Advertisement

ಸ್ತಬ್ಧಚಿತ್ರದ ಮೂಲಕವೂ ಉನ್ನತ ಶಿಕ್ಷಣ ಜಾಗೃತಿ

11:28 AM Sep 18, 2018 | Team Udayavani |

ಮೈಸೂರು: ನಾಡಹಬ್ಬ ದಸರಾ ವೇಳೆ ನಡೆಯುವ ವಿವಿಧ ಕಾರ್ಯಕ್ರಮಗಳ ಜತೆಗೆ ಸಾರ್ವಜನಿಕರಿಗೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ಈ ಬಾರಿ ವಿವಿಧ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು. 

Advertisement

ದಸರಾ ಮಹೋತ್ಸವದ ಅಂಗವಾಗಿ ವಸ್ತು ಪ್ರದರ್ಶನದಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನ ನಡೆಸುವ ಕುರಿತು  ಮೈಸೂರು ವಿವಿ ಕ್ರಾಫ‌ರ್ಡ್‌ ಭವನದಲ್ಲಿ ರಾಜ್ಯದ ವಿವಿಧ ವಿವಿಗಳ ಕುಲಪತಿಯೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಉನ್ನತ ಶಿಕ್ಷಣ ಮಾಹಿತಿ: ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸೇರಿದ 19 ವಿವಿಗಳ ಜತೆಗೆ ಸಾಕಷ್ಟು ಖಾಸಗಿ ವಿವಿಗಳಿವೆ. ಆದ್ದರಿಂದ ದಸರಾ ಕಾರ್ಯಕ್ರಮಗಳ ಜತೆಗೆ ಉನ್ನತ ಶಿಕ್ಷಣ ಇಲಾಖೆ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕಾರ್ಯಕ್ರಮಗಳು, ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಇದಕ್ಕಾಗಿ ದಸರಾ ವಸ್ತುಪ್ರದರ್ಶನದಲ್ಲಿ ಮಳಿಗೆಯನ್ನು ತೆರೆಯಲು ಹಾಗೂ ಜಂಬೂಸವಾರಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರದ ಮೂಲಕವೂ ಉನ್ನತ ಶಿಕ್ಷಣದ ಬಗ್ಗೆ ಜನರಿಗೆ ಮಾಹಿತಿ ನೀಡಲು ತೀರ್ಮಾನಿಸಲಾಗಿದೆ ಎಂದರು. ಅಲ್ಲದೆ ಪ್ರತಿ ವಿವಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಪರಿಣಿತಿ ಪಡೆದಿರುವಂತಹ ತಂಡಗಳನ್ನು ಆಯ್ಕೆ ಮಾಡಿ ಕಳುಹಿಸುವಂತೆಯೂ ತಿಳಿಸಲಾಗಿದೆ.

ಇವರಿಗೆ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಯ ವಿದ್ಯಾರ್ಥಿಗಳ ಜತೆಗೆ ಹೊರ ಜಿಲ್ಲೆಯ ಪ್ರತಿಭಾವಂತರಿಗೂ ಅವಕಾಶ ಕಲ್ಪಿಸಲಾಗುವುದು. ದಸರೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳ ಭಾಗವಹಿಸಲು ಅವಕಾಶ ನೀಡುವುದು ಇದರ ಉದ್ದೇಶ ಎಂದು ತಿಳಿಸಿದರು.

Advertisement

ಮೊಬೈಲ್‌ ಅಪ್ಲಿಕೇಷನ್‌: ದಸರಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಮೊಬೈಲ್‌ ಅಪ್ಲಿಕೇಷನ್‌ ಸಿದ್ಧಪಡಿಸಲಾಗುತ್ತಿದೆ. ಇದರ ಜತೆಗೆ ಉನ್ನತ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕೈಗೊಳ್ಳುತ್ತಿರುವ ಕಾರ್ಯಕ್ರಮ, ಯೋಜನೆ ಇನ್ನಿತರ ಕಾರ್ಯಕ್ರಮಗಳ ಬಗ್ಗೆಯೂ ಮೊಬೈಲ್‌ ಆಪ್‌ನಲ್ಲಿ ಮಾಹಿತಿ ನೀಡಲಾಗುತ್ತದೆ.

ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಸ್ಥಾನಮಾನ ಪಡೆದಿರುವ ಮೈಸೂರಿಗೆ ದೇಶದ ವಿವಿಧ ರಾಜ್ಯಗಳ ಜತೆಗೆ ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯಲು ಇದರಿಂದ ಅನುಕೂಲವಾಗಲಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರವೇಶಾತಿ, ಫ‌ಲಿತಾಂಶ ಇನ್ನಿತರ ವಿಷಯದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು. 

ಸಭೆಯಲ್ಲಿ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಟಿ.ಕೆ.ಉಮೇಶ್‌, ಕುಲಸಚಿವರಾದ ಪ್ರೊ.ಆರ್‌. ರಾಜಣ್ಣ, ಪ್ರೊ.ಜೆ.ಸೋಮಶೇಖರ್‌ ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಹಾಜರಿದ್ದರು.

ಸಿಂಡಿಕೇಟ್‌ಗೆ ಪರಿಣಿತರ ನೇಮಕ: ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್‌ ಅತ್ಯಂತ ಪ್ರಮುಖವಾಗಿದ್ದು, ಸಾಕಷ್ಟು ನಿರ್ಣಾಯಕ ತೀರ್ಮಾನಗಳನ್ನು ಸಿಂಡಿಕೇಟ್‌ಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಸಿಂಡಿಕೇಟ್‌ಗಳಲ್ಲಿ ಪರಿಣಾಮಕಾರಿ ನಿರ್ಣಯಗಳನ್ನು ಕೈಗೊಳ್ಳುವವರು ಹೆಚ್ಚಾಗಿರಬೇಕಿದೆ.

ರಾಜ್ಯದಲ್ಲಿ ಮೌಲಾಧ್ಯಾರಿತ, ಗುಣಾತ್ಮಕ ಹಾಗೂ ಉದ್ಯೋಗಾಧಾರಿತ ಶಿಕ್ಷಣ ನೀಡುವ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ತರಬೇಕೆಂಬ ಚಿಂತನೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಗಳಲ್ಲಿ ವೃತ್ತಿಪರ ಶಿಕ್ಷಣ ತಜ್ಞರುಗಳನ್ನೇ ಸಿಂಡಿಕೇಟ್‌ ಸದಸ್ಯರನ್ನಾಗಿ ನೇಮಿಸಬೇಕಿದ್ದು, ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರು ವಿವಿಗೆ ಕಾಯಂ ಕುಲಪತಿ ನೇಮಿಸುವ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕಾಗಿ ಎಲ್ಲಾ ಪ್ರಕ್ರಿಯೆಗಳು ಈಗಾಗಲೇ ನಡೆದಿದ್ದು, ಈ ತಿಂಗಳ ಅಂತ್ಯದಲ್ಲಿ ಕಾಯಂ ಕುಲಪತಿ ನೇಮಕವಾಗಲಿದೆ. ಮುಕ್ತ ವಿವಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ನಡೆಸಲಾಗುವುದು.
-ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಖಾತೆ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next