ಚನ್ನರಾಯಪಟ್ಟಣ: ಮೆಡಿಕಲ್, ಐಐಟಿ ಹಾಗೂ ಎಂಜಿನಿಯರಿಂಗ್ ನಂತಹ ಉನ್ನತ ಪದವಿ ಶಿಕ್ಷಣ ಹಣವಂತರಿಗೆ ಮಾತ್ರ ಸೀಮಿತ ಎನ್ನುವ ಕಾಲ ಬದಲಾಗಿದ್ದು, ಬಡಕುಟುಂಬದಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದೊರೆಯುವಂತೆ ಕೇಂದ್ರ ಸರ್ಕಾರ ಮಾಡಿರುವುದು ಶ್ಲಾಘನೀಯ ಎಂದು ನಾಗೇಶ್ ಎಜ್ಯಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಕೆ.ನಾಗೇಶ್ ತಿಳಿಸಿದರು.
ಜ್ಞಾನ ಸಾಗರ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಸವ ಜಯಂತಿ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ದಶಕದ ಹಿಂದೆ ಕೋಟ್ಯಂತರ ರೂ. ವೆಚ್ಚ ಮಾಡಿ ಮೆಡಿಕಲ್ ಪ್ರವೇಶ ಪಡೆಯಲು ಸಾಧ್ಯವಾಗುತ್ತಿರ ಲಿಲ್ಲ. ಆದರೆ ಕಳೆದ ಎರಡ್ಮೂರು ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಪದವಿ ಶಿಕ್ಷಣ ಪಡೆಯುವಂತೆ ಮಾಡಲಾಗಿದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ: ವಿದ್ಯಾರ್ಥಿಗಳು 10ನೇ ತರಗತಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದರೆ ಸಾಲದು ಸಿಇಟಿ, ನೀಟ್, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್‍ಯಾಂಕಿಗ್ ಪಡೆದರೆ ಉಚಿತವಾಗಿ ಪದವಿ ಶಿಕ್ಷಣ ಪಡೆಯಲು ಅನು ಕೂಲವಾಗುತ್ತದೆ. ಹಾಗಾಗಿ ಪಠ್ಯದೊಂದಿಗೆ ಇತರ ಪುಸ್ತಕವನ್ನು ವ್ಯಾಸಂಗ ಮಾಡಬೇಕು. 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಸ್ಪಾರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಶ್ರದ್ಧೆಯಿಂದ ವ್ಯಾಸಂಗ ಮಾಡಿ: ಬಸವಣ್ಣ ನವರ ಕಾಯಕವೇ ಕೈಲಾಸ ಎನ್ನುವುದನ್ನು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ. ಅವರ ಕಾಯಕದಲ್ಲಿ ನಿಷ್ಠೆ ತೋರದಿದ್ದರೆ ಉತ್ತಮ ಫಲಿತಾಂಶ ಬರುವುದಿಲ್ಲ. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿ ತಮ್ಮ ಜೀವನ ಬದಲಾವಣೆಗೆ ಹಾತೊರೆಯುತ್ತಾರೆ ಇದನ್ನು ಈಡೇರಿಸಲು ಪೋಷಕರು ಮುಂದಾಗ ಬೇಕು. ಪಿಯುಸಿ ವ್ಯಾಸಂಗದ ವೇಳೆ ತಮ್ಮ ಮಕ್ಕಳ ಮೇಲೆ ನಿಗಾ ವಹಿಸುವುದು ಸೂಕ್ತ ಎಂದರು.
ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಭಾರತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಗೆ ಹೆಚ್ಚು ಫಲಿತಾಂಶ ಲಭಿಸಲು ಪೋಷಕರ ಪಾತ್ರವೂ ಮುಖ್ಯವಾಗಿದೆ ಎಂದು ಹೇಳಿದರು.
ಸಂಸ್ಥೆ ಡೀನ್ ಸುಜಾಫಿಲಾ ಮಾತನಾಡಿ. ತಾಲೂಕಿಗೆ ಸಿಬಿಎಸ್‌ಸಿ 10ನೇ ತರಗತಿ ವಿಭಾಗದಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ನಮ್ಮ ಸಂಸ್ಥೆ ಪಡೆದಿದೆ ಎಂದರು.