Advertisement
ಸಚಿವ ಎಂ.ಬಿ. ಪಾಟೀಲ ಸ್ಪ ರ್ಧಿಸುತ್ತಿರುವ ಬಬಲೇಶ್ವರ ಕ್ಷೇತ್ರ ವ್ಯಾಪ್ತಿಯ ಸಾರವಾಡ ಗ್ರಾಮದಲ್ಲಿ ಮೇ 8ರಂದು ಬೆಳಗ್ಗೆ10ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು
ಮಾತನಾಡಲಿದ್ದಾರೆ. ಮತ್ತೂಂದೆಡೆ ಕೆಲವೇ ಗಂಟೆಗಳಲ್ಲಿ ವಿಜಯಪುರ ನಗರಕ್ಕೆ ಬಂದಿಳಿಯುವ ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿ, ನಗರದ ಎಎಸ್‌ಪಿ ವಾಣಿಜ್ಯ ಕಾಲೇಜು ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.
Related Articles
Advertisement
ಸೋನಿಯಾ ಆಗಮನಕ್ಕೆ ವೇದಿಕೆ: ಚುನಾವಣೆ ಪ್ರಚಾರ ಕಾರ್ಯದಿಂದ ಸುಮಾರು ಒಂದೂವರೆ ವರ್ಷದಿಂದ ದೂರವೇ ಇದ್ದ ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿ, ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಸಮ್ಮತಿ ಸೂಚಿಸಿದ್ದಾರೆ. ಇದಕ್ಕಾಗಿ ವಿಜಯಪುರ ಜಿಲ್ಲೆಯನ್ನೇ ಆಯ್ಕೆ ಮಾಡಿಕೊಂಡಿರುವ ಅವರು, ಮೇ 8ರಂದು ಮಧ್ಯಾಹ್ನ 3ಕ್ಕೆ ನಗರಕ್ಕೆ ಬರುತ್ತಿದ್ದಾರೆ.
ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಬಿಎಲ್ ಡಿಇ ಸಂಸ್ಥೆಯ ಎಎಸ್‌ಪಿ ನೂತನ ಕಾಲೇಜು ಕ್ಯಾಂಪಸ್‌ನಲ್ಲಿ ಸೋನಿಯಾ ಆಗಮನಕ್ಕಾಗಿ ಕಾಂಗ್ರೆಸ್ ಸಮಾವೇಶಕ್ಕೆ ಸಕಲ ಸಿದ್ಧತೆ ನಡೆದಿದೆ. 30 ಉದ್ದ-60 ಅಗಲದ ಬೃಹತ್ ವೇದಿಕೆ ರೂಪಿಸಿದ್ದು ವೇದಿಕೆ ಮುಂಭಾಗದಲ್ಲಿ 50 ಸಾವಿರ ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ.
ಸಮಾವೇಶಕ್ಕೆ ಆಗಮಿಸುವ ಕಾಯಕರ್ತರಿಗೆ ಬಿಸಿಲಿನ ಧಗೆ ನೀಗಿಸಿಕೊಳ್ಳಲು ಕುಡಿಯುವ ನೀರಿನ ಜೊತೆಗೆ ಮಜ್ಜಿಗೆ ವ್ಯವಸ್ಥೆ ಮಾಡಿದೆ. ಸಮಾವೇಶದ ಸಿದ್ಧತೆ ಉಸ್ತುವಾರಿ ನೋಡಿಕೊಳ್ಳಲು ಎಐಸಿಸಿ ಕಾರ್ಯದರ್ಶಿ ಮಾಣಿಕಂ ಠಾಗೋರ ರವಿವಾರವೇ ನಗರಕ್ಕೆ ಆಗಮಿಸಿದ್ದು, ಸಚಿವ ಎಂ.ಬಿ.ಪಾಟೀಲ ಅವರೊಂದಿಗೆ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ.ಪುತ್ರ ರಾಹುಲ್ ಗಾಂಧಿ ಅವರಿಗೆ ಪಕ್ಷದ ಹೊಣೆ ಹೊರಿಸಿದ ಬಳಿಕ ಚುನಾವಣಾ ಪ್ರಚಾರದಿಂದ ಸೋನಿಯಾ ಗಾಂಧಿ ಬಹುತೇಕ ದೂರವೇ ಉಳಿದಿದ್ದರು. ಆದರೆ ಕಾಂಗ್ರೆಸ್ ಪಾಲಿಗೆ ಅಸ್ತಿತ್ವ ಉಳಿಸಿಕೊಳ್ಳಲು ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವ ಅನಿವಾರ್ಯ ಹಾಗೂ ಅಗತ್ಯವಿದೆ. ಇದಕ್ಕಾಗಿ ಪಕ್ಷದ ಗೆಲುವಿಗಾಗಿ ತಮ್ಮ ಆಗಮನ ಸ್ಫೂರ್ತಿ ನೀಡುವ ನಿರೀಕ್ಷೆಯಿಂದ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಏಕೈಕ ಪ್ರಚಾರಕ್ಕೆ ಹೊರಟು ನಿಂತಿದ್ದಾರೆ. ಇದಕ್ಕಾಗಿ ಉತ್ತರ ಕರ್ನಾಟಕದ ಪ್ರಚಾರಕ್ಕೆ ಬಸವ ಜನ್ಮಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಭದ್ರತೆ ಹಾಗೂ ಸಮಯದ ಉಳಿತಾಯಕ್ಕಾಗಿ ಸೋನಿಯಾ ಅವರ ಹೆಲಿಕಾಪ್ಟರ್ ಇಳಿಸಲು ಸಮಾವೇಶ ವೇದಿಕೆ ಪಕ್ಕದಲ್ಲೇ ಹೆಲಿಪ್ಯಾಡ್ ನಿರ್ಮಿಸಲಾಗಿದೆ.
2.50 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸೂಕ್ತ ಆಸನದ ವ್ಯವಸ್ಥೆ ಮಾಡಲಾಗಿದೆ. ಕಾಲೇಜು ಮೈದಾನದಲ್ಲೇ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಹಾಗೂ ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ.ಪಾಟೀಲ ಮಾಹಿತಿ ನೀಡಿದ್ದಾರೆ.