ತಿರುವನಂತಪುರಂ: ಶ್ರೀಲಂಕಾದಲ್ಲಿ ಕಳೆದ ತಿಂಗಳು ಈಸ್ಟರ್ ಹಬ್ಬದಂದು ಸ್ಫೋಟ ನಡೆಸಿದ ಅನಂತರ ಇಡೀ ದೇಶದಲ್ಲಿ ಐಸಿಸ್ ಉಗ್ರರ ನಿರ್ನಾಮ ನಡೆಯುತ್ತಿದ್ದರೆ, ಅಲ್ಲಿಂದ 15 ಉಗ್ರರು ಲಕ್ಷದ್ವೀಪದ ಕಡೆಗೆ ಬೋಟ್‌ನಲ್ಲಿ ಹೊರಟಿದ್ದಾರೆ ಎಂಬ ಗುಪ್ತಚರ ಮಾಹಿತಿ ಈಗ ಭಾರತದ ಕರಾವಳಿಯನ್ನು ಭಯಭೀತಗೊ ಳಿಸಿದೆ. ಅದರಲ್ಲೂ ಕೇರಳ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸಾಮಾನ್ಯವಾಗಿ ಈ ರೀತಿ ಉಗ್ರರು ಬರುತ್ತಾರೆ ಎಂದು ಆಗಾಗ್ಗೆ ಗುಪ್ತಚರ ಮಾಹಿತಿ ಬರುತ್ತಲೇ ಇರುತ್ತದೆ ಯಾದರೂ, ಈ ಬಾರಿ ಖಚಿತವಾಗಿ 15 ಉಗ್ರರು ಬರುತ್ತಿದ್ದಾರೆ ಎಂಬುದು ಆತಂಕ ಮೂಡಿಸಿದೆ.
ಲಕ್ಷದ್ವೀಪ ಹಾಗೂ ಮಿನಿಕೋಯ್ ದ್ವೀಪದ ಸುತ್ತ ನೌಕಾಪಡೆ ತನ್ನ ಹಡಗುಗಳು ಮತ್ತು ವಿಮಾನಗಳನ್ನು ನಿಯೋಜಿಸಿದೆ. ಮೂಲಗಳ ಪ್ರಕಾರ ಉಗ್ರರು ಬಿಳಿ ಬೋಟ್‌ನಲ್ಲಿ ಪ್ರಯಾಣ ಆರಂಭಿಸಿದ್ದಾರೆ ಎನ್ನಲಾಗಿದೆ.
ಯಾವುದೇ ಸನ್ನಿವೇಶದಲ್ಲೂ ಅವರು ಭಾರತದ ಕರಾವಳಿಗೆ ಪ್ರವೇಶಿಸುವುದನ್ನು ತಡೆಯಲು ನಿರ್ಧರಿಸ ಲಾಗಿದ್ದು, ಮೀನುಗಾರರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಯಾವುದೇ ಬೋಟ್‌ಗಳಲ್ಲಿ ಅಸಹಜ ಚಟುವಟಿಕೆ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಕರಾವಳಿ ಪೊಲೀಸ್ ಪಡೆ, ನೌಕಾಪಡೆ ಈ ನಿಟ್ಟಿನಲ್ಲಿ ಜಾಗೃತವಾಗಿದೆ. ಕರಾವಳಿಯಾದ್ಯಂತ ಇರುವ ವಿಚಕ್ಷಣಾ ಪೋಸ್ಟ್‌ಗಳಿಗೂ ಎಚ್ಚರಿಕೆ ರವಾನಿಸಲಾಗಿದೆ.
ಕೇರಳವೇ ಆಪ್ತ: ಮೂಲಗಳ ಪ್ರಕಾರ ಐಸಿಸ್ ಉಗ್ರರಿಗೆ ಕೇರಳದಲ್ಲಿ ಸಂಪರ್ಕ ಇರುವುದರಿಂದ ಇವರು ಕೇರಳ ಕರಾವಳಿಗೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಲಕ್ಷದ್ವೀಪ ಮತ್ತು ಮಿನಿಕೋಯ್ ದ್ವೀಪಕ್ಕೆ ಸಮೀಪದಲ್ಲಿರುವ ತ್ರಿಶೂರ್ ಮತ್ತು ಕಲ್ಲಿಕೋಟೆ ಕರಾವಳಿಯಲ್ಲಿ ವಿಶೇಷ ಭದ್ರತೆ ಏರ್ಪಡಿಸಲಾಗಿದೆ.
ಶ್ರೀಲಂಕಾದಲ್ಲಿ ಉಗ್ರರಿಗೆ ನಡುಕ: ಕಳೆದ ಎಪ್ರಿಲ್ 21 ರ ಈಸ್ಟರ್ ದಾಳಿ ಬೆನ್ನಲ್ಲೇ ಲಂಕಾ ದಲ್ಲಿ ಉಗ್ರರನ್ನು ನಿರ್ಮೂಲನೆಗೊಳಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಲ್ಲ ಶಂಕಿತ ರನ್ನೂ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸೇನೆಯನ್ನೂ ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.