ಹೊನ್ನಾಳಿ: ವಿದ್ಯೆಯನ್ನು ಕರಗತ ಮಾಡಿಕೊಂಡವರು ಉನ್ನತ ಸ್ಥಾನ ಗಳಿಸಿಕೊಳ್ಳಲಿಕ್ಕೆ ಸಾಧ್ಯ. ಇದಕ್ಕೆ ತಾಲೂಕಿನ ಯಕ್ಕನಹಳ್ಳಿ ಗ್ರಾಮದ ಯುವಕ ಧ್ಯಾನಚಂದ್ರ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 47 ಹಾಗೂ ರಾಜ್ಯಕ್ಕೆ 4ನೇ ಸ್ಥಾನ ಗಳಿಸಿರುವುದೇ ನಿದರ್ಶನ ಎಂದು ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ ಹೇಳಿದರು.
ಹಿರೇಕಲ್ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಣ್ಣೆತ್ತಿನ ಅಮಾವಾಸ್ಯೆ ಧರ್ಮಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಗಳಿಸಿದ ಯುವಕನ ಸಾಧನೆ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.
ಇಂತಹ ಪ್ರತಿಭೆಗಳು ಹೆಚ್ಚು ಹೊರ ಹೊಮ್ಮಬೇಕಿದೆ ಎಂದು ಹೇಳಿದರು. ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಉತ್ಕಟವಾದ ಆಸಕ್ತಿ ಇರಬೇಕು ಸತತ ಓದು ವ್ಯಕ್ತಿಯ ಭವಿಷ್ಯವನ್ನು ಬದಲಾಯಿಸುತ್ತದೆ. ಐಎಎಸ್ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದು ತೇರ್ಗಡೆ ಹೊಂದಿದ ಯುವಕನನ್ನು ಇತರ ಯುವಕರು ಅನುಸರಿಸಬೇಕಿದೆ ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ರಾಜ್ಯದಲ್ಲಿರುವ ಮಠಗಳು ಧರ್ಮ ಜಾಗೃತೆಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಧಾರ್ಮಿಕ ಕೈಕರ್ಯಗಳನ್ನು ಹಮ್ಮಿಕೊಂಡು ಮನುಕುಲದ ಒಳಿತಿಗಾಗಿ ಶ್ರಮಿಸುತ್ತಿವೆ ಎಂದರು. ಐಎಎಸ್ ಪರೀಕ್ಷೆ ಉತ್ತೀರ್ಣ ಹೊಂದಿದ ಎಚ್. ಎಂ.ಧ್ಯಾನಚಂದ್ರ ಮಾತನಾಡಿ, ಇಷ್ಟಪಟ್ಟು ಓದಿದರೆ ಉತ್ತಮ ಫಲಿತಾಂಶ ಬರುವುದರಲ್ಲಿ ಅನುಮಾನವಿಲ್ಲ ಶ್ರಮ ಹಾಕಿದರೆ ಮಾತ್ರ ಬದುಕು ಹಸನಾಗುತ್ತದೆ ಎಂದು ಹೇಳಿದರು.
ಎಇಇ ಆನಂದಪ್ಪ, ಬಿಇಒ ಜಿ.ಎಸ್.ರಾಜಶೇಖರಪ್ಪ, ಮುಖಂಡ ಬಿ.ಸಿದಪ್ಪ ಮಾತನಾಡಿದರು. ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯಬೆನ್ನೂರುಮಠ, ಆಡಳಿತಾಧಿ ಕಾರಿ ಡಾ| ಜಯಪ್ಪ, ಮುಖಂಡರಾದ ರಾಜಪ್ಪ, ಉಮಾಪತಿ ಹಾಗೂ ಇತರರಿದ್ದರು.