ಕಲಬುರಗಿ: ಇಲ್ಲಿನ ಕಲಬುರಗಿ-ಬೀದರ್- ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಎಮ್ಮೆ ಹಾಲಿಗೆ ರಾಜ್ಯದಲ್ಲೇ ಹೆಚ್ಚಿನ ದರ ನಿಗದಿ ಮಾಡಿದೆ.
ಎಮ್ಮೆ ಹಾಲಿಗೆ ಪ್ರತಿ ಲೀಟರ್ ಗೆ 9.20 ರೂ ಹೆಚ್ಚಿಗೆ ಮಾಡಿ ಒಟ್ಟಾರೆ 45 ರೂ. ಲೀಟರ್ ಹಾಲು ಪಡೆಯಲಾಗುವುದು. ರಾಜ್ಯ ಸರ್ಕಾರದ 5 ರೂ ಪ್ರೋತ್ಸಾಹ ಧನ ಸೇರಿದರೆ ಪ್ರತಿ ಲೀಟರ್ ಗೆ 50 ರೂ ದರ ರೈತನಿಗೆ ದೊರಕುತ್ತದೆ. ಒಟ್ಟಾರೆ ಕೊರತೆ ಹಾಲನ್ನು ನಿಭಾಯಿಸಲು ಅದರಲ್ಲೂ ಎಮ್ಮೆ ಹೈನೋದ್ಯಮಕ್ಕೆ ಉತ್ತೇಜಿಸಲು ಹಾಲಿನ ದರ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಆರ್. ಕೆ. ಪಾಟೀಲ್ ಪತ್ರಿಕಾ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಪ್ರಸ್ತುತ ಹಾಲು ಉತ್ಪಾದಕರ ಒಕ್ಕೂಟದಿಂದ ಸಂಘಗಳಿಗೆ ಪ್ರತಿ ಲೀಟರ್ ಗೆ 36.80 ರೂ. ನೀಡಲಾಗುತ್ತಿದೆ. ಅದೇ ರೀತಿ ಹಾಲು ಉತ್ಪಾದಕರಿಗೆ 35.76 ರೂ ನೀಡಲಾಗುತ್ತಿದ್ದರೆ, ಇದಕ್ಕೆ 9.20 ರೂ ಪ್ರತಿ ಲೀಟರ್ ಗೆ ದರ ಹೆಚ್ಚಿಸಲಾಗಿದೆ. ಒಟ್ಟಾರೆ ಸಂಘಗಳಿವೆ ಲೀಟರ್ 46 ರೂ ದರ ದೊರಕಿದರೆ ಹಾಲು ಉತ್ಪಾದಕರಿಹೆ 45 ರೂ ದರ ದೊರಕಲಿದೆ. ಲೀಟರ್ ಎಮ್ಮೆ ಹಾಲಿಗೆ ಹೆಚ್ಚಿಸಲಾಗಿರುವ 9.20 ರೂ ದರ ಜೂನ್ 11ರಿಂದ ಜಾರಿಗೆ ಬರಲಿದೆ ಎಂದು ವಿವರಣೆ ನೀಡಿದರು.
ಕಲಬುರಗಿ, ಬೀದರ್- ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದಿಂದ 44 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದು, ಕೊರತೆ ಇರುವ. 75 ಸಾವಿರ ಲೀಟರ್ ಹಾಲಿನ ಪೈಕಿ 40 ಸಾವಿರ ಲೀಟರ್ ಹಾಲನ್ನು ಶಿವಮೊಗ್ಗದಿಂದ ತರಿಸಿಕೊಂಡು ಗ್ರಾಹಕರಿಗೆ ಪೂರೈಸಲಾಗುತ್ತಿದೆ. ಎಮ್ಮೆ ಗೆ ಹೆಚ್ವಿನ ದರ ನೀಡುವ ಮುಖಾಂತರ ಇನ್ನಷ್ಟು ಹಾಲಿನ ಉತ್ಪಾದನೆ ಹೆಚ್ವಿಸಲು ಉದ್ದೇಶಿಸಲಾಗಿದೆ. ಈಗ ಕೇವಲ 2500 ಲೀಟರ್ ಎಮ್ಮೆ ಹಾಲು ಉತ್ಪಾದನೆಯಾಗುತ್ತಿದ್ದು, ಇದನ್ನು ಕನಿಷ್ಠ 10 ಸಾವಿರ ಲೀಟರ್ ಹಾಲು ಉತ್ಪಾದಿಸಲು ಗುರಿ ಹೊಂದಲಾಗಿದೆ ಎಂದು ಆರ್.ಕೆ.ಪಾಟೀಲ್ ವಿವರಣೆ ನೀಡಿದರು.
