ಕೋಲಾರ: ಹೈಕೋರ್ಟ್‌ನಿಂದ ಫಲಿತಾಂಶಕ್ಕೆ ತಡೆ ಹಿನ್ನೆಲೆಯಲ್ಲಿ ಭಾನುವಾರ ಕೋಲಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸುಸೂತ್ರವಾಗಿ ನಡೆಯಿತು. ಒಟ್ಟು 35 ಸದಸ್ಯರು, ಶಾಸಕ, ಸಂಸದ,ವಿಧಾನಪರಿಷತ್ ಸದಸ್ಯ ಸೇರಿ 38 ಸದಸ್ಯ ಬಲದ ನಗರಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಹತ್ತು ಮಂದಿ ಗೈರು ಹಾಜರಾಗಿದ್ದು, 28 ಸದಸ್ಯ ಬಲದೊಂದಿಗೆ ಚುನಾವಣಾ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಕಡೆಯಿಂದ ಶ್ವೇತಾ ಶಬರೀಶ್, ಉಪಾಧ್ಯಕ್ಷ ಸ್ಥಾನಕ್ಕೆ ಪ್ರವೀಣ್‌ಗೌಡ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಅಜ್ರನಸ್ರಿನ್, ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು.
ಮ್ಯಾಜಿಕ್ ಸಂಖ್ಯೆ 15: ಚುನಾವಣೆಗೂ ಮುನ್ನ ಯಾರಿಗೂ ಬಹುಮತವಿರಲಿಲ್ಲ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಗೆಲ್ಲಲು ಒಟ್ಟು 38 ಸದಸ್ಯರ ಪೈಕಿಕನಿಷ್ಠ 20 ಸದಸ್ಯರ ಬೆಂಬಲ ಪಡೆಯುವ ಅಗತ್ಯವಿತ್ತು. ಆದರೆ, ಚುನಾವಣಾ ಪ್ರಕ್ರಿಯೆಗೆ ಹಾಜರಾದವರ ಸಂಖ್ಯೆ ಕೇವಲ 28 ಆಗಿದ್ದರಿಂದ ಗೆಲುವಿನ ಮ್ಯಾಜಿಕ್ ಸಂಖ್ಯೆ 15 ಕ್ಕೆ ಕುಸಿಯುವಂತಾಗಿತ್ತು.
ಚುನಾವಣೆಗೂ ಮುನ್ನ ಕಾಂಗ್ರೆಸ್ 12, ಜೆಡಿಎಸ್ 8, ಬಿಜೆಪಿ 3, ಎಸ್‌ಡಿಪಿಐ 4 ಮತ್ತು ಪಕ್ಷೇತರರು 8 ಮಂದಿ ಸದಸ್ಯ ಬಲ ಹೊಂದಿದ್ದರು. ಇವರೊಂದಿಗೆ ಶಾಸಕ ಕೆ.ಶ್ರೀನಿವಾಸಗೌಡ, ಸಂಸದ ಎಸ್. ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರಿಗೂ ಮತದಾನದ ಹಕ್ಕಿತ್ತು.
ಸಂಸದ ಗೈರು: ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ 12 ಸದಸ್ಯರ ಪೈಕಿ 7 ಮಂದಿ ಹಾಜರಾಗಿ 5 ಮಂದಿ ಗೈರು ಹಾಜರಾಗಿದ್ದರು. ಜೆಡಿಎಸ್‌ನ 8 ಮಂದಿ ಹಾಜರಾತಿ ತೋರಿದ್ದರು. ಬಿಜೆಪಿಯ 3 ಸದಸ್ಯರ ಪೈಕಿ ಒಬ್ಬರು ಮತದಾನದಲ್ಲಿ ಪಾಲ್ಗೊಂಡಿದ್ದರು. ಶಾಸಕ ಕೆ.ಶ್ರೀನಿವಾಸಗೌಡ, ವಿಧಾನಪರಿಷತ್ ಸದಸ್ಯ ಗೋವಿಂದರಾಜು ಹಾಜರಾಗಿದ್ದರೆ, ಸಂಸದ ಎಸ್.ಮುನಿಸ್ವಾಮಿ ಗೈರು ಹಾಜರಾಗಿದ್ದರು. ಬಿಜೆಪಿಯ ಮೂವರು ಸದಸ್ಯರ ಪೈಕಿ ಹತ್ತನೇ ವಾರ್ಡ್‌ನ ರಂಗಮ್ಮ ಮಾತ್ರವೇ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಸಂಸದ ಎಸ್.ಮುನಿಸ್ವಾಮಿ ಎಸ್‌ಡಿಪಿಐ ಬೆಂಬಲಿಸುವ ಪಕ್ಷದ ಅಭ್ಯರ್ಥಿಗಳಿಗೆ ತಮ್ಮ ಪಕ್ಷ ಬೆಂಬಲ ನೀಡುವುದಿಲ್ಲವೆಂದು ಘೋಷಿಸಿದ್ದರು. ಇನ್ನಿಬ್ಬರು ಬಿಜೆಪಿ ಸದಸ್ಯರು ಚುನಾವಣೆ ಪ್ರಕ್ರಿಯೆಯಿಂದ ಹೊರಗಿದ್ದರು. ಎಸ್‌ಡಿಪಿಐ ನಾಲ್ಕು ಸದಸ್ಯ ಬಲವನ್ನು ಹೊಂದಿತ್ತಾದರೂ, ಇಲ್ಲೂ ಒಡಕುಂಟಾಗಿ ಕೇವಲ ಇಬ್ಬರು ಸದಸ್ಯರು ಮಾತ್ರವೇ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಚುನಾವಣಾ ಪ್ರಕ್ರಿಯೆಗೂ ಮುನ್ನ ಜೆಡಿಎಸ್ ಹೊರತುಪಡಿಸಿ ಬೇರಾವುದೇ ಪಕ್ಷವು ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿದ್ದು, ಕೋಲಾರ ನಗರಸಭೆ ಚುನಾವಣಾ ಹಾಜರಾತಿಯ ಮೂಲಕ ಬಹಿರಂಗವಾಯಿತು.
ಚುನಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಸೋಮಶೇಖರ್ ಕಾರ್ಯನಿರ್ವಹಿಸಿದ್ದು, ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಿರ್ವಹಿ ಸಲಾಗಿದ್ದು, ಫಲಿತಾಂಶವನ್ನು ಹೈಕೋರ್ಟ್ ಸೂಚನೆ ಮೇರೆಗೆ ತಡೆ ಹಿಡಿಯಲಾಗಿದೆ ಎಂದು ಘೋಷಿಸಿದರು.
ಪೊಲೀಸ್ ಬಂದೋಬಸ್ತ್: ಹೈಕೋರ್ಟ್ ಆದೇಶದ ಹಿನ್ನೆಲೆ ಫಲಿತಾಂಶಕ್ಕೆ ತಡೆ ಇರುವುದರ ನಡುವೆಯೂ ಚುನಾವಣೆ ನಡೆಸಲು ಅನುಮತಿ ಸಿಕ್ಕಿದ್ದರಿಂದಾಗಿ ಪೊಲೀಸರು ಬಿಗಿ ಬಂದೋಬಸ್ತ್ ನಡೆಸಿದರು. ಅಪರ ಎಸ್ಪಿ ಜಾಹ್ನವಿ ನೇತೃತ್ವದಲ್ಲಿ ಪೊಲೀಸರ ಸರ್ಪಗಾವಲು ಹಾಕಿದ್ದು, ನಗರಸಭಾ ಸದಸ್ಯರು, ಸಿಬ್ಬಂದಿ ಹೊರತುಪಡಿಸಿ ಯಾರನ್ನು ಒಳಗೆ ಬಿಡಲಿಲ್ಲ.
ಉಚ್ಚಾಟನೆ ಸೂಚನೆ : ಕಾಂಗ್ರೆಸ್‌ನ 31 ನೇ ವಾರ್ಡ್‌ನ ಅಪ್ಸರ್, 33 ನೇ ವಾರ್ಡ್‌ನ ನಾಜಿಯಾ ಕೋಂ ಬಾಬಾ ಜಾನ್, 34ನೇ ವಾರ್ಡ್‌ನ ಮುಬೀನ್‌ತಾಜ್ ಕೋಂ ಶಫಿ ಇವರು ವಿಪ್ ಉಲ್ಲಂಘಿಸಿ ಅನಧಿಕೃತವಾಗಿ ಗೈರು ಹಾಜರಾಗಿದ್ದರಿಂದ ಪಕ್ಷದಿಂದ ಉಚ್ಛಾಟನೆ ಮಾಡಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ತಿಳಿಸಿದ್ದಾರೆ.
ಪ್ರಸಾದ್ ಬಾಬು ಗೈರು : ಕಾಂಗ್ರೆಸ್‌ನ 26 ನೇ ವಾರ್ಡ್‌ನ ಸದಸ್ಯೆ ಭಾಗ್ಯಮ್ಮ ಮೀಸಲಾತಿ ನಿಗದಿ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಮತ್ತೂಬ್ಬ ಸದಸ್ಯ ಪ್ರಸಾದ್ ಬಾಬು ಆಸ್ಪತ್ರೆಗೆ ದಾಖಲಾಗಿರುವುದರಿಂದ ಚುನಾವಣೆಗೆ ಗೈರು ಹಾಜರಾಗಿದ್ದರು.