Advertisement

ಮೋದಿ ಬಳಿ ಸಚಿವರೂ ಸುಳಿಯುವ ಹಾಗಿಲ್ಲ!

09:40 AM Jun 27, 2018 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಮೀಪಕ್ಕೆ ಇನ್ನು ಮುಂದೆ ಅನುಮತಿ ಇಲ್ಲದೇ ಸಚಿವರಾಗಲೀ, ಅಧಿಕಾರಿಗಳಾಗಲೀ ಹೋಗುವಂತಿಲ್ಲ!

Advertisement

“ಇದೇನು ಹೀಗಾದ್ರೆ’ ಎಂದು ಹುಬ್ಬೇರಿಸಬೇಡಿ. ಕಳೆದ ಕೆಲವು ತಿಂಗಳುಗಳಿಂದ ಪ್ರಧಾನಿ ಮೋದಿ ಅವರಿಗೆ ಪ್ರಾಣ ಬೆದರಿಕೆ ನಿರಂತರವಾಗಿರುವ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಯಾವುದೇ ಸಂದರ್ಭದಲ್ಲಿ ಮೋದಿ ಅವರ ಮೇಲೆ ದಾಳಿ ನಡೆಯಬಹುದಾದ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಅಭಿಪ್ರಾಯಪಟ್ಟಿರುವ ಗೃಹ ಇಲಾಖೆ, ಇದೀಗ ಅವರ ಭದ್ರತೆಗೆ ಹೊಸ ಮಾರ್ಗ ಸೂಚಿಯನ್ನು ಪ್ರಕಟಿಸಿ, ರಾಜ್ಯಗಳಿಗೆ ಕಳುಹಿಸಿದೆ.

ಈಗಾಗಲೇ ಮೋದಿ ಭದ್ರತೆಯನ್ನು ವಿಶೇಷ ಭದ್ರತಾ ಪಡೆ(ಎಸ್‌ಪಿಜಿ) ನೋಡಿಕೊಳ್ಳುತ್ತಿದೆ. ಜತೆಗೆ, ದ ಕ್ಲೋಸ್‌ ಪ್ರೊಟೆಕ್ಷನ್‌ ಟೀಮ್‌ (ಸಿಪಿಟಿ) ಕೂಡ ಕಣ್ಣಿಟ್ಟಿರಲಿದೆ. ಇದರಿಂದ  ಪ್ರಧಾನಿ ಸುತ್ತಲಿನ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ ಆಗಲಿದೆ. ಈಗಾಗಲೇ ಒಂದು ಹಂತದಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಪ್ರಧಾನಿ ಮೋದಿ ಅವರ ಸಮೀಪ ಈವರೆಗೆ ಸಚಿವರು, ಅಧಿಕಾರಿಗಳು ಸಲೀಸಾಗಿ ಹೋಗುವ ಅವಕಾಶ ಇತ್ತು. ಆದರೆ ಇನ್ನು ಮುಂದೆ ಎಸ್‌ಪಿಜಿ ಒಪ್ಪಿಗೆ ಪಡೆಯದೇ ಅವರ ಸಮೀಪಕ್ಕೆ ಹೋಗುವಂತಿಲ್ಲ. 2019ರ ಲೋಕಸಭಾ ಚುನಾವಣೆಯೂ ಸಮೀಪಿಸುತ್ತಿರುವು ದರಿಂದ ಮೋದಿ ಅವರು ಮೊದಲ ಟಾರ್ಗೆಟ್‌ ಆಗುತ್ತಿದ್ದಾರೆ. ಜೀವ ಬೆದರಿಕೆ ಗಳು ಹೆಚ್ಚಿವೆ ಎಂದು ಸಚಿವಾಲಯ ಹೇಳಿದೆ. ಅಲ್ಲದೇ, ಪ್ರಧಾನಿ ಭೇಟಿ ವೇಳೆ ಪಾಲಿಸುವಂತೆ ನೋಡಿಕೊಳ್ಳಲು ಎಲ್ಲಾ ರಾಜ್ಯಗಳಿಗೂ ಈ ಭದ್ರತಾ ನಿಯಮಗಳನ್ನು ಕಳುಹಿಸಲಾಗಿದೆ.

