡಿದ 3ನೇ ಬ್ಯಾಟ್ಸ್‌ಮನ್‌. ಶಿಖರ್‌ ಧವನ್‌ ಮತ್ತು ಡೇವಿಡ್‌ ವಾರ್ನರ್‌ ಉಳಿದಿಬ್ಬರು.

ಸ್ಕೋರ್‌ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು    6 ವಿಕೆಟಿಗೆ 218
ಸನ್‌ರೈಸರ್ ಹೈದರಾಬಾದ್‌
ಶಿಖರ್‌ ಧವನ್‌    ಸಿ ಮತ್ತು ಬಿ ಚಾಹಲ್‌    18
ಅಲೆಕ್ಸ್‌ ಹೇಲ್ಸ್‌    ಸಿ ಡಿ ವಿಲಿಯರ್ ಬಿ ಅಲಿ    37
ಕೇನ್‌ ವಿಲಿಯಮ್ಸನ್‌    ಸಿ ಕಾಲಿನ್‌ ಬಿ ಸಿರಾಜ್‌    81
ಮನೀಷ್‌ ಪಾಂಡೆ    ಔಟಾಗದೆ    62
ದೀಪಕ್‌ ಹೂಡಾ    ಔಟಾಗದೆ    1

ಇತರ        5
ಒಟ್ಟು  (20 ಓವರ್‌ಗಳಲ್ಲಿ 3 ವಿಕೆಟಿಗೆ)    204
ವಿಕೆಟ್‌ ಪತನ: 1-47, 2-64, 3-199.

ಬೌಲಿಂಗ್‌:
ಉಮೇಶ್‌ ಯಾದವ್‌        4-0-31-0
ಟಿಮ್‌ ಸೌಥಿ        4-0-45-0
ಯಜುವೇಂದ್ರ ಚಾಹಲ್‌    4-0-28-1
ಮೊಹಮ್ಮದ್‌ ಸಿರಾಜ್‌        4-0-43-1
ಮೊಯಿನ್‌ ಅಲಿ        2-0-21-1
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌    2-0-34-0

ಪಂದ್ಯಶ್ರೇಷ್ಠ: ಎಬಿ ಡಿ ವಿಲಿಯರ್

ಬೌಲಿಂಗ್‌ ವೇಳೆ ನಮ್ಮ ಯೋಜನೆ ವಿಫ‌ಲವಾಯಿತು. ಆರ್‌ಸಿಬಿ ಅಮೋಘ ಬ್ಯಾಟಿಂಗ್‌ ಲೈನ್‌ಅಪ್‌ ಹೊಂದಿರುವ ತಂಡ. ಹೀಗಾಗಿ ನಾವು ಒತ್ತಡಕ್ಕೆ ಸಿಲುಕಿದೆವು. ಇಂಥ ದೊಡ್ಡ ಮೊತ್ತವನ್ನು ಬೆನ್ನಟ್ಟುವ ವೇಳೆ ನಾವು ಕೆಲವು ಋಣಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ನಮ್ಮಿಂದ ಇದು ಸಾಧ್ಯವಾಗಲಿಲ್ಲ  
ಕೇನ್‌ ವಿಲಿಯಮ್ಸನ್‌

Advertisement

Udayavani is now on Telegram. Click here to join our channel and stay updated with the latest news.

Next