Advertisement
ಬೆಳ್ತಂಗಡಿ ತಾಲೂಕಿನ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಮುಗುಳಿಯಲ್ಲಿ ಒಂದು ಪರಿಣಾಮಕಾರಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿರುವ ಯಶೋಗಾಥೆಯಿದು. ದಾನಿಗಳ ಎರಡು ಎಕ್ರೆಯಲ್ಲಿ 1960ರಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ ಸ್ಥಾಪನೆಯಾದ ಶಾಲೆಯಿದು. ಸ್ಥಾಪಕ ಅಧ್ಯಕ್ಷರಾಗಿ ಮುಗುಳಿ ದಿ| ಎಂ.ಪರಮೇಶ್ವರ ರಾವ್ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದವರು. 2012ರಲ್ಲಿ ಶಾಲೆ ಸುವರ್ಣ ಮಹೋತ್ಸವ ಆಚರಿಸಿದ್ದು, 2014ರಲ್ಲಿ ಶಿಕ್ಷಣ ಇಲಾಖೆಯಿಂದ ತಾಲೂಕಿನ ಉತ್ತಮ ಶಾಲೆ ಎಂಬ ಪ್ರಶಸ್ತಿಗೂ ಪಾತ್ರವಾಗಿದೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ವೇನೋ ಇದೆ. ಆದರೆ ಮೂಲ ಸೌಕರ್ಯವೆಂಬ ಕೊರಗು ಪ್ರತೀ ಮಕ್ಕಳಿಗೆ ಕಾಡುತ್ತಿದೆ.
ಕಲ್ಪನೆಯಡಿ ಪ್ರಗತಿ
ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಬೇಡಿಕೆ ಮೇರೆಗೆ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಇದೇ ಊರಿನವರಾದ ಜಗದೀಶ್ ರಾವ್ ಮುಗುಳಿ ತಾವು ಕಲಿತ ಶಾಲೆಯ ಅಭಿವೃದ್ಧಿಯನ್ನು ಚಿಂತಿಸಿದ್ದರು. ಇದಕ್ಕೆ ಸಹಕಾರ ನೀಡಿದವರು ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಬಿ.ಕೆ.ಧನಂಜಯ ರಾವ್. ಇವರಿಬ್ಬರ ಸಂಯೋಜನೆಯಲ್ಲಿ ರೋಟರಿ ಇಂದಿರಾನಗರ ಬೆಂಗಳೂರು ಹಾಗೂ ರೋಟರಿ ಬೆಳ್ತಂಗಡಿ ಸಹಭಾಗಿತ್ವದಲ್ಲಿ ಇದೀಗ 7.50 ಲಕ್ಷ ರೂ. ಶಾಲೆಯ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. ಈಗಾಗಲೆ ರೈಲಿನ ಮಾದರಿ ಶಾಲೆಗೆ ಬಣ್ಣ ಬಳಿದು, ಪ್ರತೀ ಕೊಠಡಿ ಸಹಿತ ಶೌಚಾಲಯಕ್ಕೆ ಟೈಲ್ಸ್ ಅಳವಡಿಕೆ, ಮುಂಭಾಗ ಗಾರ್ಡನಿಂಗ್ ರಚನೆ, ಧ್ವಜಸ್ತಂಭ ನಿರ್ಮಾಣ ಸಹಿತ ಅಗತ್ಯ ಸೌಕರ್ಯ ಒದಗಿಸಲಾಗುತ್ತಿದೆ.
Related Articles
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಶಾಲೆಯ ಬಹುತೇಕ ಅಗತ್ಯ ಕೆಲಸಗಳನ್ನು ತಾವೇ ನಿರ್ವಹಿಸಿ ಮುತುವರ್ಜಿ ವಹಿಸುತ್ತಿದ್ದಾರೆ. ಶಾಲೆಗೆ ಕಾಂಪೌಂಡ್ ಕೊರತೆ ಇದೆ, ಆಟದ ಮೈದಾನ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. 1ರಿಂದ 7ರವರೆಗೆ ಪ್ರಸಕ್ತ 52 ವಿದ್ಯಾರ್ಥಿಗಳ ದಾಖಲಾತಿಯಿದೆ. ಮುಖ್ಯ ಶಿಕ್ಷಕರು ಸಹಿತ ಇಬ್ಬರು ಶಿಕ್ಷಕರ ಹುದ್ದೆ ಖಾಲಿ ಇದೆ. ಪ್ರಭಾರ ಮುಖ್ಯಶಿಕ್ಷಕಿಯಾಗಿ ಲೂಸಿಲೀನ ಮೊರಾಸ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕಿ ಶಶಿಕಲಾ ದಾನಿಗಳನ್ನು ಒಗ್ಗೂಡಿಸಿ ಶಾಲಾ ಏಳಿಗೆಗೆ ಶ್ರಮಿಸುತ್ತಿದ್ದಾರೆ.
Advertisement
ಮಾ. 19ಕ್ಕೆ ಹಸ್ತಾಂತರಶಿಕ್ಷಣವೆಂಬುದು ಬದುಕಿನ ಬುನಾದಿ. ನಾವು ಕಲಿತ ಶಾಲೆಗೆ ನಮ್ಮಿಂದಾದ ಕೊಡುಗೆ ನೀಡಿಬೇಕು ಎಂಬ ಉದ್ದೇಶದಿಂದ ಮುಗುಳಿ ಸರಕಾರಿ ಶಾಲೆಗೆ ಶಿಕ್ಷಕರ ಬೇಡಿಕೆಯಂತೆ ಸವಲತ್ತು ಒದಗಿಸುತ್ತಿದ್ದೇವೆ. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಿ ಅತ್ಯುತ್ತಮ ಫಲಿತಾಂಶ ತಂದುಕೊಡಬೇಕೆಂಬ ಬೇಡಿಕೆ ನಮ್ಮದು. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಮಾ. 19ರಂದು ಹಸ್ತಾಂತರಿಸುವ ಯೋಜನೆಯಿದೆ.
-ಬಿ.ಕೆ.ಧನಂಜಯ ರಾವ್,
ಹಿರಿಯ ನ್ಯಾಯವಾದಿ -ಚೈತ್ರೇಶ್ ಇಳಂತಿಲ