Advertisement

ಪಿಎಸ್‌ಐ ನೇಮಕ ಅಕ್ರಮ: ಸಮರ್ಪಕ ತನಿಖೆ ನಡೆಸಿ ಗೌರವ ಉಳಿಸಿ: ಸಿಐಡಿಗೆ ಸೂಚನೆ; ಹೈಕೋರ್ಟ್‌

10:40 PM Jun 30, 2022 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕ ಹಗರಣಕ್ಕೆ ಸಂಬಂಧಿಸಿ ಸಮಪರ್ಕಕ ತನಿಖೆ ನಡೆಸುವ ಮೂಲಕ ಪೊಲೀಸ್‌ ಇಲಾಖೆಯ ಗೌರವ ಉಳಿಸಿ ಎಂದು ಹೈಕೋರ್ಟ್‌ ಹೇಳಿದೆ.

Advertisement

ಪ್ರಕರಣದಲ್ಲಿ ಆರೋಪಿಗಳಾದ ಹಾಸನದ ಸಿ.ಎನ್‌.ಶಶಿಧರ್‌ ಮತ್ತು ಮಂಡ್ಯದ ಆರ್‌.ಶರತ್‌ ಕುಮಾರ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ| ಎಚ್‌.ಪಿ. ಸಂದೇಶ್‌ ಅವರಿದ್ದ  ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.ನ್ಯಾಯಾಲಯದ ನಿರ್ದೇಶನದಂತೆ ಸಿಐಡಿ ಡಿಜಿಪಿ ಪಿ.ಎಸ್‌. ಸಂಧು ವಿಚಾರಣೆಗೆ ಹಾಜರಾಗಿದ್ದರು ಮತ್ತು ತನಿಖೆಯ ಪ್ರಗತಿ ಕುರಿತು ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸಿದರು.

ಈ ವೇಳೆ ನ್ಯಾಯಮೂರ್ತಿಗಳು, ಪಿಎಸ್‌ಐ ನೇಮಕ ಹಗರಣದಲ್ಲಿ ಪೊಲೀಸರು, ಗಣ್ಯರು ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ಮೇಲೆ ಆರೋಪಗಳಿವೆ. ಇದರಲ್ಲಿ ಪೊಲೀಸ್‌ ಅಧಿಕಾರಿಗಳೂ ಮಧ್ಯವರ್ತಿಗಳಿದ್ದಾರೆ. ಹಾಗಾಗಿ ಪ್ರತಿಯೊಂದು ಅಂಶದ ಬಗ್ಗೆಯೂ ಸಮರ್ಪಕ ತನಿಖೆ ನಡೆಯುವ ಆವಶ್ಯಕತೆಯಿದೆ. ನಿಮ್ಮ ಇಲಾಖೆಯ ಗೌರವ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಕೋರ್ಟ್‌ ಪ್ರಕರಣದ ತನಿಖೆಯ ಮೇಲೆ ಸಂಪೂರ್ಣ ನಿಗಾ ವಹಿಸಲಿದೆ ಎಂದು ಸಿಐಡಿ ಡಿಜಿ ಪಿ.ಎಸ್‌. ಸಂಧು ಅವರಿಗೆ ಸೂಚಿಸಿದರು.

ಅಲ್ಲದೆ, ಪಿಎಸ್‌ಐ ನೇಮಕದಲ್ಲೇ ಭ್ರಷ್ಟಾಚಾರ ಗಂಭೀರ ವಿಚಾರ, ಸಮರ್ಪಕ ತನಿಖೆ ನಡೆಸಿ ಸತ್ಯಸಂಗತಿಯನ್ನು ಹೊರಹಾಕಬೇಕು. ಇದರ ಹಿಂದೆ ಯಾರೇ ಸಚಿವರಾಗಿರಲೀ, ಯಾವುದೇ ಅಧಿಕಾರಿಗಳಾಗಿರಲೀ, ಯಾವುದೇ ಪ್ರಭಾವಿ ವ್ಯಕ್ತಿಗಳಾಗಲಿ ಅಂತಹವರು ಭಾಗಿಯಾಗಿದ್ದರೆ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸಿಐಡಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜು. 7ಕ್ಕೆ ಮುಂದೂಡಿತು.

ಪ್ರಕರಣದಲ್ಲಿ ತಮ್ಮನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ. ಆದ್ದರಿಂದ ಜಾಮೀನು ನೀಡಬೇಕು ಎಂದು ಅರ್ಜಿದಾರ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಪ್ರಕರಣದ ಹಿನ್ನೆಲೆ:

545 ಪಿಎಸ್‌ಐ ಹುದ್ದೆಗಳ ನೇಮಕ ಅಕ್ರಮ ಹಗರಣದಲ್ಲಿ ಭಾಗಿಯಾದ ಆರೋಪ ಸಂಬಂಧ ಸಿಐಡಿ ಪೊಲೀಸ್‌ ಅಧಿಕಾರಿ ಪಿ.ನರಸಿಂಹಮೂರ್ತಿ ನೀಡಿದ ದೂರು ಆಧರಿಸಿ ಹೈಗ್ರೌಂಡ್ಸ್‌ ಠಾಣಾ ಪೊಲೀಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ಹಲವರ ವಿರುದ್ಧ 2022ರ ಎ.9ರಂದು ಎಫ್‌ಐಆರ್‌ ದಾಖಲಿಸಿದ್ದರು. ಅನಂತರ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಎ.30ರಂದು ಮತ್ತೂಂದು ಎಫ್‌ಐಆರ್‌ ದಾಖಲಿಸಿದ್ದರು. ಚನ್ನರಾಯಪಟ್ಟಣ ಪುರಸಭೆಯ ಜೆಡಿಎಸ್‌ ಸದಸ್ಯರಾಗಿರುವ ಶಶಿಧರ್‌ ಅವರನ್ನು ಸಿಐಡಿ ಪೊಲೀಸರು ಮೇ 12ರಂದು ಬಂಧಿಸಿದ್ದರು. ಅದೇ ಪ್ರಕರಣದಲ್ಲಿ ಶರತ್‌ ಕುಮಾರ್‌ ಕೂಡ ಬಂಧನಕ್ಕೆ ಒಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next