ಬೆಂಗಳೂರು: ಬಿಬಿಎಂಪಿ ಕೋವಿಡ್ ವಾರ್ ರೂಮ್‌ನಲ್ಲಿ ನಡೆದಿರುವ ಬೆಡ್ ಬ್ಲಾಕಿಂಗ್ ದಂಧೆಯ ಕುರಿತು ಮುಂದಿನ ವಾರ ಮುಚ್ಚಿದ ಲಕೋಟೆಯಲ್ಲಿ ತನಿಖಾ ಪ್ರಗತಿ ವರದಿ ಸಲ್ಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೋವಿಡ್-19 ನಿಯಂತ್ರಣ ಕುರಿತಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ| ಎ.ಎಸ್. ಓಕ್ ಮತ್ತು ನ್ಯಾ| ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರೊಬ್ಬರ ವಕೀಲರಾದ ಜಿ.ಆರ್. ಮೋಹನ್ ಅವರು ಬೆಡ್ ಬ್ಲಾಕಿಂಗ್ ಪ್ರಕರಣದ ಕುರಿತು ಜಯನಗರದಲ್ಲಿ ಕೇಸು ದಾಖಲಾಗಿರುವುದು ಹಾಗೂ ಇಬ್ಬರನ್ನು ಬಂಧಿಸಿರುವ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೂ ಮೊದಲು ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ ಅವರನ್ನು ಸದ್ಯಕ್ಕೆ ಬೆಂಗಳೂರಿನಲ್ಲಿ ಎಷ್ಟು ಹಾಸಿಗೆಗಳು ಲಭ್ಯವಿವೆ ಎಂದು ನ್ಯಾಯಪೀಠ ಕೇಳಿತು. ಅದಕ್ಕೆ ಉತ್ತರಿಸಿದ ಅವರು 1,749 ಸಾಮಾನ್ಯ ಹಾಸಿಗೆ, 212 ಎಚ್ ಡಿಯು, 148 ಐಸಿಯು, 29 ವೆಂಟಿಲೇಟರ್ ಸಹಿತ ಐಸಿಯು ಬೆಡ್‌ಗಳು ಇವೆ. ಜತೆಗೆ 310 ಆಕ್ಸಿಜನ್ ಸಹಿತ ಹಾಸಿಗೆಗಳನ್ನು ಹೊಸದಾಗಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದರು.
ಸಾಫ್ಟ್ವೇರ್ ಅಭಿವೃದ್ಧಿಗೆ ತಾಂತ್ರಿಕ ಸಮಿತಿ ರಚನೆ :
ಕಳೆದ ವರ್ಷ ಅಭಿವೃದ್ಧಿಪಡಿಸಿರುವ ಸಾಫ್ಟ್ವೇರ್‌ನಲ್ಲೇ ಬೆಡ್ ಬ್ಲಾಕಿಂಗ್ ಮಾಡಲಾಗುತ್ತಿದೆ. ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಅಗತ್ಯವಿದ್ದು, ಇದಕ್ಕಾಗಿ ಪೊನ್ನುರಾಜ್ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.