ಕಾರಣಗಳು ಏನು?
ನಿಷೇಧಿತ ಸಿಪಿಐ (ಮಾವೋವಾದಿ) ಜತೆ ಸಂಪರ್ಕ ಹೊಂದಿರುವವರು ಪ್ರಧಾನಿ ಮೋದಿ ಮೇಲೆ ದಾಳಿಗೆ ಮುಂದಾಗಿ ರುವ ಅಂಶದ ಪತ್ರ ಪತ್ತೆಯಾಗಿದ್ದಾಗಿ ಪುಣೆ ಪೊಲೀಸರು ಇತ್ತೀಚೆಗೆ ಬಹಿರಂಗ ಗೊಳಿಸಿದ್ದರು. ಇದೇ ಆಧಾರದ ಮೇಲೆ ಐವರನ್ನು ಬಂಧಿಸಲಾಗಿತ್ತು.
ಪತ್ರದಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಮೇಲಿನ ದಾಳಿ ಮಾದರಿಯಲ್ಲೇ ಮೋದಿ ಅವರ ಮೇಲೂ ದಾಳಿ ನಡೆಸುವುದಾಗಿ ಬರೆಯಲಾಗಿತ್ತು.
ಪಶ್ಚಿಮ ಬಂಗಾಳಕ್ಕೆ ಇತ್ತೀಚೆಗೆ ಭೇಟಿ ನೀಡಿದ ವೇಳೆ ವ್ಯಕ್ತಿಯೊಬ್ಬ ಮೋದಿ ಅವರ ಸುತ್ತಲಿರುವ ಆರು ಹಂತದ ಭದ್ರತಾ ವ್ಯವಸ್ಥೆಯನ್ನೂ ಯಾಮಾರಿಸಿ ನುಗ್ಗಿದ್ದ ಘಟನೆ ನಡೆದಿತ್ತು.

ಸಿಪಿಟಿ “ಹೊಸ ಕಣ್ಣು’
“ದ ಕ್ಲೋಸ್‌ ಪ್ರೊಟೆಕ್ಷನ್‌ ಟೀಮ್‌’ (ಸಿಪಿಟಿ)ಇದೀಗ ನಿಯೋಜನೆ ಆಗುವ ಹಂತದಲ್ಲಿದೆ. ಪ್ರಧಾನಿ ಅವರ ಅತಿ ಸಮೀಪ ಹೋಗುವ ಎಲ್ಲರನ್ನೂ ಈ ತಂಡ ನಿಭಾಯಿಸಲಿದೆ. ಸಚಿವರು, ಅಧಿಕಾರಿಗಳೂ ಈ ವ್ಯವಸ್ಥೆಯ ಅಡಿ ತಪಾಸಣೆಗೆ ಒಳಪಡಬೇಕಾಗುತ್ತದೆ. ಇತ್ತೀಚೆಗೆ ನಡೆದ ಕೆಲ ಬೆಳವಣಿಗೆ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ಮತ್ತು ಗುಪ್ತಚರ ಇಲಾಖೆ ನಿರ್ದೇಶಕ ರಾಜೀವ್‌ ಜತೆ ಚರ್ಚಿಸಿ ಈ ಕ್ರಮಕ್ಕೆ ಮುಂದಾಗಿದ್ದಾರೆ.

Advertisement

ರಾಲಿ ವೇಳೆ ಹುಷಾರು 
ಅಷ್ಟಕ್ಕೂ ಗೃಹ ಸಚಿವಾಲಯ ಎಸ್‌ಪಿಜಿ ಸಲಹೆ ಮೇರೆಗೆ ಈ ಕ್ರಮಕ್ಕೆ ಮುಂದಾಗಿದೆ. ಮೋದಿ ಅವರು ಪಕ್ಷದ ಪ್ರಮುಖ ಪ್ರಚಾರಕರೂ ಆಗಿರುವ ಕಾರಣ ಸಹಜವಾಗಿ ಎಲ್ಲರ ಕಣ್ಣು ಅವರ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ರ್ಯಾಲಿಗಳ ಸಮಯದಲ್ಲಿಯೇ ದಾಳಿ ನಡೆಯುವ ಸಾಧ್ಯತೆಗಳೂ ಹೆಚ್ಚಿರುತ್ತದೆ. ಹೀಗಾಗಿ, ರಾಲಿಗಳಲ್ಲಿ ಸಾಧ್ಯವಾದಷ್ಟು ಪಾಲ್ಗೊಳ್ಳದೇ ಇರುವುದು, ರೋಡ್‌ ಶೋ ನಡೆಸದೇ ಇರುವುದು ಸೂಕ್ತ ಎಂದು ಎಸ್‌ಪಿಜಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next