Advertisement

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಸ್ವಾತಂತ್ರ್ಯ-ಸ್ವಾಯತ್ತತೆ

06:18 PM Mar 11, 2022 | Team Udayavani |

ಧಾರವಾಡ: ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಸ್ವಾತಂತ್ರ್ಯ-ಸ್ವಾಯತ್ತತೆ ಕಲ್ಪಿಸಲು ಶಾಸನಾತ್ಮಕ, ಆಡಳಿತಾತ್ಮಕ ಸುಧಾರಣೆ ತರಲು ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಕ್ರಮ ವಹಿಸಲಾಗುವುದು ಎಂದು ಉನ್ನತ ಶಿಕ್ಷಣ, ತಂತ್ರಜ್ಞಾನ, ವಿದ್ಯುನ್ಮಾನ, ಐಟಿ-ಬಿಟಿ, ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಖಾತೆ ಸಚಿವ ಡಾ|ಅಶ್ವತ್ಥನಾರಾಯಣ ಸಿ.ಎನ್‌. ಹೇಳಿದರು.

Advertisement

ಇಲ್ಲಿನ ಹೊಯ್ಸಳ ನಗರದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ವಸತಿ ನಿಲಯ, ಕನ್ನಡ ಪ್ರಾಧ್ಯಾಪಕರ ನಿರಂತರ ಸಮಗ್ರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

21ನೇ ಶತಮಾನವು ಜ್ಞಾನ, ತಂತ್ರಜ್ಞಾನ, ವಿಜ್ಞಾನ, ಆವಿಷ್ಕಾರಗಳ ಕಾಲಘಟ್ಟವಾಗಿದೆ. ಉನ್ನತ ಶಿಕ್ಷಣ ಅಕಾಡೆಮಿ ಈ ನಿಟ್ಟಿನಲ್ಲಿ ಭರವಸೆದಾಯಕ ಹೆಜ್ಜೆಗಳನ್ನು ಇಡುತ್ತಿದೆ. ಪ್ರತಿನಿತ್ಯ ತರಬೇತಿಗಳ ಮೂಲಕ ಇಲ್ಲಿ ಪರಸ್ಪರ ಜ್ಞಾನ ವಿನಿಮಯವಾಗುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ, ಸ್ವಾಯತ್ತತೆ ನೀಡಲು ಶಾಸನಾತ್ಮಕ, ಆಡಳಿತಾತ್ಮಕ ಸುಧಾರಣೆ ತರಲಾಗುವುದು ಎಂದರು.

ಧಾರವಾಡದಲ್ಲಿ ಸ್ಥಾಪನೆಯಾಗಿರುವ ಉನ್ನತ ಶಿಕ್ಷಣ ಅಕಾಡೆಮಿ ದೇಶದ ಉತ್ಕೃಷ್ಟ ಮಟ್ಟದ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಉನ್ನತ ಶಿಕ್ಷಣ ಅಕಾಡೆಮಿ ಭರವಸೆದಾಯಕ ಸಂಸ್ಥೆಯಾಗಿದೆ. ಗುಣಮಟ್ಟದ ಶಿಕ್ಷಣ ಒದಗಿಸುವುದು, ಈಗಿರುವ ಪದ್ಧತಿಗಳಲ್ಲಿನ ಕೆಲವು ನ್ಯೂನತೆಗಳನ್ನು  ಸರಿಪಡಿಸಲು ಇಂತಹ ಸಂಸ್ಥೆಗಳು ಅಗತ್ಯ. ಜಾಗತೀಕರಣದ ಈ ಯುಗದಲ್ಲಿ ವಿಶ್ವದ ಜತೆಗೆ ಸ್ಪರ್ಧಿಸಲು ದೇಶ ಹಾಗೂ ರಾಜ್ಯಗಳು ಜಾಗತಿಕಮಟ್ಟದ ಶಿಕ್ಷಣ ಪದ್ಧತಿ ಅನುಸರಿಸಬೇಕು ಎಂದರು.

ಶಿಕ್ಷಣದ ಗುಣಮಟ್ಟ ಹೆಚ್ಚಿದರೆ ಬದುಕಿಗೆ ಸಾರ್ಥಕತೆ ಬರುತ್ತದೆ. ಬದಲಾದ ಪರಿಸ್ಥಿತಿಯಲ್ಲಿ ಭಾರತ ಹಾಗೂ ಕರ್ನಾಟಕಕ್ಕೆ ವಿಪುಲ ಅವಕಾಶಗಳಿವೆ. ಉನ್ನತ ಶಿಕ್ಷಣದಲ್ಲಿ ದೇಶಕ್ಕೆ ನಾಯಕತ್ವ ನೀಡುವ ಸಾಮರ್ಥ್ಯವನ್ನು ಈ ಸಂಸ್ಥೆ ಗಳಿಸಿಕೊಳ್ಳಲಿ. ಸರ್ಕಾರ ಎಲ್ಲ ಸಹಕಾರ ನೀಡಲಿದೆ ಎಂದರು.

Advertisement

ರಾಷ್ಟ್ರೀಯ ಶಿಕ್ಷಣ ನೀತಿ ಆರೋಗ್ಯ-ಸದೃಢತೆಗೆ ಆದ್ಯತೆ ನೀಡಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಖಾಸಗಿ ಸಂಸ್ಥೆಗಳಿಗಿಂತಲೂ ಉತ್ತಮಗೊಳ್ಳುತ್ತಿವೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ವಿಶ್ವವಿದ್ಯಾಲಯಗಳ ಮಟ್ಟದ ಶಿಕ್ಷಣ ನೀಡುವ ಸಾಮರ್ಥ್ಯ ಹೊಂದಿವೆ. ತಂತ್ರಜ್ಞಾನ ಅಳವಡಿಕೆಯಿಂದ ಇನ್ನಷ್ಟು ಉತ್ತಮಗೊಳ್ಳಲು ಸಾಧ್ಯ ಎಂದರು.

ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ|ಎಸ್‌.ಎಂ ಶಿವಪ್ರಸಾದ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಕಾಡೆಮಿ ಡೀನ್‌ ಡಾ|ಅರುಂಧತಿ ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ಮತ್ತು ಸದೃಢತೆ ಕುರಿತ ಯೋಜನಾ ವರದಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ “ಪ್ರಬೋಧನ’ ಇ-ಮ್ಯಾಗಜಿನ್‌ ಸಚಿವರಿಂದ ಬಿಡುಗಡೆಗೊಂಡಿತು. ಡಾ|ದೀಪಾ ಗರಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರದ ವರದಿ ನೀಡಿದರು. ಡಾ|ಮಲ್ಲಿಕಾರ್ಜುನ ಮೂಲಿಮನಿ, ಪ್ರೊ|ಸಾತಿಹಾಳ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next