ನಾವು ಗುಣಮಟ್ಟದ ಹಾಲನ್ನೇ ಪಡೆಯುತ್ತಿರುವುದರಿಂದ ಒಕ್ಕೂಟಕ್ಕೆ ಸ್ವಲ್ಪ ಕಡಿಮೆ ಹಾಲು ಪೂರೈಕೆಯಾಗುತ್ತಿದೆ ಎಂದು ಊಹಿಸಲಾಗಿದೆ. ಜತೆಗೆ ನಿಷ್ಕ್ರಿಯ ಹಾಲು ಉತ್ಪಾದಕ ಸಂಘಗಳನ್ನು ರದ್ದು ಗೊಳಿಸಲಾಗಿದೆ. ಆದರೆ ತಾವು ತಿರಸ್ಕರಿಸಿದ ಹಾಲನ್ನು ಖಾಸಗಿ ಯವರು ಪಡೆದು ಅದನ್ನು ಗ್ರಾಹಕರಿಗೆ ಪೂರೈಸಿ ಆರೋಗ್ಯದ ಜತೆ ಚೆಲ್ಲಾಟವಾಡಲಾಗುತ್ತಿದೆ. ಅದರಲ್ಲೂ ಕ್ಯಾನ್ಸರ್ ಗೆ ಆಹ್ವಾನಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಆರ್. ಕೆ. ಪಾಟೀಲ್ ರು, ಫ್ಯಾಟ್ 6.00 ಹಾಗೂ ಎಸ್.ಎನ್.ಎಫ್ 9.00 ಇರಬೇಕು. ಆದರೆ ಭಾರತೀಯ ಆಹಾರ ಸುರಕ್ಷಾ ಪ್ರಾಧಿಕಾರ ಪ್ರಕಾರ ಇದು ಆಹಾರ ಗುಣಮಟ್ಟತೆ ನಿಯಮ ಉಲ್ಲಂಘನೆಯಾಗಿದೆ. ಈ ಕುರಿತು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದರೂ ಖಾಸಗಿ ಹಾಕು ಪೂರೈಕೆದಾರರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:Saroornagar: ಪ್ರೇಯಸಿಯನ್ನು ಕೊಂದು ದೇವಸ್ಥಾನದ ಬಳಿ ಚರಂಡಿಗೆ ಎಸೆದ ಅರ್ಚಕ!
ತಾವು ಅಧ್ಯಕ್ಷರಾದ ನಂತರ ಒಕ್ಕೂಟ ಲಾಭದತ್ತ ದೃಢ ಹೆಜ್ಜೆ ಹಾಕುತ್ತಿದೆ. 2018-19 ಸಾಲಿನಲ್ಲಿ 60 ಲಕ್ಷ ರೂ ಲಾಭ ಹೊಂದಿದ್ದರೆ 2020ರಲ್ಲಿ 14.96 ಲಕ್ಷ ರೂ, 2021ರಲ್ಲಿ 1.82 ಕೋ.ರೂ 2022ರಲ್ಲಿ 53 ಲಕ್ಷ ರೂ ಹಾಗೂ ಪ್ರಸಕ್ತವಾಗಿ 48 ಲಕ್ಷ ರೂ ಲಾಭದತ್ತ ದೃಢ ಹೆಜ್ಜೆ ಹಾಕಿದೆ. ಬಂದ ಲಾಭವನ್ನು ಗ್ರಾಹಕರಿಗೆ ಕೊಡಲಾಗುತ್ತಿದೆ. 10 ಲಕ್ಷ ಹುಲ್ಲಿನ ಕಾಂಡಗಳನ್ನು ವಿತರಿಸಲಾಗಿದೆ. ಅದೇ ರೀತಿ ಮಹಿಳಾ ಹಾಲು ಉತ್ಪಾದಕರ ಸಂಘಗಳಿಗೆ 80 ಲಕ್ಷ ರೂ ಬಡ್ಡಿ ರಹಿತ ಸಾಲ ವಿತರಿಸಲಾಗಿದೆ. ಒಟ್ಟಾರೆ ಒಕ್ಕೂಟದ ವ್ಯಾಪ್ತಿಯಲ್ಲಿ ಕಲಬುರಗಿ 164, ಬೀದರ್ 199 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 15 ಹಾಲು ಉತ್ಪಾದಕರ ಸಂಘಗಳು ಸೇರಿ 378 ಕ್ರಿಯಾಶೀಲವಾಗಿವೆ. ಕಳೆದ ಆರು ತಿಂಗಳಿನಿಂದ ಸರ್ಕಾರದಿಂದ ಹಾಲಿನ ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ ಎಂದು ಆರ್.ಕೆ. ಪಾಟೀಲ್ ಇದೇ ಸಂದರ್ಭದಲ್ಲಿ ತಿಳಿಸಿದರು. ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಈರಣ್ಣ ಝಳಕಿ ಹಾಜರಿದ್ದರು.